ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಸಭ್ಯ ಕಾಮೆಂಟ್‌ಗಳು ಮತ್ತು ಮಹಿಳಾವಿರೋಧಿ ಟ್ರೋಲಿಂಗ್ ಚಿತ್ರರಂಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ & ಈಕ್ವಾಲಿಟಿ (FIRE) ಸಂಸ್ಥೆಯು ಕರ್ನಾಟಕ ಗೃಹ ಸಚಿವರಿಗೆ ಪತ್ರ ಬರೆದು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ. ರಮ್ಯಾ ಅವರಿಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ನಟ ದರ್ಶನ್‌ರ ಜಾಮೀನು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆದಿತ್ತು. ಈ ಕುರಿತು ರಮ್ಯಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕೆಲವು ಬರಹಗಳನ್ನು ಬರೆದು ಶೇರ್ ಮಾಡಿಕೊಂಡಿದ್ದರು. ಆದರೆ, ಈ ಪೋಸ್ಟ್‌ಗೆ ದರ್ಶನ್ ಅಭಿಮಾನಿಗಳೆಂದು ಕರೆದುಕೊಳ್ಳುವ ಕೆಲವರು ಅವಹೇಳನಕಾರಿ ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ರಮ್ಯಾ ಆರೋಪಿಸಿದ್ದಾರೆ. ಈ ಕಾಮೆಂಟ್‌ಗಳು ಕೇವಲ ವೈಯಕ್ತಿಕ ದಾಳಿಯಷ್ಟೇ ಅಲ್ಲ, ಮಹಿಳೆಯರ ವಿರುದ್ಧ ದ್ವೇಷಪೂರಿತ ಧೋರಣೆಯನ್ನು ಪ್ರತಿಬಿಂಬಿಸುತ್ತವೆ ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮ್ಯಾ ಅವರ ಈ ಧ್ವನಿಗೆ ಚಿತ್ರರಂಗದ ಹಲವು ಗಣ್ಯರು ಬೆಂಬಲ ಸೂಚಿಸಿದ್ದಾರೆ. ಬಿಗ್‌ಬಾಸ್ ವಿಜೇತ ನಟ ಪ್ರಥಮ್, ರಮ್ಯಾ ಪರವಾಗಿ ಧ್ವನಿಯೆತ್ತಿದ್ದು, ಎಲ್ಲರೂ ಒಗ್ಗಟ್ಟಾಗಿ ಈ ಅವಮಾನಕಾರಿ ಧೋರಣೆಯ ವಿರುದ್ಧ ನಿಲ್ಲಬೇಕೆಂದು ಕರೆ ನೀಡಿದ್ದಾರೆ.
ಇದೇ ರೀತಿ, ದೊಡ್ಮನೆ ಕುಟುಂಬದ ನಟ ವಿನಯ್ ರಾಜ್‌ಕುಮಾರ್ ಕೂಡ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, “ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದಾರೆ. ಅವರು, “ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ ಬೆಳವಣಿಗೆಗೂ ಮುನ್ನ ನಾಶವಾಗಲಿ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ, ನಟ ಚೇತನ್ ಕೂಡ ರಮ್ಯಾ ವಿರುದ್ಧದ ಟ್ರೋಲಿಂಗ್‌ನ್ನು ಖಂಡಿಸಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ & ಈಕ್ವಾಲಿಟಿ (FIRE) ಸಂಸ್ಥೆಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಸಂಸ್ಥೆಯು ತನ್ನ ಹೇಳಿಕೆಯಲ್ಲಿ, “ರಮ್ಯಾ ಅವರ ವಿರುದ್ಧದ ದ್ವೇಷಪೂರಿತ ದೌರ್ಜನ್ಯವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾಗಿದೆ. ಇದು ಆನ್‌ಲೈನ್‌ನಲ್ಲಿ ಮಹಿಳಾ ದ್ವೇಷದ ಆಳವಾದ ಸಮಸ್ಯೆಯನ್ನು ತೋರಿಸುತ್ತದೆ” ಎಂದು ತಿಳಿಸಿದೆ. ಭಾರತದ ಸಂವಿಧಾನದ ಆರ್ಟಿಕಲ್ 19ರಡಿಯಲ್ಲಿ ಖಾತರಿಯಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು, ಆದರೆ ಆ ಸ್ವಾತಂತ್ರ್ಯವು ಸಭ್ಯತೆ ಮತ್ತು ಗೌರವದೊಂದಿಗೆ ಇರಬೇಕು ಎಂದು ಸಂಸ್ಥೆ ಒತ್ತಿಹೇಳಿದೆ.
ಈ ಘಟನೆಯ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 499, 500, 505(2), ಮತ್ತು 509 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. FIRE ಸಂಸ್ಥೆಯು ಕರ್ನಾಟಕ ಗೃಹ ಇಲಾಖೆ ಮತ್ತು ಸೈಬರ್ ಕ್ರೈಂ ಪ್ರಾಧಿಕಾರಕ್ಕೆ ತಕ್ಷಣ ಕ್ರಮಕ್ಕೆ ಒತ್ತಾಯಿಸಿದೆ. ಗೃಹ ಸಚಿವ ಜಿ. ಪರಮೇಶ್ವರ್‌ರಿಗೆ ಬರೆದ ಪತ್ರದಲ್ಲಿ, ಈ ರೀತಿಯ ಆನ್‌ಲೈನ್ ದೌರ್ಜನ್ಯವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.