ರೇಣುಕಾಸ್ವಾಮಿ ಮರ್ಡರ್ ಕೇಸ್.. ಈ ದಶಕದ ಬಹುದೊಡ್ಡ ಕ್ರೈಂ ಸ್ಟೋರಿಗಳಲ್ಲೊಂದು. ಸ್ಯಾಂಡಲ್‌ವುಡ್‌ನ ಮಾಸ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಸೇರಿದ ಹಿನ್ನೆಲೆ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ ಕೇಸ್. ಇಂದಿಗೂ ಡಿಬಾಸ್ ಕಂಬಿ ಎಣಿಸುತ್ತಿದ್ದು, ಟಾಕ್ ಆಫ್ ದಿ ಟೌನ್ ಆದ ಆ ಮೋಸ್ಟ್ ಕಾಂಟ್ರವರ್ಸಿಯಲ್ ಕೇಸ್, ಇದೀಗ ಸಿನಿಮಾ ರೂಪ ಪಡೆಯುತ್ತಿದೆ. ಟೀಸರ್ ಕೂಡ ರಿಲೀಸ್ ಆಗಿದ್ದು, ಎಲ್ಲರೂ ಮಾತನಾಡಿಕೊಳ್ಳುವಂತಿದೆ.
- ಬೆಳ್ಳಿತೆರೆ ಬೆಳಗೋಕೆ ರೆಡಿ ರೇಣುಕಾಸ್ವಾಮಿ ಮರ್ಡರ್ ಸ್ಟೋರಿ..!
- ಅದೇ ಮೋರಿ, ಲಾರಿ, ಅದೇ ಶೆಡ್.. ಸೇಮ್ ಟು ಸೇಮ್ ಪಂಚ್
- ಕಟೌಟ್, ಜೈಕಾರ ಜೋರು.. ಡಿಬಾಸ್ ರೋಲ್‌ನಲ್ಲಿ ಯಾರು..?
- ಇದು ಈ ದಶಕದ ಬಹುದೊಡ್ಡ ಕಾಂಟ್ರವರ್ಸಿಯಲ್ ಮೂವಿ..!
ಇದು ಸ್ಯಾಂಡಲ್‌ವುಡ್ ಅಂಗಳದಲ್ಲಿ ತಯಾರಾಗ್ತಿರೋ ಹೊಚ್ಚ ಹೊಸ ‘ಬಾಸ್’ ಅನ್ನೋ ಸಿನಿಮಾದ ಟೀಸರ್ ಝಲಕ್. ಮಡಮಕ್ಕಿ, ನಂಜುಂಡಿ ಕಲ್ಯಾಣ, ನಟ್ವರ್‌ಲಾಲ್ ಸಿನಿಮಾಗಳ ಖ್ಯಾತಿಯ ಹೀರೋ ತನುಷ್ ಶಿವಣ್ಣ ಈ ಚಿತ್ರದ ಲೀಡ್‌ನಲ್ಲಿ ನಟಿಸಿದ್ದು, ಈ ಹಿಂದೆ ಅದೇ ಹೀರೋಗೆ ಆ್ಯಕ್ಷನ್ ಕಟ್ ಹೇಳಿದ್ದ ಲವ ಅವರೇ ಈ ಬಾರಿಯೂ ಬಾಸ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಮೊದಲ ನೋಟದಲ್ಲೇ ಈ ಬಾಸ್ ಡಿಬಾಸ್ ಗೆ ಸಿಂಕ್ ಆಗ್ತಿದೆ.
ಯೆಸ್.. 2024-25ರಲ್ಲಿ ನಡೆದ ನೈಜ ಘಟನೆಗಳನ್ನ ಆಧರಿಸಿ ಸಿನಿಮಾ ಮಾಡಿರೋ ಈ ಚಿತ್ರತಂಡ ಸಿನಿಮಾಗೆ ಬಾಸ್ ಅಂತ ಟೈಟಲ್ ಇಟ್ಟಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರದ ಟೀಸರ್‌ನ ದೃಶ್ಯಗಳು ರೇಣುಕಾಸ್ವಾಮಿ ಮರ್ಡರ್ ಕೇಸ್‌ಗೆ ಬಹಳ ಹತ್ತಿರ ಆಗಿವೆ. ಟೀಸರ್ ನೋಡಿದ ಪ್ರತಿಯೊಬ್ಬರಿಗೂ ಅರೇ.. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಳ್ಳಿತೆರೆ ಬೆಳಗೋಕೆ ಸಜ್ಜಾಯ್ತಾ ಅನ್ನೋ ಪ್ರಶ್ನೆ ಕಾಡದೇ ಇರಲ್ಲ. ಯಾಕಂದ್ರೆ ಅದೇ ಮೋರಿ, ಅದೇ ಲಾರಿ, ಅದೇ ಶೆಡ್. ಸೇಮ್ ಟು ಸೇಮ್ ಪಂಚ್ ಬಾಸ್ ಚಿತ್ರದ ಟೀಸರ್‌ನಲ್ಲಿ ಉಲ್ಬಣಿಸಿವೆ.
