ಸಾಮಾನ್ಯವಾಗಿ ಸೆಪ್ಟೆಂಬರ್ 2 ಅಂದ್ರೆ ಸಾಕು, ಜೆಪಿ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗ್ತಿತ್ತು. ಆದ್ರೆ, ಈ ಬಾರಿ ಬಾದ್‌ಷಾ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಹಿ ಸುದ್ದಿ ಸಿಕ್ಕಿದೆ. ತಮ್ಮ ಬರ್ತ್‌ಡೇಗೆ ಕೆಲವು ದಿನಗಳಷ್ಟೇ ಬಾಕಿ ಇರುವಾಗ ಕಿಚ್ಚ ಸುದೀಪ್ ಬರೆದಿರೋ ಆ ಒಂದು ಸುದೀರ್ಘ ಪತ್ರದಲ್ಲಿ ಏನು ಹೇಳಿದ್ದಾರೆ..?ಮನೆ ಮುಂದೆ ಬರೋ ಫ್ಯಾನ್ಸ್ ಗೆ ಕಿಚ್ಚ ಕೊಟ್ಟ ಮೆಸೇಜ್ ಏನು? ಈ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…
- ಸೆಪ್ಟೆಂಬರ್ 2ಕ್ಕೆ ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್
- ಕಿಚ್ಚನ ಸುದೀರ್ಘ ಪತ್ರ.. ಫ್ಯಾನ್ಸ್‌ಗೆ ಭಾವುಕ ಮನವಿ!
- ‘ಸಿಂಹ ಸುಮ್ಮನೆ ಕುಳಿತಿದೆ’.. ಕಿಚ್ಚನ ಖಡಕ್ ಮೆಸೇಜ್!
- ‘ಶೀಘ್ರದಲ್ಲೇ ಮುಖಾಮುಖಿ ಭೇಟಿಯಾಗೋಣ’ ಎಂದ ಬಾದ್‌ಷಾ!
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಅಂದ್ರೆ ಅವರ ಅಭಿಮಾನಿಗಳಿಗೆ ಅದು ಕೇವಲ ಒಂದು ದಿನಾಂಕವಲ್ಲ, ಅದೊಂದು ರಾಜ್ಯಮಟ್ಟದ ಸಂಭ್ರಮ. ಪ್ರತಿ ವರ್ಷ ಸೆಪ್ಟೆಂಬರ್ 2ರಂದು ಸುದೀಪ್ ಅವರ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ನೆರೆಯುತ್ತಿದ್ದ ಅಭಿಮಾನಿಗಳು, ಕೇಕ್ ಕತ್ತರಿಸಿ, ಬೃಹತ್ ಹಾರಗಳನ್ನು ಹಾಕಿ, ಉಡುಗೊರೆಗಳನ್ನು ನೀಡಿ ದೇವರಿಗೇ ಪೂಜೆ ಮಾಡಿದಂತೆ ಸಂಭ್ರಮಿಸುತ್ತಿದ್ದರು. ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷ ಪೂರೈಸಿರೋ ಕಿಚ್ಚನ ಈ ಬರ್ತ್‌ಡೇಗೆ ಅಭಿಮಾನಿಗಳು ಅದ್ಧೂರಿ ತಯಾರಿ ನಡೆಸುತ್ತಿದ್ದರು. ಆದರೆ, ಈ ಬಾರಿ ಆ ಸಂಭ್ರಮಕ್ಕೆ ಸುದೀಪ್ ಅವರೇ ಬ್ರೇಕ್ ಹಾಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಬರೆದಿರೋ ಒಂದು ಭಾವುಕ ಪತ್ರ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಕಿಚ್ಚ ಸುದೀಪ್, “2ನೇ ಸೆಪ್ಟೆಂಬರ್ ಎಂಬ ದಿನಾಂಕವನ್ನು 30 ವರ್ಷಗಳಿಂದ ಸಂಭ್ರಮವನ್ನಾಗಿ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ಆದರೆ, ಈ ವರ್ಷ ಬಲವಾದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ನನಗೆ ಸಂಭ್ರಮವೇ ಅಲ್ಲ. ಸೆಪ್ಟೆಂಬರ್ 2ರಂದು ನಾನು ಮನೆಯ ಬಳಿ ಯಾರಿಗೂ ಲಭ್ಯವಿರುವುದಿಲ್ಲ. ನನ್ನ ಮೇಲಿನ ಪ್ರೀತಿಯಿಂದ ನೀವು ಮಾಡುವ ಸಾಮಾಜಿಕ ಕಾರ್ಯಗಳೇ ನನಗೆ ನಿಜವಾದ ಶ್ರೀರಕ್ಷೆ ಹಾಗೂ ಆಶೀರ್ವಾದ, ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ” ಎಂದು ಮನವಿ ಮಾಡಿದ್ದಾರೆ.
To all those lovable ones who have been celebrating my bday n me for years.. Heartfelt thanks ❤️.
There are several reasons for me putting out this request in form of a letter.
Hope it’s understood & taken in th right spirit .Much much luv to one n all❤️ pic.twitter.com/j9TKurIq0Y
— Kichcha Sudeepa (@KicchaSudeep) August 27, 2026
ಹುಟ್ಟುಹಬ್ಬ ಆಚರಿಸದಿರಲು ಬ್ರೇಕ್ ಹಾಕಿದರೂ, ಅಭಿಮಾನಿಗಳ ಜೋಶ್ ಹೆಚ್ಚಿಸಲು ಕಿಚ್ಚ ತಮ್ಮದೇ ಶೈಲಿಯ ಖಡಕ್ ಡೈಲಾಗ್ ಒಂದನ್ನು ಉಲ್ಲೇಖಿಸಿದ್ದಾರೆ. “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂಬ ಡೈಲಾಗ್ ಬರೆಯುವ ಮೂಲಕ, ತಾವು ಮುಂದಿನ ಬಿಗ್ ಬಜೆಟ್ ಸಿನಿಮಾಗಳಿಗೆ ಭರ್ಜರಿಯಾಗಿ ಸಜ್ಜಾಗುತ್ತಿರೋದಾಗಿ ಸುಳಿವು ನೀಡಿದ್ದಾರೆ. ನನ್ನ ಮತ್ತು ನಿಮ್ಮ ನಡುವಿನ ಬಂಧವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ, ಶೀಘ್ರದಲ್ಲೇ ಮುಖಾಮುಖಿ ಭೇಟಿಯಾಗೋಣ ಎಂದು ಅಭಯ ನೀಡಿರೋ ಅಭಿನಯ ಚಕ್ರವರ್ತಿಯ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದ್ದರೂ, ಕಿಚ್ಚನ ಮುಂದಿನ ಬೇಟೆ ಅಂದರೆ ಹೊಸ ಸಿನಿಮಾಗಳ ಕಮಾಲ್ ನೋಡಲು ಕಾದು ಕುಳಿತಿದ್ದಾರೆ.
