ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ‘ಮಿಲನ’ ಚಿತ್ರದ ಮೂಲಕ ಮನೆಮಾತಾಗಿದ್ದ ನಟಿ ಪಾರ್ವತಿ ತಿರುವೋತ್, ಇದೀಗ ತಾಯಿತನ ಮತ್ತು ಗರ್ಭಧಾರಣೆ ಕುರಿತ ತಮ್ಮ ಅಭಿಪ್ರಾಯಗಳಿಂದ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ಸಾಮಾನ್ಯವಾಗಿ ನಟಿಯರು ಮದುವೆ, ಮಗು, ಕುಟುಂಬದ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಹೇಳಿಕೆ ನೀಡುತ್ತಾರೆ. ಆದರೆ ಪಾರ್ವತಿ ನೀಡಿರುವ ಈ ಹೇಳಿಕೆಗಳು ಹಲವರನ್ನು ಅಚ್ಚರಿಗೊಳಿಸಿದೆ.
ಇತ್ತೀಚೆಗೆ ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾರ್ವತಿ, “ನಾನು ಗರ್ಭಿಣಿಯಾಗಲು ಆಸಕ್ತಿ ಹೊಂದಿಲ್ಲ. ಆದರೆ ಅದರಿಂದ ನಾನು ತಾಯಿಯಾಗುವುದಿಲ್ಲ ಎಂಬುದಲ್ಲ” ಎಂದು ಹೇಳಿದ್ದಾರೆ. ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಬಾಲ್ಯದಲ್ಲಿಯೇ ಅವರಿಗೆ ತಾಯಿಯಾಗಬೇಕೆಂಬ ಆಸೆ ಇತ್ತು. ಅಷ್ಟೇ ಅಲ್ಲ, ತಮ್ಮ ಭವಿಷ್ಯದ ಮಗುವಿಗೆ ಇಡುವ ಹೆಸರನ್ನು ಕೂಡಾ ಆಗಲೇ ಯೋಚಿಸಿ, ಅದನ್ನೇ ಟ್ಯಾಟೂ ಆಗಿ ತಮ್ಮ ದೇಹದ ಮೇಲೆ ಹಾಕಿಸಿಕೊಂಡಿದ್ದಾರೆ. “ಏಳು ವರ್ಷದವಳಿದ್ದಾಗಲೇ ದತ್ತು ಪಡೆಯಬೇಕೆಂದು ನಿರ್ಧರಿಸಿದ್ದೆ” ಎಂದು ಅವರು ಹೇಳಿರುವುದು ಹಲವರನ್ನು ಅಚ್ಚರಿಗೊಳಿಸಿದೆ.
ಈ ನಿರ್ಧಾರಕ್ಕೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಪ್ರಮುಖ ಪ್ರೇರಣೆಯಾಗಿದ್ದಾರೆ ಎಂದು ಪಾರ್ವತಿ ಸ್ಪಷ್ಟಪಡಿಸಿದ್ದಾರೆ. ಸುಶ್ಮಿತಾ ಸೇನ್ ನೀಡಿದ ಸಂದರ್ಶನಗಳು ಮತ್ತು ಅವರ ಜೀವನ ಶೈಲಿ ತನ್ನ ಮೇಲೆ ಬಹಳ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಪೋಷಕರು ಈ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ಟ್ಯಾಟೂ ನೋಡಿದ ನಂತರ ತಮ್ಮ ನಿರ್ಧಾರ ಎಷ್ಟು ದೃಢವಾಗಿದೆ ಎಂಬುದು ಅವರಿಗೆ ಅರ್ಥವಾಗಿದೆ ಎಂದಿದ್ದಾರೆ.
ಗರ್ಭಧಾರಣೆ ಕುರಿತು ಮಾತನಾಡುತ್ತಾ, ಪಾರ್ವತಿ, “ನಾನು ನನ್ನ ದೇಹವನ್ನು ಆ ಪ್ರಕ್ರಿಯೆಗೆ ಒಳಪಡಿಸಲು ಬಯಸುವುದಿಲ್ಲ. ನಾನು ಅಂಡಾಣು ಫ್ರೀಜ್ ಮಾಡಿಲ್ಲ. ಸದ್ಯಕ್ಕೆ ಮಗುವಿಗೆ ಜನ್ಮ ನೀಡುವ ವ್ಯಕ್ತಿಯಾಗಿ ನಾನು ನನ್ನನ್ನು ನೋಡುವುದಿಲ್ಲ” ಎಂದು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆಗಳು ಮತ್ತು ನಿರ್ಧಾರಗಳಿರುತ್ತವೆ. ನನ್ನ ನಿರ್ಧಾರಗಳು ಕಾಲಕಾಲಕ್ಕೆ ಬದಲಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಂದು ಹಂತದಲ್ಲಿ ತಾಯಿಯಾಗಲೇಬೇಕು ಎಂಬ ಆಲೋಚನೆಯಿಂದ ಹೊರಬಂದಿದ್ದಕ್ಕೆ ದೇವರಿಗೆ ಧನ್ಯವಾದ ಎಂದು ಹೇಳಿದ ಪಾರ್ವತಿ, ಈಗ ಆ ರೀತಿಯ ಆಲೋಚನೆಯ ಒಂದು ಅಂಶವೂ ತನ್ನಲ್ಲಿಲ್ಲ ಎಂದಿದ್ದಾರೆ. ಆದರೆ ಮಗುವನ್ನು ನೋಡಿಕೊಳ್ಳುವ, ಪ್ರೀತಿಸುವ ಮನಸ್ಸು ಮಾತ್ರ ಇದೆ. “ಅದು ನನಗೆ ನನ್ನ ನಾಯಿಯಿಂದ ಸಿಕ್ಕಿದೆ” ಎಂದು ಹೇಳುವ ಮೂಲಕ ಪ್ರಾಣಿಗಳೊಂದಿಗೆ ಹೊಂದಿರುವ ಸಂಬಂಧವನ್ನೂ ಅವರು ಹಂಚಿಕೊಂಡಿದ್ದಾರೆ.
ಭವಿಷ್ಯದಲ್ಲಿ ಮಗು ಬೇಕು ಎಂಬ ಆಲೋಚನೆ ಬಂದರೂ, ಅದು ತಮ್ಮ ಸಂಗಾತಿಯ ಒಪ್ಪಿಗೆಯೊಂದಿಗೆ ಮಾತ್ರ ಎಂದು ಪಾರ್ವತಿ ಹೇಳಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡುವುದು ಅವರನ್ನು ಕಷ್ಟಕ್ಕೆ ತಳ್ಳಿದಂತೆ ಅನಿಸುತ್ತದೆ. ಅದಕ್ಕಾಗಿ ಹೆಚ್ಚು ಮಕ್ಕಳನ್ನು ಪಡೆಯಲು ತಾನು ಬಯಸುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾರ್ವತಿ ನೀಡಿದ ಈ ಹೇಳಿಕೆಗಳು ಕೆಲವರಿಗೆ ಅಸಮಾಧಾನ ತಂದರೆ, ಮತ್ತೊಂದೆಡೆ ಹಲವರು ನಟಿಯ ಪರವಾಗಿ ನಿಂತಿದ್ದಾರೆ. “ಮಗು, ಮದುವೆ, ದೇಹ ಮತ್ತು ಸಂಬಂಧಗಳ ಕುರಿತು ನಿರ್ಧಾರ ತೆಗೆದುಕೊಳ್ಳುವುದು ವ್ಯಕ್ತಿಯ ವೈಯಕ್ತಿಕ ಹಕ್ಕು” ಎಂದು ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
