ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್‌ಗೆ ಕೊನೆಗೂ ಕೊಂಚ ನೆಮ್ಮದಿ ಸಿಕ್ಕಿದೆ. ಕೋರ್ಟ್ ಆದೇಶದ ಮೇರೆಗೆ ಜೈಲಾಧಿಕಾರಿಗಳು ದರ್ಶನ್‌ಗೆ ಹಾಸಿಗೆ, ದಿಂಬು ಮತ್ತು ಬೆಡ್‌ಶೀಟ್ ಒದಗಿಸಿದ್ದಾರೆ. ಈ ಸೌಲಭ್ಯಗಳಿಂದ ದರ್ಶನ್ ರಾತ್ರಿಯ ನಿದ್ರೆಯನ್ನು ಸುಖವಾಗಿ ಕಳೆಯುತ್ತಿದ್ದಾರೆ. ಜೊತೆಗೆ, ಬ್ಯಾರಕ್‌ನಲ್ಲಿ ವಾಕಿಂಗ್ ಮಾಡಲು ಅವಕಾಶವನ್ನೂ ನೀಡಲಾಗಿದೆ. ಬೆಳಗ್ಗೆ ವಾಕಿಂಗ್ ಮಾಡಿ, ತಿಂಡಿ ಸೇವಿಸಿ, ಸೆಲ್‌ನಲ್ಲಿ ಇರುತ್ತಿದ್ದ ದರ್ಶನ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಸೆಪ್ಟೆಂಬರ್ 9ರಂದು ನಡೆದ ವಿಚಾರಣೆಯ ವೇಳೆ ದರ್ಶನ್ ನ್ಯಾಯಾಧೀಶರ ಮುಂದೆ ಜೈಲಿನ ಒಳಗಿನ ಕಷ್ಟಗಳ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. “ಸ್ವಲ್ಪ ವಿಷ ಕೊಡಿ ಸ್ವಾಮಿ” ಎಂದು ಕೇಳಿಕೊಂಡ ದರ್ಶನ್, ಜೈಲಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ತಾವು ಒದ್ದಾಡುತ್ತಿರುವುದಾಗಿ ಹೇಳಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಜೈಲಾಧಿಕಾರಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿತ್ತು. ದರ್ಶನ್‌ನ ವಕೀಲರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕೋರ್ಟ್ ಸೆಪ್ಟೆಂಬರ್ 9ರಂದು ನೀಡಿತ್ತು. ಈ ಆದೇಶದಂತೆ, ಜೈಲಾಧಿಕಾರಿಗಳು ದರ್ಶನ್‌ಗೆ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್‌ಶೀಟ್ ಒದಗಿಸಿದ್ದಾರೆ.
ಜೈಲಿನಲ್ಲಿ ದರ್ಶನ್‌ಗೆ ನರಕ ದರ್ಶನ
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಆರಂಭದಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದೆ ಸಾಕಷ್ಟು ಕಷ್ಟವಾಗಿತ್ತು. ಮೂಲಭೂತ ಸೌಕರ್ಯಗಳಾದ ಬಟ್ಟೆ, ಚಪ್ಪಲಿ, ಪ್ಲೇಟ್, ಸ್ಪೂನ್ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದರು. ದರ್ಶನ್ ಅವರ ವಕೀಲ ಸುನೀಲ್, ಜೈಲಿನ ಮ್ಯಾನ್ಯುಯಲ್ ಪ್ರಕಾರ ವಿಚಾರಣಾಧೀನ ಕೈದಿಗಳಿಗೂ ಮತ್ತು ಶಿಕ್ಷಿತ ಕೈದಿಗಳಿಗೂ ತಮ್ಮ ಸ್ವಂತ ಖರ್ಚಿನಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದರು. ಈ ವಾದದ ಆಧಾರದ ಮೇಲೆ ಕೋರ್ಟ್, ಜೈಲು ನಿಯಮಾವಳಿಗಳಿಗೆ ಅನುಗುಣವಾಗಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಆದೇಶಿಸಿತ್ತು.
ದರ್ಶನ್‌ನ ವಕೀಲರು ಕೋರ್ಟ್‌ನಲ್ಲಿ ತಾರತಮ್ಯದ ಬಗ್ಗೆ ಪ್ರಶ್ನೆ ಎತ್ತಿದ್ದರು. “ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ದರ್ಶನ್ ವಿಷಯದಲ್ಲಿ ಏಕೆ ತಾರತಮ್ಯ?” ಎಂದು ಕೇಳಿದ್ದರು. ಜೈಲಿನಲ್ಲಿ ಟಿವಿ, ನ್ಯೂಸ್‌ಪೇಪರ್, ಮ್ಯೂಸಿಕ್ ಸೇರಿದಂತೆ ಇತರ ಸೌಲಭ್ಯಗಳು ಲಭ್ಯವಿರುವಾಗ ದರ್ಶನ್‌ಗೆ ಮಾತ್ರ ಏಕೆ ಇವು ದೊರೆಯುತ್ತಿಲ್ಲ ಎಂದು ವಾದಿಸಿದ್ದರು. ಇದರ ಜೊತೆಗೆ, ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ, ಕೈದಿಗಳಿಗೆ ಮೂಲಭೂತ ಹಕ್ಕುಗಳಾದ ಹೈಜೀನಿಕ್ ಆಹಾರ ಮತ್ತು ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದ್ದರು. ದರ್ಶನ್‌ಗೆ ಈಗಾಗಲೇ ಬಲಗೈಗೆ ಶಸ್ತ್ರಚಿಕಿತ್ಸೆಯಾಗಿದ್ದು, ಕೈ ಆಡಿಸಲು ತೊಂದರೆಯಾಗುತ್ತಿದೆ ಎಂದು ವಕೀಲರು ತಿಳಿಸಿದ್ದರು.
ಕೋರ್ಟ್ ಆದೇಶದ ಬಳಿಕ ದರ್ಶನ್‌ಗೆ ಒದಗಿಸಲಾದ ಹಾಸಿಗೆ ಮತ್ತು ದಿಂಬಿನಿಂದ ಅವರು ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದಾರೆ. ಬೆಳಗ್ಗೆ ಬ್ಯಾರಕ್‌ನಲ್ಲಿ ವಾಕಿಂಗ್ ಮಾಡುವ ಅವಕಾಶವನ್ನು ಬಳಸಿಕೊಂಡ ದರ್ಶನ್, ಕೆಲವೊತ್ತು ವಾಕಿಂಗ್ ಮಾಡಿ, ತಿಂಡಿ ಸೇವಿಸಿ, ಸೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ಮಾಹಿತಿ ದೊರೆತಿದೆ.
