ಕನ್ನಡ ಚಿತ್ರರಂಗದ ಹಿರಿಯ ನಟ ಹರೀಶ್ ರಾಯ್, ‘ಕೆಜಿಎಫ್’ ಚಿತ್ರದಲ್ಲಿ ಖಾಸಿಮ್ ಚಾಚಾ ಪಾತ್ರದಿಂದ ಜನಪ್ರಿಯರಾದವರು, ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಈ ಕಷ್ಟದ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತೋರಿದ ಬೆಂಬಲವು ಎಲ್ಲರ ಮನಗೆದ್ದಿದೆ. ಹರೀಶ್ ರಾಯ್ ಅವರೇ ತಮ್ಮ ಕಷ್ಟದ ಕಾಲದಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾಡಿದ ಸಹಾಯದ ಬಗ್ಗೆ ತಿಳಿಸಿದ್ದಾರೆ.
ಹರೀಶ್ ರಾಯ್ ಅವರು ಕಳೆದ ಮೂರು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈಗ ಅವರ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದು, ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ನೀರು ತುಂಬಿದೆ. ಈ ಗಂಭೀರ ಸ್ಥಿತಿಯಲ್ಲಿ ಅವರು ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ಒಂದು ತಿಂಗಳ ಔಷಧಿಗೆ ಸುಮಾರು 3 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ವರದಿಯಾಗಿದೆ. ‘ಕೆಜಿಎಫ್’ ಚಿತ್ರೀಕರಣದ ಸಮಯದಲ್ಲಿ ಕುತ್ತಿಗೆಯ ಊತವನ್ನು ಮರೆಮಾಚಲು ದೊಡ್ಡ ಗಡ್ಡವನ್ನು ಬೆಳೆಸಿಕೊಂಡಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.
‘ಕೆಜಿಎಫ್’ ಚಿತ್ರದಲ್ಲಿ ರಾಕಿ ಭಾಯ್‌ನ ಆಪ್ತ ವಲಯದ ಚಾಚಾ ಪಾತ್ರದಲ್ಲಿ ಕಾಣಿಸಿಕೊಂಡ ಹರೀಶ್ ರಾಯ್, ಯಶ್ ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. 2024ರಲ್ಲಿ ಆಸ್ಪತ್ರೆಗೆ ದಾಖಲಾದಾಗ, ಯಶ್ ಅವರು ಹರೀಶ್ ರಾಯ್‌ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. “ನಾನು ಹಣ ಹಾಕುತ್ತೇನೆ, ನೀವು ತಲೆಕೆಡಿಸಿಕೊಳ್ಳಬೇಡಿ,” ಎಂದು ಯಶ್ ಒತ್ತಾಯಿಸಿದ್ದರು. ಹರೀಶ್ ರಾಯ್ ಅವರು ಆರ್ಥಿಕ ಸಹಾಯ ಬೇಡವೆಂದು ಕೇಳಿಕೊಂಡರೂ, ಯಶ್ ಒಪ್ಪಿಕೊಳ್ಳಲಿಲ್ಲ. “ನನ್ನ ಪತ್ನಿಯೊಂದಿಗೆ ಮಾತನಾಡಿ, ಹಣ ಕೊಡುತ್ತೇನೆ,” ಎಂದು ಯಶ್ ಹೇಳಿದ್ದರು. ಬೇಡ ಎಂದು ಸಾಕಷ್ಟು ಕೇಳಿಕೊಂಡ ಬಳಿಕ ಅವರು ಓಕೆ ಎಂದರು’ ಎಂದು ಹರೀಶ್ ರಾಯ್ ತಿಳಿಸಿದ್ದಾರೆ.
ಹರೀಶ್ ರಾಯ್ ತಮ್ಮ ಸಂದರ್ಶನವೊಂದರಲ್ಲಿ, ‘ಯಶ್‌ನ ಫೋನ್ ಅಲ್ಲಿ ಯಾರಿಗಾದ್ರೂ ಮಾತನಾಡಿಸೋಕೆ ಆಗುತ್ತಾ? ನಾನು ಮೆಸೇಜ್ ಹಾಕಿದರೆ ಸಾಕು, ಕಾಲ್ ಮಾಡುತ್ತಾರೆ. ಯಜಮಾನರು ಹೃದಯಕ್ಕೆ ಹತ್ತಿರವಾದವರು. ಕೋಟಿ ಖರ್ಚಾದರೂ ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ,” ಎಂದು ಭಾವುಕರಾಗಿ ಹೇಳಿದ್ದಾರೆ. ಯಶ್ ಮತ್ತು ದರ್ಶನ್ ಇಬ್ಬರೂ ತಮ್ಮ ಬತ್ತಳಿಕೆಯಲ್ಲಿದ್ದಾರೆ ಎಂದು ಅವರು ನಂಬಿಕೆ ವ್ಯಕ್ತಪಡಿಸಿದ್ದಾರೆ.
ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದ ನಂತರ, ಸ್ಯಾಂಡಲ್‌ವುಡ್‌ನ ಹಲವು ನಿರ್ಮಾಪಕರು, ನಟರು ಮತ್ತು ನಿರ್ದೇಶಕರು ಸಹಾಯಕ್ಕೆ ಮುಂದೆ ಬಂದಿದ್ದಾರೆ. ಶಿವರಾಜ್‌ಕುಮಾರ್ ಅವರು ಧೈರ್ಯ ತುಂಬಿದ್ದಾರೆ.
ಹರೀಶ್ ರಾಯ್ ತಮ್ಮ ಕ್ಯಾನ್ಸರ್‌ನ ವಿಷಯವನ್ನು ಆರಂಭದಲ್ಲಿ ಯಾರಿಗೂ ತಿಳಿಸಿರಲಿಲ್ಲ. ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಬಹುದು ಎಂಬ ಭಯದಿಂದ ಈ ಗುಟ್ಟನ್ನು ಮರೆಮಾಚಿದ್ದರು. ಆದರೆ, ಆರ್ಥಿಕ ಸಂಕಷ್ಟ ಮತ್ತು ಆರೋಗ್ಯದ ಕ್ಷೀಣತೆಯಿಂದಾಗಿ ಅವರು ತಮ್ಮ ಸ್ಥಿತಿಯನ್ನು ಬಹಿರಂಗಪಡಿಸಬೇಕಾಯಿತು ಎಂದು ತಿಳಿಸಿದ್ದಾರೆ.