ಚೆನ್ನೈ/ಹೈದರಾಬಾದ್: ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಮಾಲೀಕತ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾವ್ಯಾ ಮಾರನ್ (Kavya Maran) ಹಾಗೂ ಖ್ಯಾತ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಅವರ ಮದುವೆ ನವೆಂಬರ್ 11ರಂದು ನಡೆಯಲಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರ ಪ್ರೀತಿಯ ಸುದ್ದಿ ಕೇಳಿಬರುತ್ತಿದ್ದು, ಇದೀಗ ಅಧಿಕೃತವಾಗಿ ಮದುವೆಯ ದಿನಾಂಕ ಘೋಷಣೆಯಾಗಿದೆ.
ಒಂದು ವರ್ಷದಿಂದ ಪ್ರೀತಿಯ ಸುದ್ದಿ
ಕಳೆದ ಒಂದು ವರ್ಷದಿಂದ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಹಾಗೂ ಅಲ್ಲಿ ಡಿನ್ನರ್ ಡೇಟ್ ಎಂಜಾಯ್ ಮಾಡುತ್ತಿದ್ದರು ಎಂಬ ಗಾಸಿಪ್ಗಳು ಹರಿದಾಡುತ್ತಿದ್ದವು. ಈ ಎಲ್ಲ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಕೊನೆಗೂ ಅನಿರುದ್ಧ-ಕಾವ್ಯಾ ವಿವಾಹ ಶೀಘ್ರದಲ್ಲೇ ನಡೆಯಲಿದೆ ಎಂಬುದು ಖಚಿತವಾಗಿದೆ.
ಕಾವ್ಯಾ ಮಾರನ್ ಅವರಿಗೆ ಈಗ 33 ವರ್ಷ ಹಾಗೂ ಅನಿರುದ್ಧ್ ರವಿಚಂದರ್ಗೆ 35 ವರ್ಷ ವಯಸ್ಸು. ಈ ಜೋಡಿ ಸ್ಟೇಟಸ್ಗೆ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ತಮ್ಮ ಹಾಡಿನ ಮೂಲಕವೇ ಎಲ್ಲರನ್ನೂ ಕುಣಿಸುವ ಅನಿರುದ್ಧ್, ಮದುವೆ ಮೂಲಕ ಹೊಸ ಹೆಜ್ಜೆ ಹಾಕಲು ಮುಂದಾಗಿದ್ದಾರೆ.
ಆರತಕ್ಷತೆಗೆ ಗಣ್ಯರ ಆಹ್ವಾನ
ಕಲಾನಿಧಿ ಮಾರನ್ ದಂಪತಿ ನವೆಂಬರ್ 21ರಂದು ನಡೆಯಲಿರುವ ಆರತಕ್ಷತೆಗೆ ಅನೇಕ ಗಣ್ಯರು ಹಾಗೂ ಆಪ್ತರಿಗೆ ಆಹ್ವಾನ ನೀಡಿದ್ದಾರೆ. ಕ್ರೀಡೆ, ಸಿನಿಮಾ ಹಾಗೂ ಉದ್ಯಮ ಕ್ಷೇತ್ರಗಳ ಪ್ರಮುಖರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಅನಿರುದ್ಧ್ ರವಿಚಂದರ್: ಸಂಗೀತ ಲೋಕದ ಸ್ಟಾರ್
ಅನಿರುದ್ಧ್ ರವಿಚಂದರ್ ತಮಿಳು ಸಿನಿಮಾ ಸಂಗೀತ ಲೋಕದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಲ್ಲೊಬ್ಬರು. ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರದ ಹಾಡುಗಳ ಮೂಲಕ ವಿಶೇಷ ಖ್ಯಾತಿ ಗಳಿಸಿದ ಅವರು, ನಟ ವಿಜಯ್ ಅವರ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅವರ ಹಾಡುಗಳು ಯುವಕರಲ್ಲಿ ಭಾರೀ ಜನಪ್ರಿಯತೆ ಹೊಂದಿವೆ.
ಕಾವ್ಯಾ ಮಾರನ್: ಐಪಿಎಲ್ ಲೋಕದ ಗಮನ ಸೆಳೆದ ವ್ಯಕ್ತಿತ್ವ
ಕಾವ್ಯಾ ಮಾರನ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಮುಖವಾಗಿದ್ದು, ಐಪಿಎಲ್ ಪಂದ್ಯಗಳಲ್ಲಿ ತಂಡದ ಆಸನದಿಂದ ಚಿಯರ್ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಐಪಿಎಲ್ ಲೋಕದ ಪ್ರಮುಖ ಮುಖ ಕಾವ್ಯಾ ಮಾರನ್ ಹಾಗೂ ಸಂಗೀತ ಲೋಕದ ಸ್ಟಾರ್ ಅನಿರುದ್ಧ್ ರವಿಚಂದರ್ ಅವರ ಮದುವೆ ನವೆಂಬರ್ನಲ್ಲಿ ನಡೆಯಲಿದ್ದು, ಕ್ರೀಡೆ ಹಾಗೂ ಸಿನಿಮಾ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದೆ. ಈ ಜೋಡಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.
