ಕಮಲ್ ಹಾಸನ್‌ಗೆ ಹೈಕೋರ್ಟ್ ಫುಲ್ ಕ್ಲಾಸ್: ‘ಕ್ಷಮೆ ಕೇಳದಿದ್ದರೆ ಥಗ್ ಲೈಫ್‌ಗೆ ಸಂಕಷ್ಟ’

ಕನ್ನಡಿಗರಿಗೆ ಕ್ಷಮೆ ಕೇಳದ ಕಮಲ್‌ಗೆ ಕೋರ್ಟ್ ಛೀಮಾರಿ..!

Befunky collage 2025 06 03t124147.251

ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳು ನಟ ಕಮಲ್ ಹಾಸನ್ ಅವರಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರದ ಕರ್ನಾಟಕದಲ್ಲಿ ಬಿಡುಗಡೆಗೆ ತೊಡಕು ಎದುರಾಗಿದ್ದು, ಕ್ಷಮೆಯಾಚನೆ ಮಾಡದಿರುವುದಕ್ಕೆ ಕೋರ್ಟ್ ಖಂಡನೆ ವ್ಯಕ್ತಪಡಿಸಿದೆ.

ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಭಾಷೆ ಜನ್ಮತಾಳಿದೆ ಎಂದು ಹೇಳಿಕೆ ನೀಡಿದ್ದು, ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳಲು ನಿರಾಕರಿಸಿರುವ ಅವರು, ಚಿತ್ರದ ಬಿಡುಗಡೆಗೆ ಭದ್ರತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು.

ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಕಮಲ್ ಹಾಸನ್ ಅವರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. “ಸಿ. ರಾಜಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು, ಆದರೆ ನಂತರ ಕ್ಷಮೆಯಾಚಿಸಿದ್ದರು. ಆದರೆ ಕಮಲ್ ಹಾಸನ್ ಯಾವುದೇ ಕ್ಷಮಾಯಾಚನೆ ಮಾಡಿಲ್ಲ. ಸಿನಿಮಾ ನಿರ್ಮಾಣ ವಾಣಿಜ್ಯ ಉದ್ದೇಶದಿಂದ ಆಗಿದೆ. ತಪ್ಪು ಮಾಡಿ, ಆ ತಪ್ಪಿಗೆ ಪೊಲೀಸ್ ಭದ್ರತೆ ಕೇಳುವುದು ಸರಿಯೇ?” ಎಂದು ಕೋರ್ಟ್ ಪ್ರಶ್ನಿಸಿತು.

ಕೋರ್ಟ್ ಮುಂದುವರೆದು, “ನಿಮ್ಮ ಹೇಳಿಕೆಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯಾಗಿದೆ. ಶಿವರಾಜ್‌ಕುಮಾರ್ ಅವರಂತಹ ನಟರಿಗೆ ಸಮಸ್ಯೆ ಉಂಟಾಗಿದೆ. ನೀವು ಹೇಳಿಕೆಯನ್ನು ಒಪ್ಪಿಕೊಂಡಿದ್ದೀರಿ, ಆದರೆ ಕ್ಷಮೆಯಾಚನೆಗೆ ಸಿದ್ಧರಿಲ್ಲ. 300 ಕೋಟಿ ರೂಪಾಯಿಯ ಸಿನಿಮಾ ಎಂದು ಹೇಳುತ್ತೀರಿ, ಕ್ಷಮೆಯಾಚನೆ ಮಾಡಿ, ಆಗ ಯಾವುದೇ ಸಮಸ್ಯೆ ಇರುವುದಿಲ್ಲ” ಎಂದು ಸಲಹೆ ನೀಡಿತು.

ಕನ್ನಡಪರ ಸಂಘಟನೆಗಳು ‘ಥಗ್ ಲೈಫ್’ ಚಿತ್ರದ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೆಲವು ಸಂಘಟನೆಗಳು ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವ ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂಲಕ ಸಲ್ಲಿಸಲಾದ ಅರ್ಜಿಯು ಚಿತ್ರದ ಪ್ರದರ್ಶನಕ್ಕೆ ಭದ್ರತೆ ಮತ್ತು ನಿಷೇಧ ತಡೆಗೆ ಕೋರಿಕೆಯನ್ನು ಒಳಗೊಂಡಿದೆ.

ಈ ವಿವಾದದಿಂದ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆ ಅನಿಶ್ಚಿತವಾಗಿದ್ದು, ಕನ್ನಡಿಗರ ಆಕ್ರೋಶ ಮತ್ತು ಕಾನೂನು ಕ್ರಮಗಳು ಚಿತ್ರದ ಭವಿಷ್ಯವನ್ನು ನಿರ್ಧರಿಸಲಿವೆ.

ಈ ಮೂಲಕ ಹೈಕೋರ್ಟ್ ಕನ್ನಡಿಗರ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿರುವುದಲ್ಲದೇ, ತಮಿಳು ಪಾರಮ್ಯ ಮೆರೆಯುತ್ತಿರುವ ಭಾಷಾಂಧರ ಸುಳ್ಳು ಪ್ರತಿಷ್ಠೆಯನ್ನು ತೊಡೆದುಹಾಕಿದೆ.

Exit mobile version