KGF ಶೆಟ್ಟಿ ಇನ್ನು ನೆನಪು ಮಾತ್ರ.. ನಟ ದಿನೇಶ್‌‌ಗೆ ಏನಾಗಿತ್ತು?

ಎಲ್ಲಾ ಹೀರೋಸ್ ಜೊತೆ ಮಿಂಚಿದ್ದ ದಿನೇಶ್ ಮಂಗಳೂರು..!

Untitled design 2025 08 25t165342.889

ಕನ್ನಡ ಚಿತ್ರರಂಗದ ಮಾಸ್ಟರ್‌ಪೀಸ್ ಕೆಜಿಎಫ್ ಸಿನಿಮಾದ ಶೆಟ್ಟಿ ಭಾಯ್ ಇನ್ನು ನೆನಪು ಮಾತ್ರ. ಹೌದು.. ಆರ್ಟ್ ಡೈರೆಕ್ಟರ್, ರಂಗಭೂಮಿ ಕಲಾವಿದ ಹಾಗೂ ಪೋಷಕ ಕಲಾವಿದರಾಗಿ ಹೆಸರು ಮಾಡಿದ್ದ ಈ ಕಲಾಪ್ರೇಮಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಇಷ್ಟಕ್ಕೂ ಅವರಿಗೆ ಏನಾಗಿತ್ತು ಅನ್ನೋದ್ರ ಜೊತೆಗೆ ಅವ್ರ ಜರ್ನಿಯನ್ನ ಪರಿಚಯಿಸ್ತೀವಿ ನೋಡಿ.

ಕಲಾ ನಿರ್ದೇಶಕ, ಪೋಷಕ ನಟ ಹಾಗೂ ರಂಗಭೂಮಿ ಕಲಾವಿದ ದಿನೇಶ್ ಮಂಗಳೂರು ಇಂದು ಬೆಳಗ್ಗೆ 3.30ಕ್ಕೆ ಇಹಲೋಕ ತ್ಯಜಿಸೋ ಮೂಲಕ ಭೌತಿಕವಾಗಿ ದೂರವಾಗಿದ್ದಾರೆ. ಹೌದು.. ಕೆಜಿಎಫ್ ಸಿನಿಮಾ ಖ್ಯಾತಿಯ ಶೆಟ್ಟಿ ಭಾಯ್ ಇನ್ನು ನೆನಪು ಮಾತ್ರ. ಕಳೆದು ನಾಲ್ಕೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಆರೋಗ್ಯ ಇತ್ತೀಚೆಗೆ ವಿಷಮಿಸಿತ್ತು. ಅದರಲ್ಲೂ ನಾಲ್ಕೈದು ದಿನಗಳ ಹಿಂದೆ ಬ್ರೈನ್ ಹ್ಯಾಮರೇಜ್‌‌ ಆಗಿ ಚಿಕಿತ್ಸೆ ಫಲಕಾರಿ ಆಗದೆ ಬಾರದೂರಿಗೆ ಪಯಣ ಬೆಳೆಸಿದ್ದಾರೆ.

ಎಂಥದ್ದೇ ಪಾತ್ರ ಕೊಟ್ಟರೂ ಅದ್ಭುತವಾಗಿ ಅದಕ್ಕೆ ಜೀವ ತುಂಬುತ್ತಿದ್ದ ದಿನೇಶ್ ಅವರು ಕುಂದಾಪುರ ಮೂದವರು. ಯಶ್‌ರ ಕೆಜಿಎಫ್, ರಕ್ಷಿತ್ ಶೆಟ್ಟಿಯ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಚೇತನ್‌‌ ಅಭಿನಯದ ಆ ದಿನಗಳು, ಪುನೀತ್ ರಾಜ್‌‌ಕುಮಾರ್‌ರ ರಣವಿಕ್ರಮ, ಅಂಬಾರಿ, ಇಂತಿ ನಿನ್ನ ಪ್ರೀತಿಯ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲೂ ಕೆಜಿಎಫ್ ಸಿನಿಮಾದ ಶೆಟ್ಟಿ ಪಾತ್ರ ಇವರಿಗೆ ಎಲ್ಲಿಲ್ಲದ ನೇಮು ಫೇಮು ತಂದುಕೊಟ್ಟಿತ್ತು. ಮುಂಬೈ ಆಳುವ ಭಾಯ್ ಆಗಿ ಖದರ್ ತೋರಿದ್ದರು ದಿನೇಶ್ ಮಂಗಳೂರು.

ಪಾರ್ಶ್ವವಾಯುವಿಗೆ ತುತ್ತಾಗಿ ಚಿಕಿತ್ಸೆ ಪಡೆದು, ದಣಿವಾರಿಸಿಕೊಂಡಿದ್ದ ಹಿರಿಯ ಜೀವ, ಕುಂದಾಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದುಕೊಂಡು ಅಲ್ಲೇ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. 1970ರಲ್ಲಿ ಜನಿಸಿದ್ದ ದಿನೇಶ್ ಅವರು ಕೊಲ್ಲೂರಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಭಾರತಿ ಪೈ ಕೈ ಹಿಡಿದಿದ್ದ ದಿನೇಶ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ಸ್‌ ಜೊತೆ ಕೆಲಸ ಮಾಡಿರೋ ದಿನೇಶ್ ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ನಿಜಕ್ಕೂ ಚಿತ್ರರಂಗ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದ್ದು, ಈ ದುಃಖ ಭರಿಸೋ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಅನ್ನೋದು ನಮ್ಮ ಪ್ರಾರ್ಥನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version