ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ-1 ಚಿತ್ರದಲ್ಲಿ ನಾಗಸಾಧು ಆಗಿ ಕಾಣಸಿಗಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಮತ್ತೊಂದು ಫಸ್ಟ್ ಲುಕ್ ರಿವೀಲ್ ಆಗಿದ್ದು, ನೋಡುಗರಿಗೆ ಸಖತ್ ಕಿಕ್ ಕೊಡ್ತಿದೆ. ಇದನ್ನ ನೋಡಿದ ಬಳಿಕ ಚಿತ್ರದ ಮೇಲಿನ ಭರವಸೆ ಮತ್ತಷ್ಟು ಹೆಚ್ಚಿದೆ. ನೋಡುಗರ ನಾಡಿಮಿಡಿತ ಹೆಚ್ಚಿಸುವಂತಿರೋ ಆ ಫಸ್ಟ್‌ಲುಕ್‌ನ ಸ್ಟೋರಿ ಇಲ್ಲಿದೆ ನೋಡಿ.
- ಡಿವೈನ್‌ಸ್ಟಾರ್ ರಿಷಬ್ ಲುಕ್ ರಿವೀಲ್.. ಕಾಂತಾರ ಕಿಕ್
- ದೈವಿಕ ಅಂಶಗಳ ಮಹಾ ದಂತಕಥೆ ಕಾಂತಾರ ಚಾಪ್ಟರ್-1
- ಭಾವಪರವಶನಾಗಿ ಡೊಳ್ಳು ಭಾರಿಸುತ್ತಿರೋ ರಿಷಬ್ ಶೆಟ್ಟಿ
- 250ದಿನ ಶೂಟಿಂಗ್.. ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಪೋಸ್ಟ್
ಕಾಂತಾರ ಬರೀ ಸಿನಿಮಾ ಅಲ್ಲ.. ಹತ್ತು ಹಲವು ಬೆರಗುಗಳ ಮಹಾ ಸಾಗರ. ನಮ್ಮ ಕರಾವಳಿ ಮಣ್ಣಿನ ಸೊಗಡು, ಸೊಬಗಿನ ಆಗರ. ಅದನ್ನ ವಿಶ್ವ ಸಿನಿದುನಿಯಾದ ಮುಂದೆ ತೆರೆದಿಡೋಕೆ ರಿಷಬ್ ಶೆಟ್ಟಿ ಮಾಡಿರೋ ಕೆಲಸ ಅಂತಿಂಥದ್ದಲ್ಲ. ಈ ಸಿನಿಮಾಗಾಗಿ ಬರೀ ಬೆವರು ಸುರಿಸಿಲ್ಲ. ಹಗಲಿರುಳು ಕಷ್ಟ ಪಟ್ಟಿದ್ದಾರೆ. ಅವ್ರ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದಕ್ಕೆ ಕಾಂತಾರ-1 ಉತ್ತರ ನೀಡಲಿದೆ.
ಸೆಪ್ಟೆಂಬರ್ 20ಕ್ಕೆ ಟ್ರೈಲರ್ ರಿಲೀಸ್ ಎನ್ನಲಾಗಿತ್ತು. ಆದ್ರೀಗ ಅದು ಮತ್ತಷ್ಟು ವಿಳಂಬವಾಗಿ, ಸೆಪ್ಟೆಂಬರ್ 22ಕ್ಕೆ ಕಾಂತಾರ-1 ರಹಸ್ಯ ಬಿಚ್ಚಿಡೋ ಕಾರ್ಯ ಟ್ರೈಲರ್ ಮಾಡಲಿದೆ. ಆದ್ರೆ ಅಕ್ಟೋಬರ್ 2ಕ್ಕೆ ತೆರೆಗೆ ಬರುವ ವಿಚಾರದಲ್ಲಿ ಮಾತ್ರ ಯಾವುದೇ ವ್ಯತ್ಯಯ ಇಲ್ಲ. ಮೇಕಿಂಗ್‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿರೋ ಕಾಂತಾರ ಪ್ರೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ಮತ್ತಷ್ಟು, ಮಗದಷ್ಟು ದೈವಿಕ ಅಂಶಗಳಿಗೆ ಕನ್ನಡಿ ಹಿಡಿಯುವ ಕಾರ್ಯ ಮಾಡಿದ್ದಾರೆ.
