ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಮತ್ತು ನಿರ್ದೇಶಕ ಎಸ್.ಎಸ್. ಡೇವಿಡ್ (55) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೊಲೀಸ್ ಸ್ಟೋರಿ, ಜೈಹಿಂದ್, ಅಗ್ನಿ ಐಪಿಎಸ್ ಮತ್ತು ಧೈರ್ಯ ಅಂತತಹ ಜನಪ್ರಿಯ ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದು, ಕೆಲವನ್ನು ನಿರ್ದೇಶನ ಮಾಡಿದ್ದರು. ಆರ್.ಆರ್. ನಗರದ ಎಸ್.ಎಸ್. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಎಸ್.ಎಸ್. ಡೇವಿಡ್ ಅವರು ಮೆಡಿಕಲ್ ಶಾಪ್‌ಗೆ ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸಂಬಂಧಿಕರು ಮತ್ತು ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯದಿದ್ದರು. ಆದರೆ, ದುರಾದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯ ವೈದ್ಯರು ಹೃದಯಾಘಾತವೇ ಡೇವಿಡ್ ಅವರ ಸಾವಿಗೆ ಕಾರಣ ಎಂದು ದೃಢಪಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಎಸ್.ಎಸ್. ಡೇವಿಡ್ ಅವರು ಕಥೆಗಾರರಾಗಿ ಮತ್ತು ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಪೊಲೀಸ್ ಸ್ಟೋರಿ ಚಿತ್ರದ ಮೂಲಕ ಅವರು ಗಮನ ಸೆಳೆದರು. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಿತ್ತು. ಇದೇ ರೀತಿ ಜೈಹಿಂದ್ ಮತ್ತು ಅಗ್ನಿ ಐಪಿಎಸ್ ಚಿತ್ರಗಳು ಕೂಡ ಜನಮನ ಗೆದ್ದಿದ್ದವು. ಇವುಗಳ ಜೊತೆಗೆ ಹಾಯ್ ಬೆಂಗಳೂರು ಮತ್ತು ಧೈರ್ಯ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದರು.
ಡೇವಿಡ್ ಅವರ ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೊಡುಗೆಯನ್ನು ಸ್ಮರಿಸಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.