ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಕೊಟ್ಟಿದೆ. ಇದರಿಂದ ಸ್ಟಾರ್ ಹೀರೋಗೆ ತೊಂದರೆ ಎದುರಾಗಿದೆ. ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ (Sai Surya Developers and Surana Group) ಪ್ರಕರಣದಲ್ಲಿ ಏಪ್ರಿಲ್ 28 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಪ್ರಮೋಷನ್ ಅಡಿಯಲ್ಲಿ ಮಹೇಶ್ ಬಾಬು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ನಿಂದ ಐದು ಕೋಟಿಗೂ ಹೆಚ್ಚು ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಏಪ್ರಿಲ್ 16 ರಂದು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಮೇಲೆ ಇಡಿ ದಾಳಿ ಮಾಡಿತ್ತು. ಕಂಪನಿಗಳ ಕಚೇರಿ ಹಾಗೂ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿತ್ತು. ಅದಾದ ನಂತರ ಈ ಬೆಳವಣಿಗೆ ನಡೆದಿದೆ.
ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮಹೇಶ್ ಬಾಬುಗೆ ಏಪ್ರಿಲ್ 28 ರಂದು ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಜಾಹೀರಾತಿಗಾಗಿ ಮಹೇಶ್ ಬಾಬು ಒಟ್ಟು 5 ಕೋಟಿ 90 ಲಕ್ಷ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ ಮಹೇಶ್ ಬಾಬು 3.4 ಕೋಟಿ ರೂಪಾಯಿ ಚೆಕ್ ಮತ್ತು 2.5 ಕೋಟಿ ರೂಪಾಯಿ ನಗದು ಪಡೆದಿರುವುದು ಪತ್ತೆಯಾಗಿದೆ.
ಸಾಯಿ ಸೂರ್ಯ ಡೆವಲಪರ್ ಎಂಡಿ ಸತೀಶ್ ಚಂದ್ರ ಮನೆಯಲ್ಲಿ ದೊರೆತ ದಾಖಲೆಯ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು.