ಬಾಲಿವುಡ್‌ನ ಜನಪ್ರಿಯ ನಟ ಕಾರ್ತಿಕ್ ಆರ್ಯನ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ನಿರ್ದೇಶಕ ಕಬೀರ್ ಖಾನ್ ಅವರ ಮುಂಬರುವ ಸಿನಿಮಾದ ಶೂಟಿಂಗ್ ವೇಳೆ ಕಾರ್ತಿಕ್ ಆರ್ಯನ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಈ ಅಪಘಾತ ಸಂಭವಿಸಿದೆ.
ಕಬೀರ್ ಖಾನ್ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ಕಿಕ್ ಬಾಕ್ಸಿಂಗ್ ತರಬೇತುದಾರನ ಪಾತ್ರವನ್ನು ನಿರ್ವಹಿಸುತ್ತಿದ್ದು, ಪಾತ್ರಕ್ಕೆ ತಕ್ಕಂತೆ ಸಾಕಷ್ಟು ದೈಹಿಕ ತರಬೇತಿಯನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆ್ಯಕ್ಷನ್ ಮತ್ತು ಸಾಹಸ ದೃಶ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿರುವ ಹಿನ್ನೆಲೆ ಕಾರ್ತಿಕ್ ಅವರ ಪಾತ್ರ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಸಿನಿಮಾದ ಸಾಹಸ ದೃಶ್ಯವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಕಾರ್ತಿಕ್ ಅವರ ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಶೂಟಿಂಗ್‌ನ ಕೊನೆಯ ಎರಡು ದಿನಗಳ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯವಾದ ಬಳಿಕ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ನಂತರ ವೈದ್ಯರ ಸಲಹೆಯಂತೆ ಕಾರ್ತಿಕ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಟನ ಆರೋಗ್ಯದ ಕುರಿತು ಅವರ ತಂಡದಿಂದ ಹೆಚ್ಚಿನ ಅಧಿಕೃತ ಮಾಹಿತಿ ಹೊರಬರಬೇಕಿದೆ. ಆದರೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಸುದ್ದಿ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ನೀಡಿದೆ.
ಕಾರ್ತಿಕ್ ಆರ್ಯನ್ ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣ ಕ್ಷೇತ್ರದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ. ಡೋಪಮೈನ್ ಸ್ಟುಡಿಯೋಸ್ ಅಡಿಯಲ್ಲಿ ಅವರು ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಕಾರ್ತಿಕ್ ಅವರ ವೃತ್ತಿಜೀವನದಲ್ಲಿ ಮತ್ತೊಂದು ವಿಶೇಷ ಚಿತ್ರವಾಗಲಿದೆ. ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ಅವರು, ಸಿನಿಮಾದ ಪ್ರತಿಯೊಂದು ಹಂತದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.
