ಚೆನ್ನೈನಲ್ಲಿ ನಡೆದ ಥಗ್ ಲೈಫ್ ಇವೆಂಟ್‌ನಲ್ಲಿ ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅದೂ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ ಎದುರಲ್ಲೇ ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅದಕ್ಕೀಗ ಕಮಲ್ ಹಾಸನ್ ವಿರುದ್ಧ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಾಯ್ಕಾಟ್ ಅಲೆ ಕೂಡ ಎದ್ದಿದೆ.
ಕಮಲ್ ಹಾಸನ್ ನಟಿಸಿ, ನಿರ್ಮಾಣ ಮಾಡಿರೋ ಥಗ್ ಲೈಫ್ ಸಿನಿಮಾ ಇದೇ ಜೂನ್ 5ಕ್ಕೆ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ಅದ್ಧೂರಿ ಆಡಿಯೋ ಲಾಂಚ್ ಇವೆಂಟ್ ನೆರವೇರಿತು. ಅಲ್ಲಿ ನಿರ್ದೇಶಕ ಮಣಿರತ್ನಂ, ಸಂಗೀತ ಸಂಯೋಜಕ ಎಆರ್ ರೆಹಮಾನ್, ನಟಿ ತ್ರಿಶಾ ಜೊತೆ ಹೈಲೈಟ್ ಆಗಿದ್ದು ನಮ್ಮ ಕನ್ನಡದ ಸೂಪರ್ ಸ್ಟಾರ್ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್.
ಥಗ್ ಲೈಫ್ ಇವೆಂಟ್‌ನಲ್ಲಿ ನಟ ಕಮಲ್ ಹಾಸನ್, ನಟಸಾರ್ವಭೌಮ ಡಾ ರಾಜ್‌ಕುಮಾರ್ ಬಗ್ಗೆ ತಮಗಿರುವ ಗೌರವದ ಬಗ್ಗೆ ಮಾತನಾಡುತ್ತಲೇ, ನಮ್ಮ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿಮ್ಮ ಕನ್ನಡ ನಮ್ಮ ತಮಿಳು ಭಾಷೆಯಿಂದಲೇ ಹುಟ್ಟಿದ್ದು ಎಂದಿದ್ದಾರೆ. ಅದೂ ಶಿವಣ್ಣನ ಎದುರೇ ಇಂಥದ್ದೊಂದು ಹೇಳಿಕೆ ನೀಡಿರೋ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಮಿಳು ಭಾಷೆಗೆ 1400 ವರ್ಷಗಳ ಇತಿಹಾಸವಿದ್ರೆ ನಮ್ಮ ಕನ್ನಡ ಭಾಷೆ ಅದಕ್ಕಿಂತ ಪುರಾತನವಾದದ್ದು ಅನ್ನೋದಕ್ಕೆ ಸಾಕಷ್ಟು ಪುರಾವೆಗಳಿವೆ. ಕನ್ನಡ ಭಾಷೆ ಸುಮಾರು 2000 ವರ್ಷಗಳ ಇತಿಹಾಸ ಹೊಂದಿದೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಆ ಅವಿವೇಕಿ ಕಮಲ್ ಹಾಸನ್‌ಗೂ ತಿಳಿದಿಲ್ಲ. ತಮಿಳಿಗರಿಗೆ ಶ್ರೇಷ್ಠತೆ ಒಂದು ವ್ಯಸವವಾಗಿಬಿಟ್ಟಿದೆ. ಸದ್ಯ ಕಮಲ್ ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.
ಇದರ ಮಧ್ಯೆಯೇ ಬೆಂಗಳೂರಿನಲ್ಲಿ ಥಗ್ ಲೈಫ್ ಚಿತ್ರದ ಸುದ್ದಿಗೋಷ್ಠಿ ನಡೆಸಿರೋ ಕಮಲ್ ಹಾಸನ್, ಭರ್ಜರಿ ಪ್ರಮೋಷನ್ಸ್ ಮಾಡಿಕೊಂಡು ಹೋಗಿದ್ದಾರೆ. ಆದ್ರೆ ಕನ್ನಡಿಗರು ಥಗ್ ಲೈಫ್ ಸಿನಿಮಾನ ಕರ್ನಾಟಕದಲ್ಲಿ ಬಾಯ್ಕಾಟ್ ಮಾಡೋ ಯೋಜನೆಯಲ್ಲಿದ್ದಾರೆ. ಕನ್ನಡ ಭಾಷೆಗೆ ಅಪಮಾನದ ಮಾತನಾಡಿರೋ ಕಮಲ್ ಸಿನಿಮಾ ಇಲ್ಲಿ ನಿಜಕ್ಕೂ ರಿಲೀಸ್ ಆಗಬೇಕಾ ಅನ್ನೋದು ಸ್ವಾಭಿಮಾನಿ ಕನ್ನಡಿಗರಾದ ನಾವುಗಳು ಯೋಚಿಸಬೇಕಿದೆ. ಸಿನಿಮಾನ ರಿಲೀಸ್ ಮಾಡಲು ಬಿಡದೆ ಭಾಷಾಭಿಮಾನ ತೋರುತ್ತಾರಾ ಕನ್ನಡಿಗರು ಅನ್ನೋದನ್ನ ಕಾದು ನೋಡಬೇಕಿದೆ.