ಬೆಂಗಳೂರಲ್ಲಿ ಮಹೇಶ್ ಬಾಬು ಒಡೆತನದ ಥಿಯೇಟರ್‌ ಓಪನ್

Untitled design 2026 01 15T115150.718

ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಬೆಂಗಳೂರಿನ ಸಿನಿರಸಿಕರಿಗೆ ಮತ್ತೊಂದು ದೊಡ್ಡ ಉಡುಗೊರೆ ಸಿಕ್ಕಿದೆ. ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್, ‘ಟಾಲಿವುಡ್ ಪ್ರಿನ್ಸ್’ ಮಹೇಶ್ ಬಾಬು ಒಡೆತನದ ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ‘AMB ಸಿನಿಮಾಸ್ ಕಪಾಲಿ’ ಜನವರಿ 16ರಿಂದ ಅಧಿಕೃತವಾಗಿ ಸಿನಿಮಾ ಪ್ರದರ್ಶನ ಆರಂಭಿಸಲಿದೆ. ಗಾಂಧಿನಗರದ ಸುಬೇದಾರ್ ಛತ್ರಂ ರಸ್ತೆಯಲ್ಲಿ, ಐತಿಹಾಸಿಕ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲೇ ಈ ಹೊಸ ಚಿತ್ರಮಂದಿರ ಎದ್ದು ನಿಂತಿದೆ.

ಒಂದೆ ಕಾಲದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಚಿತ್ರಮಂದಿರ ಎಂಬ ಖ್ಯಾತಿ ಪಡೆದಿದ್ದ ಕಪಾಲಿ, 2017ರಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿತ್ತು. ಬಳಿಕ ಆ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ, ಹಳೆಯ ನೆನಪುಗಳಿಗೆ ಗೌರವ ಸಲ್ಲಿಸುವಂತೆ, ಆದರೆ ಹೊಸ ತಂತ್ರಜ್ಞಾನ ಮತ್ತು ಐಷಾರಾಮಿ ಸೌಲಭ್ಯಗಳೊಂದಿಗೆ ‘AMB ಸಿನಿಮಾಸ್ ಕಪಾಲಿ’ ಹೊಸ ಚಿತ್ರಮಂದಿರ ನಿರ್ಮಾಣವಾಗಿದೆ.

ದಕ್ಷಿಣ ಭಾರತದ ಮೊದಲ ಡಾಲ್ಬಿ ಸ್ಟ್ರೀನ್ ಮಲ್ಟಿಪ್ಲೆಕ್ಸ್

ಈ ಮಲ್ಟಿಪ್ಲೆಕ್ಸ್‌ನ ವಿಶೇಷತೆ ಎಂದರೆ, ದಕ್ಷಿಣ ಭಾರತದಲ್ಲೇ ಮೊದಲ ಡಾಲ್ಬಿ ಸ್ಟ್ರೀನ್ ಹೊಂದಿರುವ ಚಿತ್ರಮಂದಿರ ಎನ್ನುವ ಹೆಗ್ಗಳಿಕೆ ಹೊಂದಿದೆ. ಅತಿ ಉನ್ನತ ಧ್ವನಿ ಹಾಗೂ ದೃಶ್ಯ ಗುಣಮಟ್ಟ, ಆರಾಮದಾಯಕ ಆಸನ ವ್ಯವಸ್ಥೆ ಮತ್ತು ಆಧುನಿಕ ವಿನ್ಯಾಸ ‘AMB ಸಿನಿಮಾಸ್ ಕಪಾಲಿ’ಯನ್ನು ವಿಭಿನ್ನವಾಗಿಸಿದೆ. ಹೈದರಾಬಾದ್‌ನಲ್ಲಿ ಏಷಿಯನ್ ಸಿನಿಮಾಸ್ ಜೊತೆಗೂಡಿ ಮಹೇಶ್ ಬಾಬು ಈಗಾಗಲೇ ಯಶಸ್ವಿಯಾಗಿ AMB ಸಿನಿಮಾಸ್ ನಡೆಸುತ್ತಿದ್ದಾರೆ. ಅದೇ ಮಾದರಿಯ ಗುಣಮಟ್ಟವನ್ನು ಬೆಂಗಳೂರಿಗೂ ತಂದಿದ್ದಾರೆ.

