ರಾಕಿಭಾಯ್ ತಾಯಿ ಪುಷ್ಪ ಬಗ್ಗೆ ಉಪ್ಪಿ ರಿಯಲ್ ಟಾಕ್..!

ಯಶ್ ಮಾಡದ ಕೆಲಸವನ್ನು ಉಪೇಂದ್ರ ಮಾಡಿದ್ರು ನೋಡಿ

222 (10)

ಅಣ್ಣಾವ್ರು ನಿರ್ಮಾಪಕರುಗಳನ್ನ ಅನ್ನದಾತರು ಎಂದಿದ್ರು. ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟಂತಹ ಯಶ್ ಅವರ ತಾಯಿ ಕೂಡ ಚಿತ್ರ ನಿರ್ಮಾಣ ಮಾಡುವ ಮೂಲಕ ಅನ್ನಪೂರ್ಣೆ ಆಗಿದ್ದಾರೆ. ಕೊತ್ತಲವಾಡಿ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಬರ್ತಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವ್ರು ಯಶ್ ತಾಯಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಆಗಸ್ಟ್ 1ಕ್ಕೆ ತೆರೆಕಂಡ ಕೊತ್ತಲವಾಡಿ ಸಿನಿಮಾಗೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಿದೆ. ಮರಳು ಮಾಫಿಯಾ, ಲೋಕಲ್ ಪಾಲಿಟಿಕ್ಸ್ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಕೇಂದ್ರೀಕೃತವಾಗಿರೋ ಕೊತ್ತಲವಾಡಿ ಸಿನಿಮಾ ಪ್ರೇಕ್ಷಕರಿಗೆ ರುಚಿಸುತ್ತಿದೆ. ಪೃಥ್ವಿ ಅಂಬರ್ ಕರಿಯರ್‌ನ ಬೆಸ್ಟ್ ಸಿನಿಮಾ ಅನಿಸಿಕೊಂಡಿರೋ ಶ್ರೀರಾಜ್ ನಿರ್ದೇಶನದ ಈ ಚಿತ್ರದಿಂದ ಗೋಪಾಲ್ ಕೃಷ್ಣ ದೇಶಪಾಂಡೆ ಕರಿಯರ್ ಬೆಸ್ಟ್ ಪರ್ಫಾಮೆನ್ಸ್ ಹೊರಹೊಮ್ಮಿದೆ.

ಕಿರುತೆರೆ ನಟಿ ಕಾವ್ಯ ಶೈವಾ ಬೆಳ್ಳಿಪರದೆಗೆ ನಾಯಕನಟಿಯಾಗಿ ಪಾದಾರ್ಪಣೆ ಮಾಡಿದ್ದು, ಇದಕ್ಕೆಲ್ಲಾ ಕಾರಣವಾಗಿರೋದು ರಾಕಿಂಗ್ ಸ್ಟಾರ್ ಯಶ್ ತಾಯಿ ಅಂದ್ರೆ ನೀವು ನಂಬಲೇಬೇಕು. ಯೆಸ್.. ಕೊತ್ತಲವಾಡಿಯ ಅಸಲಿ ಸೂತ್ರದಾರಿ ಪುಷ್ಪ ಅರುಣ್‌‌ಕುಮಾರ್. ನಿರ್ಮಾಪಕಿಯಾಗಿ ಹಣ ಹೂಡಿಕೆ ಮಾಡಿರೋ ಪುಷ್ಪ, ಅನ್ನಪೂರ್ಣೆಯಾಗಿ ಸ್ಯಾಂಡಲ್‌ವುಡ್‌‌ನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಯಶ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಗತ್ತು, ಗಮ್ಮತ್ತು ತೋರಿದ ಹೆಮ್ಮೆಯ ಕನ್ನಡಿಗ. ಒಂದಲ್ಲ ಎರಡೆರಡು ಬಿಗ್ಗೆಸ್ಟ್ ಪ್ಯಾನ್ ಸಿನಿಮಾಗಳ ನಿರ್ಮಾಪಕರೂ ಹೌದು. ಆದ್ರೆ ಕೊತ್ತಲವಾಡಿ ಸಿನಿಮಾದ ಪ್ರಮೋಷನ್ಸ್‌ಗೆ ಮಗ ಯಶ್ ಹೆಸರಾಗಲಿ ಅಥ್ವಾ ಆತನ ಸ್ಟಾರ್‌ಡಮ್‌ನ ಆಗಲಿ ಬಳಸಿಕೊಂಡಿಲ್ಲ ತಾಯಿ ಪುಷ್ಪ ಅರುಣ್‌ಕುಮಾರ್. ತನ್ನ ತಾಯಿಯ ಮೊದಲ ಸಿನಿಮಾ ಅಂತ ಯಶ್ ಕೂಡ ಒಂದು ಪೋಸ್ಟ್ ಅಥ್ವಾ ವಿಡಿಯೋ ಮೂಲಕ ಚಿತ್ರದ ಪ್ರಮೋಷನ್ಸ್ ಮಾಡಿಲ್ಲ.

