‘ನನಗೆ ಜೈಲಿನಲ್ಲಿ ಬದುಕೋಕೆ ಆಗ್ತಿಲ್ಲ’: ನ್ಯಾಯಾಧೀಶರ ಎದುರು ಕಣ್ಣೀರಿಟ್ಟ ನಟ ದರ್ಶನ್

Untitled design 2025 09 09t124734.605

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಯಾಂಡಲ್‌ವುಡ್‌ನ ಖ್ಯಾತ ನಟ ದರ್ಶನ್ ತೂಗುದೀಪ, ಇತ್ತೀಚಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ. ಕಳೆದ 20 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ಜೈಲಿನ ಕಠಿಣ ಜೀವನದಿಂದ ಕಂಗಾಲಾಗಿ, “ನನಗೆ ಜೀವನವೇ ಸಾಕಾಗಿದೆ, ನನಗೆ ಜೈಲಿನಲ್ಲಿ ಬದುಕೋಕೆ ಆಗ್ತಿಲ್ಲ, ದಯವಿಟ್ಟು ವಿಷ ಕೊಡಿ” ಎಂದು ಭಾವುಕವಾಗಿ ಮನವಿ ಮಾಡಿದ್ದಾರೆ.

ಜೈಲಿನ ಕಠಿಣ ನಿಯಮಗಳು 

ಕಳೆದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ದರ್ಶನ್‌ ಅವರ ಜಾಮೀನು ರದ್ದಾಗಿ, ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಲಾಗಿತ್ತು ಎಂಬ ಆರೋಪದಿಂದಾಗಿ, ಜೈಲಾಧಿಕಾರಿಗಳು ಈ ಬಾರಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

ದರ್ಶನ್‌ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದ್ದು, ಬ್ಯಾರಕ್‌ಗೆ ಯಾರನ್ನೂ ಭೇಟಿಗೆ ಬಿಡದಂತೆ ಕಟ್ಟುನಿಟ್ಟಿನ ಆದೇಶಗಳಿವೆ. “ನನ್ನ ಬಟ್ಟೆಗಳೆಲ್ಲ ಗಬ್ಬು ವಾಸನೆ ಬರುತ್ತಿದೆ, 15 ದಿನಗಳಿಂದ ಬಿಸಿಲು ನೋಡಿಲ್ಲ” ಎಂದು ದರ್ಶನ್ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ. ಕಳೆದ 20 ದಿನಗಳಲ್ಲಿ ದರ್ಶನ್ 3-5 ಕೆ.ಜಿ. ತೂಕ ಕಳೆದುಕೊಂಡಿದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ತಿಳಿದುಬಂದಿದೆ.

ಕೋರ್ಟ್‌ನಲ್ಲಿ ದರ್ಶನ್‌ ಭಾವುಕ ಮನವಿ

ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದ ದರ್ಶನ್, “ನನಗೆ ಜೈಲಿನಲ್ಲಿ ಚಿತ್ರಹಿಂಸೆ ಆಗುತ್ತಿದೆ, ಬದುಕಲು ಆಗುತ್ತಿಲ್ಲ” ಎಂದು ಭಾವುಕವಾಗಿ ಹೇಳಿದ್ದಾರೆ. “ನನಗೆ ಮಾತ್ರ ವಿಷ ಕೊಡಿ, ಬೇರೆಯವರಿಗೆ ಬೇಡ” ಎಂದು ಕಣ್ಣೀರು ಹಾಕಿ ದರ್ಶನ್‌ ಮನವಿ ಮಾಡಿದರು. ದರ್ಶನ್‌ ಅವರ ಮಾತುಗಳಿಗೆ ನ್ಯಾಯಾಧೀಶರು, “ಹಾಗೆಲ್ಲ ಮಾತನಾಡಬಾರದು, ನಿಮ್ಮ ಮನವಿಯ ಬಗ್ಗೆ ಮಧ್ಯಾಹ್ನ 3 ಗಂಟೆಗೆ ಆದೇಶ ನೀಡುತ್ತೇವೆ” ಎಂದು ಪ್ರತಿಕ್ರಿಯಿಸಿದರು. ದರ್ಶನ್ ಕೂಡ “ಸರಿ ಸ್ವಾಮಿ” ಎಂದು ಜಡ್ಜ್‌ಗೆ ಕೈಮುಗಿದರು. 57ನೇ ಸಿಸಿಹೆಚ್ ಕೋರ್ಟ್‌ನಿಂದ ಮಧ್ಯಾಹ್ನ 3 ಗಂಟೆಗೆ ಆದೇಶ ನೀಡುವುದಾಗಿ ವಿಚಾರಣೆಯನ್ನು ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ

ರೇಣುಕಾಸ್ವಾಮಿ ಕೊಲೆ ಪ್ರಕರಣವು ಕಳೆದ ವರ್ಷ ಜೂನ್ 8ರಂದು ನಡೆದ ಘಟನೆಗೆ ಸಂಬಂಧಿಸಿದ್ದು, ಚಿತ್ರದುರ್ಗ ಮೂಲದ  ರೇಣುಕಾಸ್ವಾಮಿಯನ್ನು ದರ್ಶನ್ ಮತ್ತು ಅವರ ತಂಡವು ಅಪಹರಿಸಿ, ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪವಿದೆ. ಈ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಈ ಹಿಂದೆ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿತ್ತು ಎಂಬ ಆರೋಪದಿಂದಾಗಿ, ಜೈಲಾಧಿಕಾರಿಗಳು ಈಗ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ದರ್ಶನ್‌ಗೆ ಕನಿಷ್ಠ ಸೌಕರ್ಯಗಳನ್ನು ಮಾತ್ರ ನೀಡಲಾಗುತ್ತಿದ್ದು, ಇದರಿಂದ ಆತನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

Exit mobile version