ಮಹೇಶ್ ಬಾಬು ಟ್ವಿಟ್ ಮೂಲಕ ಘೋಷಣೆ

ಈ ಬಗ್ಗೆ ಸ್ವತಃ ಮಹೇಶ್ ಬಾಬು ಸಾಮಾಜಿಕ ಜಾಲತಾಣ ‘X’ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. “ಜನವರಿ 16ರಂದು ಬೆಂಗಳೂರಿನ AMB ಸಿನಿಮಾಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಡಾಲ್ಬಿ ಥಿಯೇಟರ್ ಬಾಗಿಲು ತೆರೆಯುತ್ತಿದೆ. ಇದನ್ನು ಸಾಧ್ಯವಾಗಿಸಿದ TEAM AMB ಬಗ್ಗೆ ಅಪಾರ ಹೆಮ್ಮೆ ಇದೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಬೆಂಗಳೂರಿನಲ್ಲಿ ಭೇಟಿ ಮಾಡಲು ಕಾಯುತ್ತಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ಮೊದಲ ದಿನವೇ ಯಾವ ಸಿನಿಮಾಗಳು?

ಜನವರಿ 16ರಂದು ಪ್ರದರ್ಶನವಾಗುವ ಸಿನಿಮಾಗಳ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಬುಕ್‌ಮೈ ಶೋ ಮೂಲಕ ಪ್ರೇಕ್ಷಕರು ಟಿಕೆಟ್ ಪಡೆದುಕೊಳ್ಳಬಹುದು.

ಕಪಾಲಿ ಹೆಸರನ್ನು ಉಳಿಸಿಕೊಂಡ ಗೌರವ

ಹೊಸ ಚಿತ್ರಮಂದಿರಕ್ಕೆ ‘ಕಪಾಲಿ’ ಎನ್ನುವ ಹೆಸರನ್ನೇ ಉಳಿಸಿಕೊಂಡಿರುವುದು ಹಳೆಯ ಸಿನಿರಸಿಕರಿಗೆ ಸಮಾಧಾನ ತಂದಿದೆ. 1968ರಲ್ಲಿ ಆರಂಭವಾಗಿದ್ದ ಕಪಾಲಿ ಚಿತ್ರಮಂದಿರ ಸುಮಾರು 50 ವರ್ಷಗಳ ಕಾಲ ಸಾವಿರಾರು ಸಿನಿಮಾಗಳನ್ನು ಪ್ರದರ್ಶಿಸಿ, ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಡಾ. ರಾಜ್‌ಕುಮಾರ್ ಅಭಿನಯದ ಹಲವು ಕನ್ನಡ ಸಿನಿಮಾಗಳು ಇಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು. ಒಂದು ಕಾಲದಲ್ಲಿ 1465 ಆಸನಗಳಿದ್ದ ಈ ಚಿತ್ರಮಂದಿರ, ಬಳಿಕ 1,112 ಆಸನಗಳಿಗೆ ಇಳಿಸಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಗಾಂಧಿನಗರದ ಅನೇಕ ಹಳೆಯ ಚಿತ್ರಮಂದಿರಗಳು ನೆಲಸಮಗೊಂಡಿವೆ. ಕೆಲವು ವಾಣಿಜ್ಯ ಸಂಕೀರ್ಣಗಳಾಗಿ ಮಾರ್ಪಟ್ಟಿವೆ. ಇಂತಹ ಸಂದರ್ಭದಲ್ಲಿ ‘AMB ಸಿನಿಮಾಸ್ ಕಪಾಲಿ’ ಉದ್ಘಾಟನೆ ಗಾಂಧಿನಗರಕ್ಕೆ ಮತ್ತೆ ಸಿನಿಮಾ ಸಂಭ್ರಮ ತಂದಿದೆ. ಈಗಾಗಲೇ ಸಾಕಷ್ಟು ಜನ ಟಿಕೆಟ್ ಬುಕ್ ಮಾಡಲು ಮುಂದಾಗಿದ್ದು, ಈ ಚಿತ್ರಮಂದಿರ ಬೆಂಗಳೂರಿನ ಹೊಸ ಸಿನಿಮಾ ಹಾಟ್‌ಸ್ಪಾಟ್ ಆಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

Exit mobile version