ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಮಂಗಳಸೂತ್ರ ಮತ್ತು ಹಸಿರು ಬಳೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಅವರ ಹೊಸ ಲುಕ್ ನೋಡಿದ ನೆಟ್ಟಿಗರು, “ಕಂಗನಾ ಗುಟ್ಟಾಗಿ ಮದುವೆಯಾಗಿದ್ದಾರೆ” ಎಂಬ ವದಂತಿಯನ್ನು ಹರಡಲು ಆರಂಭಿಸಿದ್ದರು. ಕೆಲವರು ಆ ‘ಅದೃಷ್ಟವಂತ ವ್ಯಕ್ತಿ’ ಯಾರು ಎಂದು ಹುಡುಕಾಟ ಕೂಡ ನಡೆಸಿದ್ದರು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಕಂಗನಾ ರಣಾವತ್ ಸ್ಪಷ್ಟನೆ ನೀಡಿದ್ದಾರೆ.. ‘ತಾಳಿ ಧರಿಸಿದ್ದು ಅಷ್ಟೊಂದು ದೊಡ್ಡ ವಿಷಯವೇ ಅಲ್ಲ’ ಎಂದು ಹೇಳುವ ಮೂಲಕ ಅವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಂಗನಾ ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿ, ಕತ್ತಿನಲ್ಲಿ ಮಂಗಳಸೂತ್ರ ಹಾಗೂ ಕೈಯಲ್ಲಿ ಹಸಿರು ಬಳೆಗಳೊಂದಿಗೆ ಕಟ್ಟಡವೊಂದರಿಂದ ಹೊರಬರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸಾಮಾನ್ಯವಾಗಿ ತಮ್ಮ ಬೋಲ್ಡ್ ಸ್ಟೈಲ್ ಮತ್ತು ನೇರ ಮಾತುಗಳಿಗೆ ಹೆಸರಾದ ಕಂಗನಾ ಈ ಬಾರಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ “ಕಂಗನಾ ಸೀಕ್ರೆಟ್ ಮದುವೆಯಾಗಿದ್ದಾರೆ” ಎಂಬ ಚರ್ಚೆಗಳು ಜೋರಾಗಿದ್ದವು.
ಈ ಬಗ್ಗೆ ಮೌನ ಮುರಿದ ಕಂಗನಾ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. “ನಾನು ಪ್ರತಿದಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಯಾರೋ ನನ್ನ ಕ್ಯಾರೆಕ್ಟರ್ ಮೇಕ್-ಅಪ್ ಲುಕ್‌ನ ಫೋಟೋ ತೆಗೆದು ವೈರಲ್ ಮಾಡಿದ್ದಾರೆ. ಅದರ ನಂತರ ನನಗೆ ನಿರಂತರವಾಗಿ ಫೋನ್ ಕರೆಗಳು ಬರುತ್ತಿವೆ. ವಿವಾಹಿತ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡರೆ, ಅದರಲ್ಲಿ ಅಷ್ಟೊಂದು ದೊಡ್ಡ ವಿಷಯ ಏನಿದೆ?” ಎಂದು ಪ್ರಶ್ನಿಸಿದ್ದಾರೆ.
ಅದರ ಜೊತೆಗೆ, “ನಟರು ಸಿನಿಮಾಗಳಿಗಾಗಿ ಹಲವಾರು ರೀತಿಯ ಪಾತ್ರಗಳನ್ನು ಮಾಡುತ್ತಾರೆ. ನಾನು ಧರಿಸಿದ್ದ ಮಂಗಳಸೂತ್ರ ಕೂಡ ಚಿತ್ರದ ಪಾತ್ರದ ಭಾಗವೇ ಹೊರತು ವೈಯಕ್ತಿಕ ಜೀವನದ ವಿಷಯ ಅಲ್ಲ. ನಾನು ಯಾವತ್ತೂ ರಹಸ್ಯವಾಗಿ ಮದುವೆಯಾಗುವುದಿಲ್ಲ. ಇದು ನನ್ನ ಪ್ರಾಮಿಸ್” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಂಗನಾ ಅವರ ಈ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.
ಕಂಗನಾ ತಮ್ಮ ಮತ್ತೊಂದು ಪೋಸ್ಟ್‌ನಲ್ಲಿ ತೀವ್ರ ಬಿಸಿಲಿನ ನಡುವೆಯೂ ನಡೆಯುತ್ತಿರುವ ಶೂಟಿಂಗ್ ಬಗ್ಗೆ ಮಾತನಾಡಿದ್ದಾರೆ. “ಎಸಿ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ಕೆಲವರು ಬಿಸಿಲಿನ ಬಗ್ಗೆ ದೂರುತ್ತಿದ್ದಾರೆ. ಆದರೆ ನಮ್ಮಂತವರು ಬಿಸಿಲಿನ ಮಧ್ಯೆ, ಪ್ರಬಲ ಲೈಟ್ಸ್ ನಡುವೆ ಹೊರಾಂಗಣ ಶೂಟಿಂಗ್ ಮಾಡುತ್ತಿದ್ದೇವೆ. ಜೀವನ ಸವಾಲಿನಿಂದ ಕೂಡಿದಾಗ ಮಾತ್ರ ಅದರ ಅರ್ಥ ಗೊತ್ತಾಗುತ್ತದೆ. ಎಲ್ಲವೂ ಸುಲಭವಾಗಿದ್ದರೆ ಅದು ಬದುಕೇ ಅಲ್ಲ” ಎಂದು ಹೇಳಿದ್ದಾರೆ.
ಸದ್ಯ ಕಂಗನಾ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಎಮರ್ಜೆನ್ಸಿ’ ಚಿತ್ರದ ನಂತರ ಅವರು ನಟಿಸಿರುವ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತ’ ಸಾಕಷ್ಟು ನಿರೀಕ್ಷೆ ಮೂಡಿಸಿದೆ. 2008ರಲ್ಲಿ ಮುಂಬೈನಲ್ಲಿ ನಡೆದ ಭೀಕರ ಉಗ್ರರ ದಾಳಿಯ ಹಿನ್ನೆಲೆಯಲ್ಲಿನ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಈ ಚಿತ್ರವು ಜೂನ್ 12ರಂದು ಬಿಡುಗಡೆಯಾಗಲಿದ್ದು, ಕಂಗನಾ ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇನ್ನು ಮಂಗಳಸೂತ್ರ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ, ಅವರ ಅಭಿಮಾನಿಗಳು ಕೂಡ ಸಮಾಧಾನಗೊಂಡಿದ್ದಾರೆ.
