ಕನ್ನಡ ಚಿತ್ರರಂಗದ ಯುವ ನಟ ಸಂತೋಷ್ ಬಾಲರಾಜ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಿರಿಯ ನಿರ್ಮಾಪಕ ಆನೆಕಲ್ ಬಾಲರಾಜ್ ಅವರ ಪುತ್ರನಾದ ಸಂತೋಷ್, ಕಿರಿಯ ವಯಸ್ಸಿನಲ್ಲೇ ಜಾಂಡೀಸ್‌ನಿಂದ ಗಂಭೀರ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಿಯಾ-2, ಕೆಂಪಗಣಪತಿ, ಬರ್ಕ್ಲಿ, ಸತ್ಯ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಸಂತೋಷ್, ತಮ್ಮ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಜಾಂಡೀಸ್ ದೇಹದಾದ್ಯಂತ ಹರಡಿರುವುದರಿಂದ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂತೋಷ್ ಬಾಲರಾಜ್‌ಗೆ ಕೇವಲ 34 ವರ್ಷ ವಯಸ್ಸಾಗಿದ್ದು, ಇವರು ತಮ್ಮ ತಾಯಿಯ ಜೊತೆಗೆ ವಾಸವಾಗಿದ್ದಾರೆ. ಇವರ ತಂದೆ ಆನೆಕಲ್ ಬಾಲರಾಜ್ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಿರ್ಮಾಪಕರಾಗಿದ್ದು, ದರ್ಶನ್ ಅಭಿನಯದ ಕರಿಯಾ (2003) ಚಿತ್ರವನ್ನು ನಿರ್ಮಿಸಿದ್ದರು.. ಸಂತೋಷ್ ತಂದೆಯ ಚಿತ್ರರಂಗದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ತಮ್ಮ ಸ್ವಂತ ಪ್ರತಿಭೆಯಿಂದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಸಂತೋಷ್ ಅವರಿಗೆ ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತ್ತು. ಜಾಂಡೀಸ್ ರೋಗದ ಲಕ್ಷಣಗಳು ತೀವ್ರಗೊಂಡು, ಅವರು ಕೋಮಾಕ್ಕೆ ಜಾರಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ವೈದ್ಯರು ಅವರ ಆರೋಗ್ಯವನ್ನು ಸ್ಥಿರಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಸಂತೋಷ್ ತಾಯಿಯವರು ಆಸ್ಪತ್ರೆಯಲ್ಲಿಯೇ ಇದ್ದು, ಪುತ್ರನ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಚಿತ್ರರಂಗದ ಸಹನಟರು, ನಿರ್ಮಾಪಕರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್‌ಗೆ ಶೀಘ್ರ ಚೇತರಿಕೆಗಾಗಿ ಶುಭ ಹಾರೈಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.