ನಾಗಸಾಧು ಆಗಿ ಕಾಣಸಿಗಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಒಬ್ಬ ಸಾಧು ಡೊಳ್ಳು ಹಿಡಿದು ಭಾವಪರವಶನಾಗಿ ಅದನ್ನ ಭಾರಿಸುತ್ತಿರೋ ಲುಕ್ ರಿವೀಲ್ ಆಗಿದೆ. ಅದರಲ್ಲಿ ರಿಷಬ್ ತಮ್ಮ ಮೊನಚಾದ ಗಡ್ಡ, ಮುಡಿ ಕಟ್ಟಿರೋ ಕೂದಲಿನಿಂದ ಭಕ್ತಿಯ ಪ್ರತೀಕವಾಗಿ ಕಾಣಸಿಗ್ತಾರೆ. ಈ ಲುಕ್ ಸಿನಿಮಾ ನೋಡುಗರ ನಾಡಿಮಿಡಿತ ಅಕ್ಷರಶಃ ಹೆಚ್ಚಿಸಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾ, ಈಗಾಗ್ಲೇ 350ರಿಂದ 400 ಕೋಟಿ ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡಿರೋದು ಇಂಟರೆಸ್ಟಿಂಗ್. ಪ್ರಗತಿ ರಿಷಬ್ ಶೆಟ್ಟಿ ಕೂಡ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದು, ಸುಮಾರು 250 ದಿನಗಳ ಶೂಟಿಂಗ್ ಜರ್ನಿ ಇದು, ಲೆಕ್ಕವಿಲ್ಲದಷ್ಟು ಲೇಟ್ ನೈಟ್‌ಗಳು ಅಂತ ಬರೆದುಕೊಂಡಿದ್ದಾರೆ. ಅಂದಹಾಗೆ ರುಕ್ಮಿಣಿ ವಸಂತ್, ರಿಷಬ್ ಶೆಟ್ಟಿ ಸೇರಿದಂತೆ ಎಲ್ಲರ ಕಾಸ್ಟ್ಯೂಮ್ ಡಿಸೈನರ್ ಇವರೇ. ಕಾಂತಾರ ಚಿತ್ರಕ್ಕೂ ಪ್ರಗತಿ ರಿಷಬ್ ಶೆಟ್ಟಿಯೇ ವಸ್ತ್ರವಿನ್ಯಾಸ ಮಾಡಿದ್ರು. ಈಗ ಕಾಂತಾರ-1ಗೂ ಅವರೇ ಮಾಡಿರೋದು ಇಂಟರೆಸ್ಟಿಂಗ್.
ಇದಾದ ಬಳಿಕ ರಿಷಬ್ ಶೆಟ್ಟಿ ಜೈ ಹನುಮಾನ್ ಅನ್ನೋ ಮತ್ತೊಂದು ಮೆಗಾ ವೆಂಚರ್‌ನಲ್ಲಿ ತೊಡಗಿಸಿಕೊಳ್ಳಲಿದ್ದು, ಅವ್ರ ದೇಹ ಹಾಗೂ ಮನಸ್ಸನ್ನು ದೈವಿಕ ಅಂಶಗಳಿಂದ ಮತ್ತಷ್ಟು ಮಾಗಿಸಿಕೊಂಡಿದ್ದಾರೆ. ಸನಾತನದ ಅಂಶಗಳಿಗೆ ಒಗ್ಗಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಈ ಬಾರಿ ದೈವಿಕ ಅಂಶಗಳ ದಂತಕಥೆ ಕಾಂತಾರ-1ನಲ್ಲಿ ಸಾಕಷ್ಟು ಸರ್‌ಪ್ರೈಸ್‌ಗಳನ್ನ ನೋಡುಗರಿಗೆ ಉಣಬಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್