ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ರ ಟ್ರೈಲರ್ ಇಂದು (ಸೆ. 22, 2025) ರಂದು ಬಿಡುಗಡೆಯಾಗಿದೆ. 2022ರ ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ: ಎ ಲೆಜೆಂಡ್ ಚಿತ್ರದ ಪ್ರೀಕ್ವೆಲ್ ಆಗಿದೆ. ಈ ಚಿತ್ರವು ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಕಥೆಯನ್ನು ಒಳಗೊಂಡಿದೆ. ಇದೇ ಅಕ್ಟೋಬರ್ 2, 2025ರಂದು ಈ ಚಿತ್ರ ತೆರೆಗೆ ಬರಲಿದೆ. ಕಾಂತಾರದ ಮೊದಲ ಭಾಗದ ಜನಪ್ರಿಯತೆಯು ಚಾಪ್ಟರ್ 1 ಮೇಲೆ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಸಿನಿರಸಿಕರು ಈ ಚಿತ್ರ ಕಾತರದಿಂದ ಕಾಯುತ್ತಿದ್ದಾರೆ.
ಆದರೆ, ಚಿತ್ರದ ಬಿಡುಗಡೆಗೂ ಮುನ್ನವೇ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಪೋಸ್ಟ್ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟ್ ಚಿತ್ರದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು, ಸಾಮಾಜಿಕ ವಿಭಜನೆಯನ್ನು ಸೃಷ್ಟಿಸುವ ಯತ್ನವೆಂದು ಆಕ್ಷೇಪಗಳು ಕೇಳಿಬಂದಿವೆ.
ವಿವಾದಕ್ಕೆ ಕಾರಣವಾದ ಪೋಸ್ಟ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಪೋಸ್ಟ್‌ನಲ್ಲಿ, ಕಾಂತಾರ ಚಾಪ್ಟರ್ 1 ಚಿತ್ರವನ್ನು ವೀಕ್ಷಿಸಲು ಬರುವವರು ಮೂರು ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಲಾಗಿದೆ:
- ಮದ್ಯಪಾನ ಮಾಡಬಾರದು
- ಧೂಮಪಾನ ಮಾಡಬಾರದು
- ಮಾಂಸಾಹಾರ ಸೇವಿಸಬಾರದು
ಈ ಪೋಸ್ಟ್‌ನಲ್ಲಿ, ಚಿತ್ರವೀಕ್ಷಣೆಗೆ ಬರುವವರು ಈ ನಿಯಮಗಳನ್ನು ಸಂಕಲ್ಪವಾಗಿ ಸ್ವೀಕರಿಸಬೇಕೆಂದು ಒತ್ತಾಯಿಸಲಾಗಿದೆ. ಈ ಪ್ರಕಟಣೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದನ್ನು ನಗೆಪಾಟಲಿಗೆ ತಿರುಗಿಸಿದ್ದಾರೆ. ಈ ಪೋಸ್ಟ್‌ಗೆ ಚಿತ್ರತಂಡಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಪೋಸ್ಟ್‌ನಿಂದಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಸೇವಿಸುವವರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಯತ್ನವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಕೃತ್ಯವು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ ಎಂದು ಟೀಕಾಕಾರರು ಆಕ್ಷೇಪಿಸಿದ್ದಾರೆ.
