ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಅವರನ್ನು ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸಲಾಗಿದೆ. ಇಂದು ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (MMPRC) ವತಿಯಿಂದ ನಡೆದಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾಲ್ಡೀವ್ಸ್ ಭೇಟಿಗೆ ಒಂದು ತಿಂಗಳ ಮೊದಲು ಈ ಬೆಳವಣಿಗೆ ಜರುಗಿದೆ. ಕತ್ರಿನಾ ಅವರನ್ನು ‘ಸನ್ನಿ ಸೈಡ್ ಆಫ್ ಲೈಫ್’ ಅಭಿಯಾನದ ಮುಖವನ್ನಾಗಿ ಆಯ್ಕೆ ಮಾಡಲಾಗಿದೆ, ಇದರ ಮೂಲಕ ಮಾಲ್ಡೀವ್ಸ್‌ನ ಸೌಂದರ್ಯ, ಐಷಾರಾಮಿ ರೆಸಾರ್ಟ್‌ಗಳು ಮತ್ತು ಪ್ರಕೃತಿಯ ಆಕರ್ಷಣೆಯನ್ನು ಜಾಗತಿಕವಾಗಿ ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ.
2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಅದರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಎತ್ತಿ ತೋರಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಲಕ್ಷದ್ವೀಪದ ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸಿದ್ದವು, ಇದರಿಂದ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಆಯ್ಕೆ ಮಾಡಲು ಆರಂಭಿಸಿದರು. ಈ ಸಂದರ್ಭದಲ್ಲಿ, ಮಾಲ್ಡೀವ್ಸ್‌ನ ಆಡಳಿತ ಪಕ್ಷದ ಕೆಲವು ಸಚಿವರು ಪ್ರಧಾನಿ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳು ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾದವು. ಸಾಮಾಜಿಕ ಜಾಲತಾಣಗಳಲ್ಲಿ #BoycottMaldives ಎಂಬ ಹ್ಯಾಶ್‌ಟ್ಯಾಗ್ ಜನಪ್ರಿಯವಾಗಿ, ಸಾವಿರಾರು ಭಾರತೀಯರು, ಸೆಲೆಬ್ರಿಟಿಗಳು ಮತ್ತು ಪ್ರಯಾಣ ಪ್ರಭಾವಿಗಳು ಮಾಲ್ಡೀವ್ಸ್‌ಗೆ ಭೇಟಿ ನೀಡದಂತೆ ಕರೆ ನೀಡಿದರು.
