ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಮಾರ್ ಅಭಿನಯದ ‘ಭಕ್ತ ಪ್ರಹ್ಲಾದ’ ಚಿತ್ರವು ಕನ್ನಡದ ಅತ್ಯುತ್ತಮ ಚಿತ್ರಗಳ ಪೈಕಿ ಒಂದು. ಭಕ್ತ ಪ್ರಹ್ಲಾದ ಮತ್ತು ನರಸಿಂಹಾವತಾರ ಕಥೆಯನ್ನು ಮುಂದಿನ ತಲೆಮಾರಿನವರಿಗೆ ತಿಳಿಸಲು ಒಂದು ಅನಿಮೇಷನ್ ಚಿತ್ರ ತಯಾರಾಗಿದೆ. ಆ ಚಿತ್ರದ ಹೆಸರು ‘ಮಹಾವತಾರ ನರಸಿಂಹ’. ಈಗಾಗಲೇ ಚಿತ್ರದ ಟ್ರೇಲರ್ ಚಿತ್ರ ಪ್ರೇಮಿಗಳ ಹೃದಯ ಗೆದ್ದಿದೆ. ಇದೇ ಜುಲೈ 25ರಂದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡಗುಡೆ ಆಗುತ್ತಿದೆ. ಕನ್ನಡದಲ್ಲಿ ಈ ಚಿತ್ರವನ್ನು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅರ್ಪಿಸುವುದರ ಜೊತೆಗೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
ಮಂಗಳವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಅಶ್ವಿನ್ ಕುಮಾರ್ ಮಾತನಾಡಿ, ‘2018ರಲ್ಲಿ ಗೆಳೆಯರು ಸೇರಿ ಭಕ್ತ ಪ್ರಹ್ಲಾದ ಬಗ್ಗೆ ಚರ್ಚೆ ಮಾಡಿದೆವು. ಆ ನಂತರ ನರಸಿಂಹ ಸ್ವಾಮಿ ಕುರಿತು ಸಿನಿಮಾ ಮಾಡಲು ಕನ್ನಡದ ‘ಭಕ್ತ ಪ್ರಹ್ಲಾದ’ ಚಿತ್ರ ಸೇರಿದಂತೆ ಹಲವು ಚಿತ್ರಗಳು ಮತ್ತು ಪುರಾಣಗಳನ್ನು ಓದಿ ಚಿತ್ರಕಥೆ ಮಾಡಲಾಗಿದೆ. ಈ ‘ಮಹಾವತಾರ ನರಸಿಂಹ’ ಚಿತ್ರಕ್ಕಾಗಿ ನಮ್ಮ ತಂಡ ಐದು ವರ್ಷ ಶ್ರಮ ಹಾಕಿದೆ. ಮುಖ್ಯವಾಗಿ ನಾವು ಈ ಚಿತ್ರವನ್ನು ‘ಭಕ್ತ ಪ್ರಹ್ಲಾದ’ ಚಿತ್ರವನ್ನು ಮೂಲವಾಗಿಟ್ಟುಕೊಂಡು ಚಿತ್ರ ಮಾಡಿದ್ದೇವೆ. ಸಂಪೂರ್ಣ ಅನಿಮೇಷನ್ ಚಿತ್ರ ಮಾಡುವುದು ಸುಲಭದ ಮಾತಲ್ಲ. ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ಅದನ್ನೆಲ್ಲಾ ಮೀರಿ ನಾಲ್ಕೂವರೆ ವರ್ಷಗಳಳ್ಲಿ ಈ ಚಿತ್ರ ರೂಪಿಸಿದ್ದೇವೆ. ಈ ಸರಣಿಯ ಮುಂದುವರೆದ ಭಾಗವಾಗಿ ‘ಮಹಾವತಾರ ಪರಶುರಾಮ’ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.
ಈ ಚಿತ್ರವನ್ನು ಅಶ್ವಿನ್ ಕುಮಾರ್ ಪತ್ನಿ ಶಿಲ್ಪಾ ಧವನ್ ನಿರ್ಮಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಆಶೀರ್ವಾದದಿಂದ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದ ಅವರು, ‘ಹೊಂಬಾಳೆ ಸಂಸ್ಥೆ ಜೊತೆ ಕೈ ಜೋಡಿಸಿದ್ದು ತುಂಬಾ ಖುಷಿ ಇದೆ. ಇದು ನಮ್ಮ ನಿರ್ಮಾಣದ ಮೊದಲ ಸಿನಿಮಾ. ನಮ್ಮ ಕ್ಲೀಂ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಇನ್ನಷ್ಟು ಸಿನಿಮಾ ಮಾಡುತ್ತೇವೆ. ಈ ಚಿತ್ರವನ್ನು ನಾವು ಅತ್ಯುತ್ತಮ ಆನಿಮೇಷನ್ ತಂತ್ರಜ್ಞಾನ ಮೂಲಕ ಮಾಡಲಾಗಿದೆ. ಇದು ಡಬ್ಬಿಂಗ್ ಚಿತ್ರವಲ್ಲ ಕನ್ನಡ ಸಿನಿಮಾ’ ಎಂದರು.
ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಪರವಾಗಿ ಆದರ್ಶ ಮಾತನಾಡಿ, ‘ನಮ್ಮ ತಂಡ ಸಿನಿಮಾ ನೋಡಿ, ಈ ಚಿತ್ರವನ್ನು ಅರ್ಪಿಸುತ್ತಿದ್ದೇವೆ. ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.