ಮುಂಬೈ: ಕನ್ನಡದಲ್ಲಿ ನಟಿ ರಮ್ಯಾ ಎದುರು ‘ಜೂಲಿ’ ಸಿನಿಮಾದಲ್ಲಿ ನಟನೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಡಿನೊ ಮೊರಿಯಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 65 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ನಟನ ಮನೆ ಮೇಲೆ ದಾಳಿ ನಡೆಸಿ ಸತತ ವಿಚಾರಣೆ ಮಾಡಿದ್ದು, ಎಂಟು ಗಂಟೆಗಳ ಸತತ ತನಿಖೆ, ವಿಚಾರಣೆಯ ಬಳಿಕ ನಟನನ್ನು ಬಂಧಿಸಿದ್ದಾರೆ.
ಬಂಧನದ ವಿವರ
ಕನ್ನಡ ಸಿನಿಮಾದಲ್ಲೂ ನಟನೆ ಮಾಡಿರುವ ಬಾಲಿವುಡ್ನ ಜನಪ್ರಿಯ ನಟ ಡಿನೊ ಮೊರಿಯಾ ಬಂಧನಕ್ಕೊಳಗಾಗಿದ್ದಾರೆ. 65.54 ಕೋಟಿ ರೂಪಾಯಿ ಹಗರಣದ ತನಿಖೆಯ ಸಂಬಂಧ ನಟನನ್ನು ಅವರ ಸ್ವಗೃಹದಿಂದಲೇ ಮುಂಬೈ ಪೊಲೀಸ್ ಆರ್ಥಿಕ ಅಪರಾಧ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮುಂಬೈನ ಮಿಥಿ ನದಿಯ (Mithi River) ಹೂಳು ತೆಗೆಯುವ ಮತ್ತು ನವೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಗಳ ಅವ್ಯವಹಾರ ಹಾಗೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.
ಎಂಟು ಗಂಟೆಗಳ ವಿಚಾರಣೆ
ಮುಂಬೈನ ಬಾಂದ್ರಾದಲ್ಲಿರುವ ನಟ ಡಿನೊ ಮೊರಿಯಾ ನಿವಾಸದಲ್ಲಿ ಮುಂಬೈ ಪೊಲೀಸರು ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ಬಳಿಕ ನಟನನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಬಿಎಂಸಿ (BMC) ಕಚೇರಿಗೆ ಸುಮಾರು 65.54 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಮಿಥಿ ನದಿ ಹೂಳು ತೆಗೆಯುವ ಗುತ್ತಿಗೆಗೆ ಸಂಬಂಧಿಸಿದಂತೆ ನಡೆದ ಆರ್ಥಿಕ ವ್ಯವಹಾರಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಗರಣದಲ್ಲಿ ಗುತ್ತಿಗೆದಾರರು, ಮಧ್ಯವರ್ತಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಿಂದಿನ ವಿಚಾರಣೆ
ಡಿನೊ ಮೊರಿಯಾ ಅವರನ್ನು ಈ ಹಿಂದೆ ಮೇ 2025ರಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿತ್ತು. ತನಿಖೆಯ ವೇಳೆ ಪೊಲೀಸರಿಗೆ ದೊರೆತ ಫೋನ್ ದಾಖಲೆಗಳು ಮತ್ತು ನಟನ ಸಹೋದರ ಸ್ಯಾಂಟಿನೋ ಮೊರಿಯಾ ಅವರ ‘ಯುಬಿಒ ರೈಡ್ಜ್’ (UBO Ridez) ಕಂಪನಿಯ ಆರ್ಥಿಕ ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಹಗರಣದಲ್ಲಿ ಈಗಾಗಲೇ 2025ರಲ್ಲಿ ಬಂಧನಕ್ಕೊಳಗಾಗಿರುವ ಕೇತನ್ ಕದಮ್ ಎಂಬಾತನ ಮೇಲೆಯೂ ತನಿಖೆಯ ಗಮನಹರಿಸಲಾಗಿದೆ. ನದಿ ಸ್ವಚ್ಛತಾ ಕಾರ್ಯದ ಗುತ್ತಿಗೆಗಳ ಹಂಚಿಕೆ ಮತ್ತು ಅದಕ್ಕೆ ಸಂಬಂಧಿಸಿದ ಹಣಕಾಸಿನ ಪಾವತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂಬೈ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.
ನಟನ ವೃತ್ತಿಜೀವನ
ಡಿನೊ ಮೊರಿಯಾ ಬಾಲಿವುಡ್ನ ಬಲು ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು. ಕನ್ನಡದಲ್ಲಿ ನಟಿ ರಮ್ಯಾ ಜೊತೆಗೆ 2006ರಲ್ಲಿ ಬಿಡುಗಡೆ ಆಗಿದ್ದ ‘ಜೂಲಿ’ ಸಿನಿಮಾದಲ್ಲಿ ನಟಿಸಿದ್ದರು. ಅದರ ಹೊರತಾಗಿ ಹಿಂದಿಯ ಸೂಪರ್ ಹಿಟ್ ಸಿನಿಮಾ ‘ರಾಜ್’, ‘ಜಿಸ್ಮ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಸಹ ಡಿನೊ ಮೊರಿಯಾ ನಟನೆ ಮಾಡಿದ್ದಾರೆ. 2025ರಲ್ಲಿ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ನಟನೆಯ ‘ಹೌಸ್ಫುಲ್ 5’ ಡಿನೊ ನಟಿಸಿದ್ದ ಕೊನೆಯ ಸಿನಿಮಾ. ಇದೀಗ ಅವರು ಮಿಥಿ ನದಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
