ಹೊಸ ಪ್ರೇಮಕಥೆಯೊಂದಿಗೆ ವೀಕ್ಷಕರ ಗಮನ ಸೆಳೆಯಲು ಬರಲಿದೆ “ಮಾತೊಂದ ಹೇಳುವೆ”

ಹೊಸತರದ ಪ್ರೇಮಕಥೆಯೊಂದಿಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರ ಜೂನ್13 ರಂದು ಬಿಡುಗಡೆ

Web 2025 05 13t220802.290

ಹಲವು ಹೊಸತುಗಳಿಗೆ ಹೆಸರಾಗಿರುವ ಸ್ಯಾಂಡಲ್ ವುಡ್ ಈಗ ಮತ್ತೊಂದು ಹೊಸತನಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮನೆಮಾತಾಗಿರುವ ‘ಮಾತೊಂದ ಹೇಳುವೆ’ ಚಿತ್ರವನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಜನತೆ ಅರ್ಪಿಸುತ್ತಿದ್ದಾರೆ‌.

ಹೊಸತನದ ಪ್ರೇಮಕಥೆಯೊಂದಿಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆರ್ ಜೆ ಆಗಿ ಹೆಸರು ಮಾಡಿರುವ ಮಯೂರ್ ಕಡಿ ನಿರ್ದೇಶಿಸಿದ್ದಾರೆ ಜೊತೆಗೆ ನಾಯಕನಾಗೂ ನಟಿಸಿದ್ದಾರೆ. ಈಗಾಗಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ವಿಶೇಷ ವಿಡಿಯೋ ತುಣುಕು ಬಿಡುಗಡೆ ಮಾಡುವ ಮೂಲಕ ಘೋಷಣೆ ಮಾಡಿದೆ.

ಈ ವಿಡಿಯೋದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ‌. ಜೂನ್ 13 ರಂದು ರಾಜ್ಯಾದ್ಯಂತ ” ಮಾತೊಂದ ಹೇಳುವೆ” ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ.

ತಾರಾಗಣದಲ್ಲಿ ಮಯೂರ್ ಕಡಿ ಅವರ ಜೊತೆಯಲ್ಲಿ ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಚಂದ್ರ, ಪ್ರತೀಕ್ ರಡ್ಡೆರ್, ಚೇತನ್ ಮರಂಬೀಡ್, ವಿದ್ಯಾಸಾಗರ ದೀಕ್ಷಿತ್, ಪ್ರತೀಕ್ ,ಕಾರ್ತಿಕ್ ಪತ್ತಾರ್ , ಸುನಿಲ್ ಪತ್ರಿ, ಜ್ಯೋತಿ ಪುರಾಣಿಕ್ ಮುಂತಾದವರಿದ್ದಾರೆ.

ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೋ ಜಾಕಿ ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ. ಇಬ್ಬರೂ ಭೇಟಿ ಆದಾಗ ನಡೆಯುವ ರೋಚಕ ಘಟನೆಗಳೇ ಚಿತ್ರದ ಜೀವಾಳ. ಇದೊಂದು ವಿಭಿನ್ನ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ. ಈ ಹಿಂದೆ ಚಿತ್ರಮಂದಿರಗಳು ಮಾತನಾಡುವ ವೀಡಿಯೊ ಮೂಲಕ ಈ ತಂಡ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದು ಜನರ ಗಮನ ಸೆಳೆದಿತ್ತು ಎನ್ನುತ್ತಾರೆ ನಿರ್ದೇಶಕ ಹಾಗೂ ನಾಯಕ ಮಯೂರ್ ಕಡಿ.

ಮಹೇಶ್ವರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಮತೊಂದು ಹೇಳುವೆ” ಚಿತ್ರಕ್ಕೆ ಪ್ರಭು ಸವಣೂರ್ ಹಾಗೂ ಅವಿನಾಶ್ ಯು. ಎಸ್ ಅವರ ಸಹ ನಿರ್ಮಾಣವಿದೆ. ಪರ್ವತೇಶ್ ಪೋಲ್ ಛಾಯಾಗ್ರಹಣ, ಉಲ್ಲಾಸ್ ಕುಲಕರ್ಣಿ ಸಂಗೀತ ನಿರ್ದೇಶನ ಹಾಗೂ ಅಭಯ್ ಕಡಿ ಸಂಕಲನವಿರುವ ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಎಮ್ ಎಸ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

Exit mobile version