ಕಾಂತಾರ-1 ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕಾಂತಾರ ಮಾಡಿದ ಹಂಗಾಮದಿಂದ ಸಹಜವಾಗಿಯೇ ಪ್ರೀಕ್ವೆಲ್ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಪ್ರೀ-ರಿಲೀಸ್ ಬ್ಯುಸಿನೆಸ್‌ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಶೆಟ್ರ ಮಾಸ್ಟರ್‌ಪೀಸ್. ಹೌದು.. ಆಂಧ್ರ ಡಿಸ್ಟ್ರಿಬ್ಯೂಷನ್ ರೈಟ್ಸ್ ದಾಖಲೆ ಮಾರಾಟಕ್ಕೆ ಮಾತುಕತೆ ನಡೆಯುತ್ತಿದ್ದು.
ಕಾಂತಾರ ಕನ್ನಡ ಚಿತ್ರರಂಗದತ್ತ ಪರಭಾಷಾ ಚಿತ್ರಪ್ರೇಮಿಗಳು ಹಾಗೂ ಫಿಲ್ಮ್ ಮೇಕರ್‌ಗಳನ್ನ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕರಾವಳಿ ನೆಲದ ಮಣ್ಣಿನ ಸೊಗಡು, ಸೊಬಗಿನ ದೃಶ್ಯಕಾವ್ಯವದು. ಹೊಂಬಾಳೆ ಫಿಲಂಸ್ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳನ್ನ ಈ ಕಾಂತಾರ ಮೂಲಕ ವಿಶ್ವಕ್ಕೆ ಸಾರಿದ ಮಹೋನ್ನತ ಚಿತ್ರ. ಸೆಪ್ಟೆಂಬರ್ 30, 2022ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 450 ಕೋಟಿ ಬ್ಯುಸಿನೆಸ್ ಮಾಡಿತ್ತು.
ಯಾವುದೇ ನಿರೀಕ್ಷೆಗಳು ಇಲ್ಲದೆಯೇ ಹೀಗೆ ಸಣ್ಣ ಬಜೆಟ್ ಸಿನಿಮಾವೊಂದು ಕಂಟೆಂಟ್‌ನಿಂದ ಬಾಕ್ಸ್ ಆಫೀಸ್ ರೂಲ್ ಮಾಡಿದ್ದು ಖುಷಿಯ ವಿಚಾರ. 14 ಕೋಟಿ ಬಜೆಟ್ ಸಿನಿಮಾ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸಿ, ಗಟ್ಟಿ ಕಥೆಯ ಒಂದೊಳ್ಳೆ ಸಿನಿಮಾಗಿರೋ ತಾಕತ್ತು ಎಂಥದ್ದು ಅನ್ನೋದನ್ನ ಪರಿಚಯಿಸಿತ್ತು. ಇದೀಗ ಬರೋಬ್ಬರಿ ಮೂರು ವರ್ಷಗಳ ನಂತ್ರ ಇದೇ ಅಕ್ಟೋಬರ್ 2ಕ್ಕೆ ಕಾಂತಾರ ಚಿತ್ರದ ಪ್ರೀಕ್ವೆಲ್ ಬರ್ತಿದೆ. ಅದೇ ಕಾಂತಾರ-1.
