ಅಮರನ್ ಹಿಟ್ ಬೆನ್ನಲ್ಲೇ ಕಾಲಿವುಡ್ ಸ್ಟಾರ್ ಶಿವಕಾರ್ತಿಕೇಯನ್ ಮತ್ತೊಂದು ಮೆಗಾ ಆ್ಯಕ್ಷನ್ ಅಡ್ವೆಂಚರ್ ಎಂಟರ್‌ಟೈನರ್ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸೋಕೆ ಸಜ್ಜಾಗಿದ್ದಾರೆ. ಅದಕ್ಕೆ ನಮ್ಮ ಕನ್ನಡತಿ, ಸಪ್ತಸಾಗರದ ಪುಟ್ಟಿ ಕೂಡ ಸಾಥ್ ನೀಡಿದ್ದು, ಟ್ರೈಲರ್‌ನಲ್ಲಿ ಸಿನಿಮಾದ ಹೈಲೈಟ್ಸ್ ಬಿಟ್ಟುಕೊಟ್ಟಿದೆ ಟೀಂ. ಮುರುಗದಾಸ್ ಡೋಸ್ ಹೇಗಿದೆ ಅನ್ನೋದನ್ನ ನೀವೇ ನೋಡಿ.
- ‘ಮದರಾಸಿ’ ಶಿವಕಾರ್ತಿಕೇಯನ್ ಜೊತೆ ಕನ್ನಡತಿ ರುಕ್ಮಿಣಿ
- ಸಿಕ್ಕಾಪಟ್ಟೆ ಜೋರಿದೆ AR ಮುರುಗದಾಸ್ ಆ್ಯಕ್ಷನ್ ಡೋಸ್
- ತಮಿಳುನಾಡು ವೆಪನ್ ಮಾಫಿಯಾ ಸುತ್ತಾ ಮದರಾಸಿ ಕಥೆ
- ಖಡಕ್ ಖಳನಾಯಕನಾಗಿ ವಿದ್ಯುತ್ ಜಮ್ವಾಲ್ ತಾಂಡವ..!
ಕಳೆದ ವರ್ಷ 335 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಬ್ಲಾಕ್ ಬಸ್ಟರ್ ಹಿಟ್ ಅಮರನ್ ಚಿತ್ರದ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸಿದ್ರು ಶಿವಕಾರ್ತಿಕೇಯನ್. ಆ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಸಿನಿಮಾನ ಹೊತ್ತು ಬರ್ತಿದ್ದಾರೆ. ಅದೇ ಮದರಾಸಿ. ಯೆಸ್.. ಇದು ಮದರಾಸಿ ಸಿನಿಮಾದ ಟ್ರೈಲರ್ ಝಲಕ್. ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾದ ಟ್ರೈಲರ್ ವಿಡಿಯೋ ರಿವೀಲ್ ಆಗಿದ್ದು, ನೋಡುಗರ ಹುಬ್ಬೇರಿಸುವಂತಿದೆ ದೃಶ್ಯ ಚಿತ್ತಾರ.
ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್‌ಗೆ ಸಿಕಂದರ್ ಮೂವಿ ಮಾಡಿ ಸೋತಿದ್ದ ಸಕ್ಸಸ್‌ಫುಲ್ ಡೈರೆಕ್ಟರ್ ಎ.ಆರ್. ಮುರುಗದಾಸ್, ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುವ ಭರವಸೆ ಮೂಡಿಸಿದ್ದಾರೆ. ಮೋಸ್ಟ್ ಟ್ಯಾಲೆಂಟೆಡ್ ಆ್ಯಕ್ಟರ್ ಶಿವಕಾರ್ತಿಕೇಯನ್ 23ನೇ ಸಿನಿಮಾ ಇದಾಗಿದ್ದು, ಸುಮಾರು 200 ಕೋಟಿ ಬಿಗ್ ಬಜೆಟ್‌ನಲ್ಲಿ ಈ ಆ್ಯಕ್ಷನ್ ಥ್ರಿಲ್ಲರ್ ತಯಾರಾಗಿದೆ.