ಆದ್ರೆ ರಾಕಿಭಾಯ್ ಯಶ್ ಮಾಡದ ಆ ಕೆಲಸವನ್ನು ಸೂಪರ್ ಸ್ಟಾರ್ ಉಪೇಂದ್ರ ಮಾಡಿದ್ದಾರೆ. ಸಿನಿಮಾ ಮಾಡುವ ಮೂಲಕ ಕಲೆಯನ್ನ ಹಾಗೂ ಕಲಾವಿದರನ್ನು ಪೋಷಿಸುತ್ತಿರೋ ಯಶ್ ತಾಯಿ ಪರ ರಿಯಲ್ ಸ್ಟಾರ್ ಬಹಿರಂಗವಾಗಿ ಬೆನ್ನು ತಟ್ಟುವ ಮೂಲಕ ಅಭಿನಂದಿಸಿದ್ದಾರೆ. ಯೆಸ್.. ಯಶ್ ತಾಯಿಗೆ ಉಪ್ಪಿ ಹೇಳಿದ್ದೇನು ಅಂತ ನೀವೇ ನೋಡಿ.

ಯಶ್ ತಾಯಿಗೆ ಉಪೇಂದ್ರ ಬೆಂಬಲ

‘ತಮ್ಮ ಮಗ ರಾಕಿಂಗ್ ಸ್ಟಾರ್ ಯಶ್‌ರಂತೆಯೇ ಕನ್ನಡ ಚಿತ್ರರಂಗದಲ್ಲಿ ವಿವಿಧ ಕಲಾವಿದರು ಸಹ ಯಶಸ್ವಿಯಾಗಲಿ ಎನ್ನುವ ಶ್ರೇಷ್ಠ ಗುಣ, ಉದ್ದೇಶವನ್ನು ಹೊಂದಿರುವ ಪುಷ್ಪ ಅರುಣ್ ಕುಮಾರ್ ನಿರ್ಮಾಣದ, ಪೃಥ್ವಿ ಅಂಬರ್ ಅಭಿನಯದ ಕೊತ್ತಲವಾಡಿ ಚಿತ್ರ ಆಗಸ್ಟ್ 1ರಂದು ಭರ್ಜರಿಯಾಗಿ ಬಿಡುಗಡೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕನ್ನಡ ಸಿನಿರಸಿಕರ ಆಶೀರ್ವಾದ ಎಲ್ಲಾ ಕನ್ನಡ ಚಿತ್ರಗಳ ಮೇಲೆ ಹೀಗೇ ಇರಲಿ’.

ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಸಾಮಾನ್ಯವಾಗಿ ಹೊಸಬರು ಬಂದಾಗ ಸ್ಟಾರ್‌‌ಗಳು ಅವ್ರನ್ನ ಉತ್ತೇಜಿಸಬೇಕು. ಅವ್ರಿಗೆ ಸಾಥ್ ನೀಡಬೇಕು. ಆ ನಿಟ್ಟಿನಲ್ಲಿ ಯಶ್ ಅವರ ತಾಯಿ ಪುಷ್ಪ ಅವ್ರಿಗೆ ಉಪ್ಪಿ ಬೆಂಬಲ ಸೂಚಿಸಿದ್ದಾರೆ. ಇದ್ರಿಂದ ಅವರ ಸಿನಿಮೋತ್ಸಾಹ ಹೆಚ್ಚುವುದರ ಜೊತೆ ಮತ್ತಷ್ಟು ಚಿತ್ರಗಳನ್ನ ಮಾಡುವ ಆಶಯ ಮೂಡಲಿದೆ. ಕೊತ್ತಲವಾಡಿ ನಿಜಕ್ಕೂ ಒಂದೊಳ್ಳೆ ಪ್ರಯೋಗ. ಕೊಡೋ ಕಾಸಿಗೆ ಮೋಸ ಇಲ್ಲದಂತೆ ಮಸ್ತ್ ಮನರಂಜನೆ ನೀಡಲಿದೆ. ಜೊತೆಗೆ ಕೊನೆಯಲ್ಲೊಂದು ಸಂದೇಶ ಕೂಡ ನೀಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version