ವಯಸ್ಸಾದ ತಂದೆ-ತಾಯಿ, ಗರ್ಭಿಣಿ ಹೆಂಡ್ತಿ ಇದಾರೆ ಬಿಟ್ಟುಬಿಡಿ ಅನ್ನೋ ಅಸಹಾಯಕನ ಹಿನ್ನೆಲೆ ಧ್ವನಿ, ಲಾರಿ ಚಕ್ರಕ್ಕೆ ಆತನ ಬ್ಲಡ್, ನಂತ್ರ ಮೋರಿ ಪಕ್ಕದಲ್ಲಿ ಅನಾಥ ಶವ.. ಹೀಗೆ ಸಾಕಷ್ಟು ವಿಷಯಗಳು ಯಥಾವತ್ ರೇಣುಕಾಸ್ವಾಮಿಯನ್ನ ನೆನಪಿಸುತ್ತಿವೆ. ಅಲ್ಲದೆ, ಸ್ಟಾರ್ ನಟನ ಜೊತೆ ಸೆಲ್ಫಿಗೆ ಮುಗಿ ಬೀಳುವ ಫ್ಯಾನ್ಸ್, ಕಟೌಟ್, ಜೈಕಾರಗಳು ಸಹ ಜೋರಾಗಿದ್ದು, ಡಿಬಾಸ್ ರೋಲ್‌ನಲ್ಲಿ ಬಾಸ್ ಚಿತ್ರದ ನಾಯಕನಟ ತನುಷ್ ಶಿವಣ್ಣ ಬಣ್ಣ ಹಚ್ಚಿರೋದು ಕಾತರಿ ಆಗಿದೆ.
ಇದು ಈ ದಶಕದ ಬಹುದೊಡ್ಡ ಕಾಂಟ್ರವರ್ಸಿಯಲ್ ಮೂವಿ ಆಗುವ ಮುನ್ಸೂಚನೆ ಕೂಡ ಸಿಕ್ಕಿದೆ. ಯಾಕಂದ್ರೆ ಇಲ್ಲಿ ಶೀಲಾ ಗೌಡ, ಲಕ್ಷ್ಮೀ, ಶಿವಸ್ವಾಮಿ ಪಾತ್ರಗಳಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡಗೆ ಶೀಲಾ ಗೌಡ ಅನ್ನೋ ಹೆಸರು ನೀಡಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಲಕ್ಷ್ಮೀ ಅಂತ ಇಡಲಾಗಿದೆ ಎನ್ನಲಾಗ್ತಿದೆ. ಇನ್ನೂ ಈ ಮರ್ಡರ್ ಕೇಸ್‌ನ ಕೀ ರೋಲ್ ರೇಣುಕಾಸ್ವಾಮಿಗೆ ಶಿವಸ್ವಾಮಿ ಹೆಸರು ಇರಲಿದೆಯಂತೆ. ಇಬ್ಬರು ನಾಯಕನಟಿಯರಿರಲಿದ್ದು, ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಅವರುಗಳನ್ನ ಪರಿಚಯಿಸಲಾಗುತ್ತೆ ಎಂದಿದೆ ಟೀಂ.
ನಿರ್ದೇಶಕ ಲವ ಬೇಸಿಕಲಿ ಅಡ್ವೊಕೇಟ್ ಆಗಿದ್ದು, ಇಲ್ಲಿ ಯಾರನ್ನೂ ತೇಜೋವಧೆ ಮಾಡಲ್ಲ ಅಂತ ಬಹಳ ನೀಟ್ ಆಗಿ ಸಿನಿಮಾ ಬಗ್ಗೆ ವಿವರಿಸಿದರು. ಆದ್ರೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತ ಸಿನಿಮಾನ ಅಂದ್ರೆ ಅದಕ್ಕೂ ಸ್ಪಷ್ಟನೆ ನೀಡದ ಚಿತ್ರತಂಡ, ಟ್ರೈಲರ್ ಬಳಿಕ ಎಲ್ಲವೂ ಗೊತ್ತಾಗಲಿದೆ ಅಂತ ಜಾರಿಕೊಂಡಿದೆ.
ಒಟ್ಟಾರೆ ಡಿ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ, ಮರ್ಡರ್ ಮಾಡಿ, ಸಾಕ್ಷ್ಯ ನಾಶ ಮಾಡೋಕೆ ಮುಂದಾದ ಹಿನ್ನೆಲೆ ಅರೆಸ್ಟ್ ಆಗಿ ಕಾನೂನು ಹೋರಾಟ ನಡೆಸ್ತಿದೆ. ಆ ನೈಜ ಘಟನಾವಳಿಗಳು ಏನಾದ್ರೂ ಸಿನಿಮಾಗೆ ಬಂದ್ರೆ ಸಿಕ್ಕಾಪಟ್ಟೆ ದೊಡ್ಡ ಗಲಾಟೆಗಳು ಆಗುವ ಸಾಧ್ಯತೆಯಿದೆ. ಒಂದ್ಕಡೆ ದರ್ಶನ್ ಫ್ಯಾನ್ಸ್, ಕುಟುಂಬ ಮತ್ತೊಂದೆಡೆ ರೇಣುಕಾಸ್ವಾಮಿ ಕುಟುಂಬಸ್ಥರು, ಮಗದೊಂದು ಕಡೆ ಪೊಲೀಸ್ ಲಾ & ಆರ್ಡರ್. ಇದೆಲ್ಲವನ್ನ ದಾಟಿ ಸಿನಿಮಾ ಬಿಗ್‌ಸ್ಕ್ರೀನ್‌ಗೆ ಬಂದ್ರೆ ಆ ಕೇಸ್‌ನ ಸಾಕಷ್ಟು ನಗ್ನ ಸತ್ಯಗಳು ಹೊರಬೀಳಲಿವೆ. ಸೋ.. ಮುಂದೆ ಇದು ಏನೆಲ್ಲಾ ರೂಪ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