ವಿಶೇಷ ಅಂದ್ರೆ ಈ ಚಿತ್ರದಲ್ಲಿ ನಾಯಕನಟಿಯಾಗಿ ನಮ್ಮ ಕನ್ನಡದ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಮಾಲತಿ ಪಾತ್ರದಲ್ಲಿ ಟ್ರೆಡಿಷನಲ್ ಲುಕ್ಸ್‌ನಲ್ಲೇ ರುಕ್ಕು ಕಿಕ್ ಕೊಡ್ತಾರೆ. ಅದ್ರಲ್ಲೂ ಶಿವಕಾರ್ತಿಕೇಯನ್- ರುಕ್ಮಿಣಿ ಕೆಮಿಸ್ಟ್ರಿ ಇಂಪ್ರೆಸ್ಸೀವ್ ಆಗಿದೆ. ಇನ್ನು ರುಕ್ಕಮ್ಮನಿಗೆ ತಮಿಳು ಸಿನಿಮಾ ಇದೇ ಮೊದಲೇನಲ್ಲ. ಏಸ್ ಚಿತ್ರದ ಮೂಲಕ ವಿಜಯ್ ಸೇತುಪತಿ ಜೊತೆ ತಮಿಳಿಗೆ ಎಂಟ್ರಿ ಕೊಟ್ಟಿದ್ದರು. ಇದೀಗ ರುಕ್ಮಿಣಿ ಪಾಲಿಗೆ ಎರಡನೇ ತಮಿಳು ವೆಂಚರ್ ಇದಾಗಿದೆ.
ನಿನ್ನಂತೆಯೇ ಇತರರನ್ನೂ ಪ್ರೀತಿಸು. ಎಲ್ಲರೂ ನಿನ್ನ ಕುಟುಂಬವೇ ಅಂದುಕೋ. ಎಲ್ಲಾ ಧರ್ಮಗಳು, ದೇವರುಗಳು ಕೂಡ ಅದನ್ನೇ ಹೇಳೋದು.. ಅಂತ ಹೇಳುವ ನಾಯಕನಟಿ. ಮ್ಯೂಸಿಕ್ ಪ್ರೇಮಿಗಳಿಬ್ಬರ ನವಿರಾದ ಪ್ರೇಮಕಥೆ ಮಾಸ್ ಕಥಾನಕವಾಗಿ ತಿರುವು ಪಡೆದುಕೊಳ್ಳಲಿದೆ. ಅದಕ್ಕೆ ಕಾರಣ ತಮಿಳುನಾಡಿಗೆ ಎಂಟ್ರಿ ಕೊಡೋ ಇಲ್ಲೀಗಲ್ ವೆಪನ್ಸ್. ಹೌದು.. ಒಂದಲ್ಲ ಎರಡಲ್ಲ ಸುಮಾರು 6 ಕಾರ್ಗೋ ಟ್ರಕ್‌ಗಳಲ್ಲಿ ಗನ್‌ಗಳು ಸರಬರಾಜು ಆಗುತ್ತೆ. ಅದನ್ನ ಸ್ಟೇಟ್ ಬಾರ್ಡರ್‌ನಲ್ಲೇ ತಡೆಯೋಕೆ ಸಜ್ಜಾಗುವ ಆರ್ಮಿ, ಪೊಲೀಸ್ ವ್ಯವಸ್ಥೆ. ಅಷ್ಟರಲ್ಲೇ ಆಗುವ ಬಾಂಬ್ ಬ್ಲಾಸ್ಟ್‌ಗಳು.. ಹೀಗೆ ಚಿತ್ರದ ಕಥೆ ಸಾಗಲಿದೆ.
ಆಸ್ಪತ್ರೆಗಳು, ಆ್ಯಂಬುಲೆನ್ಸ್‌ಗಳು, ಮಾಲ್, ಪೋರ್ಟ್ ಸೇರಿದಂತೆ ಒಳ್ಳೊಳ್ಳೆ ಲೊಕೇಷನ್ಸ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ವಿದ್ಯುತ್ ಜಮ್ವಾಲ್ ಹೇಳುವ ಡೈಲಾಗ್ ಮಜಬೂತಾಗಿದೆ. ಗನ್ ಯಾರ ಕೈಯಲ್ಲಿದ್ರೂ ಸಹ ವಿಲನ್ ನಾನೇ ಕಣೋ ಅನ್ನೋ ಮಾಸ್ ಡೈಲಾಗ್ ಮಾಸ್‌ಪ್ರಿಯರ ಫೇವರಿಟ್ ಆಗಲಿದೆ. ಆದ್ರೆ ಮದರಾಸ್ ನನ್ನೂರು. ನಾನು ಬಿಟ್ಟುಕೊಡೋ ಪ್ರಮೇಯವೇ ಇಲ್ಲ ಅಂತ ನಾಯಕನಟ ದಿಟ್ಟವಾಗಿ ನೆಲ್ಲಲಿದ್ದಾರೆ. ಟ್ರೈಲರ್‌ನಲ್ಲಿ ಸದ್ಯ ಇಷ್ಟು ರಿವೀಲ್ ಆಗಿದ್ದು, ಸಿನಿಮಾದ ಅಸಲಿ ಕಥೆ ಸೆಪ್ಟೆಂಬರ್ 5ಕ್ಕೆ ಥಿಯೇಟರ್‌ನಲ್ಲಿ ಹೊರಬೀಳಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್