ಬಾಲನಟಿಗೆ ವಂಚನೆ, ಶೂಟಿಂಗ್ ವೇಳೆ ಕರೆಂಟ್ ಶಾಕ್: ಸೀರಿಯಲ್ ತಂಡದ ವಿರುದ್ಧ ಬಾಲಕಿ ತಾಯಿ ಕಿಡಿ

Untitled design 2025 08 29t113919.285

ಬೆಂಗಳೂರು: ಕನ್ನಡ ಮತ್ತು ತೆಲುಗು ಧಾರಾವಾಹಿಗಳಾದ ಲಕ್ಷ್ಮೀ ನಿವಾಸ ಮತ್ತು ಲಕ್ಷ್ಮೀ ನಿವಾಸಂನಲ್ಲಿ ಖುಷಿ ಪಾತ್ರದಲ್ಲಿ ನಟಿಸಿದ್ದ ಬಾಲನಟಿ ನಿಶಿತಾರ ತಾಯಿ ಪ್ರಿಯಾ, ತೆಲುಗು ಧಾರಾವಾಹಿಯ ನಿರ್ಮಾಪಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಿಶಿತಾ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಈ ಧಾರಾವಾಹಿಯ ತೆಲುಗು ರಿಮೇಕ್ ಲಕ್ಷ್ಮೀ ನಿವಾಸಂನಲ್ಲಿ ಖುಷಿ ಪಾತ್ರದಲ್ಲಿ ನಟಿಸಿದ್ದರು. ಆದರೆ, ಶೂಟಿಂಗ್ ಸಮಯದಲ್ಲಿ ನಿಶಿತಾಗೆ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು ಎಂದು ಪ್ರಿಯಾ ಆರೋಪಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಶೂಟಿಂಗ್ ವೇಳೆ ನಿಶಿತಾಗೆ ಕರೆಂಟ್ ಶಾಕ್ ಆಗಿತ್ತು, ಆದರೆ ಸೂಕ್ತ ಸುರಕ್ಷತಾ ಕ್ರಮಗಳಿರಲಿಲ್ಲ. ಬಾಲನಟಿಯಾಗಿದ್ದರೂ, ತಡರಾತ್ರಿಯವರೆಗೆ ಶೂಟಿಂಗ್‌ ಮಾಡಬೇಕಿತ್ತು. ಕ್ಯಾಬ್‌ ವ್ಯವಸ್ಥೆ ಕೂಡಾ ನೀಡಿರಲಿಲ್ಲ. ಏಪ್ರಿಲ್ 2025ರಿಂದ ನಿಶಿತಾಗೆ ಸಂಬಳವನ್ನು ಇಂದಿನ ತನಕವೂ ನೀಡಿಲ್ಲ. ಯಾವುದೇ ಮಾಹಿತಿ ನೀಡದೆ, ನಿಶಿತಾರ ಪಾತ್ರವನ್ನು ರಿಪ್ಲೇಸ್ ಮಾಡಲಾಗಿದೆ. ಎರಡು ದಿನ ಶೂಟಿಂಗ್‌ಗೆ ಗೈರಾಗಿದ್ದಾಗ, ಬೇರೆ ಬಾಲನಟಿಯನ್ನು ಆಯ್ಕೆ ಮಾಡಿದ್ದಾರೆ ಎಂದು ನಿಶಿತಾ ತಾಯಿ ಪ್ರಿಯಾ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಆರೋಪಗಳನ್ನು ವಿಡಿಯೋ ಕ್ಲಿಪ್‌ಗಳ ಮೂಲಕ ಹಂಚಿಕೊಂಡಿದ್ದು “ನನ್ನ ಮಗಳು ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. ಆದರೆ ನಿರ್ಮಾಪಕಿ ಪ್ರಶಾಂತಿ ಸಂಬಳ ಕೊಡದೆ, ಯಾವುದೇ ಸೂಚನೆ ಇಲ್ಲದೆ ತೆಗೆದುಹಾಕಿದ್ದಾರೆ. ಇದು ಕೇವಲ ಒಂದು ಉದಾಹರಣೆ, ಇನ್ನೂ ಹಲವು ತೊಂದರೆಗಳನ್ನು ಒಂದು ವಾರದಲ್ಲಿ ವಿವರಿಸುತ್ತೇನೆ” ಎಂದು ಪ್ರಿಯಾ ಹೇಳಿದ್ದಾರೆ.

ಲಕ್ಷ್ಮೀ ನಿವಾಸ ಝೀ ಕನ್ನಡದಲ್ಲಿ 2024ರ ಜನವರಿ 16ರಿಂದ ಪ್ರಸಾರವಾಗುತ್ತಿದ್ದು, ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. ಈ ಧಾರಾವಾಹಿಯ ತೆಲುಗು ರಿಮೇಕ್ ಲಕ್ಷ್ಮೀ ನಿವಾಸಂ ಕೂಡ ಜನಪ್ರಿಯವಾಗಿದೆ. ಈ ಧಾರಾವಾಹಿಯಲ್ಲಿ ಶ್ವೇತಾ, ದಿಶಾ ಮದನ್, ಚಂದನಾ ಅನಂತಕೃಷ್ಣ, ಮಧು ಹೆಗಡೆ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ನಿಶಿತಾ ಭಾವನಾರ ದತ್ತು ಮಗಳಾದ ಖುಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Exit mobile version