ನಟಿ ಸೋನಾಲ್ ಮೊಂತೆರೊ ಅವರಿಂದ ನವೀನ್ ಸಜ್ಜು ಅಭಿನಯದ “ಲೋ ನವೀನ” ಚಿತ್ರದ ಎರಡನೇ ಹಾಡಿನ ಅನಾವರಣ

BeFunky collage 2026 02 01T143759.638

ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಲೋ ನವೀನ”. ಈಗಾಗಲೇ ಈ ಚಿತ್ರದ ಜನಪದ ಶೈಲಿಯ “ಕೋಣಾಣೆ” ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ “ಲೋ ನವೀನ” ಚಿತ್ರದ “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ನಟಿ ಸೋನಾಲ್ ಮೊಂತೆರೊ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಸಂಸದ ಪುಟ್ಟರಾಜು, ರಾಮಮೂರ್ತಿ, ಮಾದೇಶ್ ಮುಂತಾದ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮೂಲತಃ ಮಳವಳ್ಳಿಯವನು. ಹಳ್ಳಿ ಪರಿಸರದಲ್ಲೇ ಬೆಳೆದವನು. ಗಾಯಕನಾಗಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ. ಇದಕ್ಕೆ ಕಾರಣರಾದವರು ನಮ್ಮ ಚಿತ್ರದ ನಿರ್ಮಾಪಕರಾದ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ. ನಾನು ಕಾರ್ಯಕ್ರಮದ ನಿಮಿತ್ತ ಅಮೇರಿಕಾಗೆ ಹೋದಾಗ ಅವರನ್ನು ಮಾದೇಶ್ ಅವರು ಭೇಟಿ ಮಾಡಿಸಿದರು. ಗ್ರಾಮೀಣಾ ಸೊಗಡಿನ ಕಥೆ ಕೇಳಿ ಇಷ್ಟಪಟ್ಟ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ನಿರ್ಮಾಣಕ್ಕೆ ಮುಂದಾದರು.

ಅವರಿಗೆ ನನ್ನ ಅನಂತ ಧನ್ಯವಾದ. ಇನ್ನೂ, ಈ ಚಿತ್ರಕ್ಕ ನಾನೇ ಸಂಗೀತ ನೀಡಿದ್ದೇನೆ. ಈಗಾಗಲೇ ಚಿತ್ರದ ಮೊದಲ ಹಾಡು “ಕೋಣಾಣೆ” ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಈಗ ಚಿತ್ರದ ಎರಡನೇ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಅನಾವರಣವಾಗಿದೆ. ಇದು ನಾಯಕಿಯನ್ನು ಪರಿಚಯಿಸುವ ಗೀತೆ ಕೂಡ.

ಈ ಹಾಡನ್ನು ಜನಪ್ರಿಯ ನಾಯಕಿ ಸೋನಾಲ್ ಅವರು ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅಂದಾನಿ ಅವರು ಹಾಡನ್ನು ಬರೆದಿದ್ದಾರೆ. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭಕ್ಕೆ ಆಗಮಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು ಚಿತ್ರದ ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು.

ನಾನು ಮಳವಳ್ಳಿಯವನು. ಚಿಕ್ಕವಯಸ್ಸಿನಲ್ಲೇ ಗ್ರಾಮೀಣ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವನು ಎಂದು ಮಾತನಾಡಿದ ನಿರ್ಮಾಪಕ ಬೆನ್ ಚಿಕ್ಕಸ್ವಾಮಿ, ನಲವತ್ತು ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ಕನ್ನಡವನ್ನೇ ಮಾತನಾಡುತ್ತೇನೆ. ದಿನ ಮುದ್ದೆ , ಉಪ್ಸಾರು ತಿನ್ನುತ್ತೇನೆ. ನವೀನ್ ಸಜ್ಜು ಹೇಳಿದ ಗ್ರಾಮೀಣ ಸೊಗಡಿನ ಕಥೆ ಇಷ್ಚವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು ಎಂದರು.

ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಕನಸು. ಆ ಕನಸು ಈಗ ನನಸಾಗಿದೆ. ಅವಕಾಶ ನೀಡಿದ ನವೀನ್ ಸಜ್ಜು ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ವರ್ಷ.

ಇದು ನನ್ನ ಮೊದಲ ನಿರ್ದೇಶನದ ಚಿತ್ರ‌. “ಲೋ ನವೀನ” ಚಿತ್ರ ಉತ್ತಮವಾಗಿ ಮೂಡಿಬರಲು ಚಿತ್ರತಂಡದ ಸಹಕಾರ ಅಪಾರ ಎಂದು ನಿರ್ದೇಶಕ ಧನುರ್ಧಾರಿ ಪವನ್ ತಿಳಿಸಿದರು.

ಛಾಯಾಗ್ರಾಹಕ ರಿಷಿಕೇಶ್, ನೃತ್ಯ ನಿರ್ದೇಶಕ ವಿನಾಯಕ್ ಆಚಾರ್ಯ, ಗೀತರಚನೆಕಾರ ಅಂದಾನಿ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Exit mobile version