ಆದ್ರೆ ಈ ಬಾರಿ ರಿಷಬ್ ಶೆಟ್ಟಿ ಈ ಸಿನಿಮಾದ ಕಾಂತಾರಗಿಂತ ಹತ್ತು ಪಟ್ಟು ಜೋರಾಗಿ ಮಾಡಿದ್ದಾರೆ. ಮೇಕಿಂಗ್, ಪಾತ್ರಗಳು, ಕಥೆ, ಪರ್ಫಾಮೆನ್ಸ್ ಹೀಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾಡಿದ್ದಾರೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ, ಕನಿಷ್ಟ 1000 ಕೋಟಿ ಗಳಿಸೋ ನಿರೀಕ್ಷೆಯಿದೆ. ಯಾಕಂದ್ರೆ ಕೆಜಿಎಫ್, ಬಾಹುಬಲಿ, ಪುಷ್ಪ ಸಿನಿಮಾಗಳ ರೀತಿ ಮೊದಲ ಭಾಗದಿಂದ ಜನಕ್ಕೆ ಈಗಾಗ್ಲೇ ಈ ಸಿನಿಮಾ ಚಿರಪರಿಚಿತ. ಹಾಗಾಗಿ ಪ್ರೇಕ್ಷಕರು ಕಾಂತಾರ-1 ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಪಕ್ಕದ ಆಂಧ್ರ ಹಾಗೂ ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್‌ಗೆ ಪ್ರತಿಷ್ಠಿತ ಡಿಸ್ಟ್ರಿಬ್ಯೂಷನ್ ಹಾಗೂ ಪ್ರೊಡಕ್ಷನ್ ಹೌಸ್‌ಗಳು ನಾ ಮುಂದು, ತಾ ಮುಂದು ಅಂತ ಮುಗಿಬಿದ್ದಿವೆ. ಒಂದಲ್ಲ ಎರಡಲ್ಲ ಸುಮಾರು ನಾಲ್ಕೈದು ಬಿಗ್ ಬ್ಯಾನರ್‌ಗಳು 100 ಕೋಟಿ ಕೊಟ್ಟು ಕಾಂತಾರ-1 ತೆಲುಗು ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಲು ಸಜ್ಜಾಗಿವೆ. ಈಗಾಗ್ಲೇ ಒಂದು ಹಂತದ ಮಾತುಕತೆ ನಡೆಸಿರೋ ಹೊಂಬಾಳೆ ನಿರ್ಮಾಣ ಸಂಸ್ಥೆ, ಮುಂದಿನ ವಾರ ಕಾಂತಾರ-1 ತೆಲುಗು ರೈಟ್ಸ್ ಯಾರ ಪಾಲಾಗುತ್ತೆ ಅನ್ನೋದನ್ನ ಅಫಿಶಿಯಲಿ ಅನೌನ್ಸ್ ಮಾಡಲಿದೆ.
ಅಂದಹಾಗೆ 3 ವರ್ಷಗಳ ಹಿಂದೆ ಕಾಂತಾರ ಚಿತ್ರದ ವಿತರಣಾ ಹಕ್ಕುಗಳನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ತಮ್ಮ ಗೀತಾ ಆರ್ಟ್ಸ್ ಬ್ಯಾನರ್ ಮೂಲಕ ತೆಲಂಗಾಣ ಹಾಗೂ ಆಂಧ್ರದಲ್ಲಿ ರಿಲೀಸ್ ಮಾಡಿದ್ರು. ಬಹುಶಃ ಅವರಿಗೇ ಗೊತ್ತಿಲ್ಲದಂತೆ ಆಗ ಸಿನಿಮಾ ಬರೋಬ್ಬರಿ 30ಕ್ಕೂ ಅಧಿಕ ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಒನ್ಸ್ ಅಗೈನ್ ಗೀತಾ ಆರ್ಟ್ಸ್ ಕೂಡ ಕಾಂತಾರ-1 ರೈಟ್ಸ್‌ಗೆ ರೇಸ್‌ನಲ್ಲಿರೋದು ವಿಶೇಷ.
ಈ ಬಾರಿ ಬರೀ ಬೆಳಕಲ್ಲ ದರ್ಶನ ಅಂತ ಹೇಳ್ತಿರೋ ರಿಷಬ್ ಶೆಟ್ರು, ಕಾಂತಾರ-1ಗಾಗಿ ಹೊಸ ಪ್ರಪಂಚವನ್ನೇ ಸೃಷ್ಠಿಸಿದ್ದಾರೆ. ಅತ್ಯದ್ಭುತ ಕಲಾವಿದರು, ತಂತ್ರಜ್ಞರ ಮೂಲಕ ಕಾಂತಾರ-1 ಕಟ್ಟಿದ್ದಾರೆ. ಹಾಗಾಗಿ ದೊಡ್ಡ ಮಟ್ಟದ ನಿರೀಕ್ಷೆಯಂತೆ ಹೆಚ್ಚೂ ಕಡಿಮೆ ಸಾವಿರ ಕೋಟಿ ಕಲೆಕ್ಷನ್ ನಿರೀಕ್ಷೆಯಿದೆ.