ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಬೆದರಿಕೆ ಸಂದೇಶ: ಕೋಟಿ ಕೋಟಿ ಹಣಕ್ಕೆ ಬೇಡಿಕೆ

Untitled design 2026 02 10T210609.782

ನವದೆಹಲಿ: ಬಾಲಿವುಡ್‌ನ ಎನರ್ಜೆಟಿಕ್ ಸ್ಟಾರ್ ರಣವೀರ್ ಸಿಂಗ್‌ಗೆ ಅನಾಮಧೇಯ ವ್ಯಕ್ತಿಯೊಬ್ಬ ವಾಯ್ಸ್ ನೋಟ್ (Voice Note) ಮೂಲಕ ನಟನಿಗೆ ಬೆದರಿಕೆ ಹಾಕಿದ್ದು, ಕೋಟ್ಯಾಂತರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಘಟನೆಯಿಂದಾಗಿ ಮುಂಬೈ ಪೊಲೀಸರು ರಣವೀರ್ ಸಿಂಗ್ ಅವರ ನಿವಾಸಕ್ಕೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

ನಟ ರಣವೀರ್ ಸಿಂಗ್ ಅವರಿಗೆ ಬಂದಿರುವ ವಾಯ್ಸ್ ನೋಟ್‌ನಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಒಂದು ವೇಳೆ ಹಣ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ರಣವೀರ್ ಸಿಂಗ್, ಮುಂಬೈ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನ ಗಂಭಿರತೆ ಅರಿತ ಪೊಲೀಸರು, ಬಾಂದ್ರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ನಟನ ನಿವಾಸದ ಹೊರಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದಾರೆ.

ಬಿಷ್ಣೋಯ್ ಗ್ಯಾಂಗ್ ಮೇಲೆ ಶಂಕೆ

ಸದ್ಯಕ್ಕೆ ಈ ಬೆದರಿಕೆಯ ಜವಾಬ್ದಾರಿಯನ್ನು ಯಾವುದೇ ಗ್ಯಾಂಗ್ ಅಧಿಕೃತವಾಗಿ ಹೊತ್ತುಕೊಂಡಿಲ್ಲ. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೃತ್ಯದ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಹಿಂದೆ ಸಲ್ಮಾನ್ ಖಾನ್ ಅವರಿಗೆ ಇದೇ ಗ್ಯಾಂಗ್ ಬೆದರಿಕೆ ಹಾಕಿದ್ದರಿಂದ, ರಣವೀರ್ ಸಿಂಗ್ ವಿಷಯದಲ್ಲೂ ಪೊಲೀಸರು ಹೆಚ್ಚಿನ ಜಾಗರೂಕತೆ ವಹಿಸಿದ್ದಾರೆ.

 ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ

ಈ ಬೆದರಿಕೆಗೂ ಮುನ್ನ ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೂ ಗುಂಡಿನ ದಾಳಿ ನಡೆದಿತ್ತು. ನಾಲ್ಕು ಸುತ್ತು ಗುಂಡು ಹಾರಿಸಿದ್ದ ಕಿಡಿಗೇಡಿಗಳು ಅಲ್ಲಿ ಆತಂಕ ಸೃಷ್ಟಿಸಿದ್ದರು. ಈ ದಾಳಿಯ ಜವಾಬ್ದಾರಿಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ರೋಹಿತ್ ಶೆಟ್ಟಿ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಣವೀರ್ ಸಿಂಗ್‌ಗೆ ಬೆದರಿಕೆ ಬಂದಿರುವುದು ಈಗ ಚಿತ್ರರಂಗದ ಗಣ್ಯರಲ್ಲಿ ಆತಂಕ ಹೆಚ್ಚಿಸಿದೆ. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಾಯ್ಸ್ ನೋಟ್ ಬಂದಿರುವ ಮೊಬೈಲ್ ಸಂಖ್ಯೆಯ ಲೋಕೇಶನ್ ಪತ್ತೆಹಚ್ಚಲು ಸೈಬರ್ ತಜ್ಞರ ನೆರವು ಪಡೆಯುತ್ತಿದ್ದಾರೆ.

Exit mobile version