ಈ ವರ್ಷದ ಐಪಿಎಲ್ ಶುರುವಾಗೋಕೆ ಇನ್ನೂ ಮೂರೇ ಮೂರು ದಿನ ಬಾಕಿಯಿದೆ. ವಿಶ್ವದ ಸ್ಟಾರ್ ಕ್ರಿಕೆಟರ್ಸ್ ಗ್ರೌಂಡ್‌ಗೆ ಇಳಿದು ಕಾದಾಡುವುದನ್ನ ನೋಡೋಕೆ ಕೋಟ್ಯಂತರ ಮಂದಿ ಕಾಯ್ತಿದ್ದಾರೆ. ಇದು ನಮ್ಮ ಸ್ಯಾಂಡಲ್‌ವುಡ್ ಸಿನಿಮಾಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಆದ್ರೆ ಐಪಿಎಲ್ ಅನ್ನೋ ಪ್ರವಾಹದ ವಿರುದ್ಧ ಈಜೋಕೆ ಸಜ್ಜಾಗ್ತಿವೆ ಕೆಲ ಕನ್ನಡ ಸಿನಿಮಾಗಳು.
ಐಪಿಎಲ್- ಇಂಡಿಯನ್ ಪ್ರೀಮಿಯರ್ ಲೀಗ್.. ಇದು ಬರೀ ಕ್ರಿಕೆಟ್ ಟೂರ್ನಮೆಂಟ್ ಅಲ್ಲ. ನಮ್ಮ ಎಮೋಷನ್ ಕೂಡ ಅದ್ರಲ್ಲೂ ಆರ್‌ಸಿಬಿ ಅಭಿಮಾನಿಗಳಾದ ಕರುನಾಡಿನ ಮಂದಿಗೆ ಅದು ಕೊಂಚ ಜಾಸ್ತಿನೇ ಇದೆ. ಇದೇ ಮಾರ್ಚ್ 28ಕ್ಕೆ ಈ ಸಾಲಿನ ಟಾಟಾ ಐಪಿಎಲ್ ಕಿಕ್‌ಸ್ಟಾರ್ಟ್ ಕೂಡ ಆಗ್ತಿದೆ. ಅಂದ್ರೆ ಇನ್ನೂ ಕೇವಲ ಮೂರೇ ಮೂರು ದಿನಗಳು ಬಾಕಿ ಉಳಿದಿವೆ. 17 ವರ್ಷಗಳ ನಂತ್ರ ಕಳೆದ ವರ್ಷ ಟ್ರೋಫಿ ಎತ್ತಿ ಹಿಡಿಯೋ ಮೂಲಕ RCB ಟೀಂ ತನ್ನ ಲಾಯಲ್ ಫ್ಯಾನ್ಸ್‌ಗೆ ರಾಯಲ್ ಟ್ರೀಟ್ ನೀಡಿತ್ತು. ಈ ಬಾರಿ ಮತ್ತಷ್ಟು ಗರಿಗೆದರಿಲಿದೆ IPL ರಣ ರೋಚಕ ಕದನ.
IPLಗೆ ಕೌಂಟ್‌ಡೌನ್.. ಮತ್ತಷ್ಟು ಸಂಕಷ್ಟಕ್ಕೆ ಸ್ಯಾಂಡಲ್‌ವುಡ್
ಪ್ರವಾಹದ ವಿರುದ್ಧ ಈಜಲು ನಿರ್ಮಾಪಕರು ಸಜ್ಜಾಗ್ತಿರೋದೇಕೆ ?
ಐಪಿಎಲ್‌ಗೆ ಒಂಥರಾ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗಿಂತ ಕ್ರೇಜ್ ಜಾಸ್ತಿ. ಹೀಗಿರುವಾಗ ಚಿತ್ರರಂಗಕ್ಕೆ ಹೊಡೆತ ಬೀಳುವುದರಲ್ಲಿ ಸಂಶಯವೇ ಇಲ್ಲ. ಐಪಿಎಲ್ ಶುರು ಆಗ್ತಿದ್ದಂತೆ ಎಷ್ಟೋ ಮಂದಿ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಹೆದರುತ್ತಾರೆ. ಒಂದ್ಕಡೆ ಕ್ರಿಕೆಟ್.. ಮತ್ತೊಂದ್ಕಡೆ ಓಟಿಟಿ ಹಾವಳಿಗಳಿಂದ ಮೊದಲೇ ಜನ ಥಿಯೇಟರ್‌ಗಳಿಗೆ ಬರ್ತಿಲ್ಲ. ಇವೆಲ್ಲದರ ನಡುವೆ ಈ ಐಪಿಎಲ್ ಅನ್ನೋ ಪ್ರವಾಹದ ಎದುರೇ ಈಜೋಕೆ ಸಜ್ಜಾಗ್ತಿವೆ ಕೆಲ ಸಿನಿಮಾಗಳು.
ಧ್ರುವ ಸರ್ಜಾ- ಸಂಜಯ್ ದತ್ ನಟನೆಯ ಕೆಡಿ ಸಿನಿಮಾ ಏಪ್ರಿಲ್ 30ಕ್ಕೆ ತೆರೆಗೆ ಬರ್ತಿದೆ. ನಿರ್ಮಾಪಕ ಕೆವಿಎನ್ ಈಗಾಗ್ಲೇ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಕ್ರಿಕೆಟ್ ಅನ್ನೋ ಮಹಾ ಮಳೆಯಲ್ಲಿ ತಮ್ಮ ಕೆಡಿ ಚಿತ್ರ ರಿಲೀಸ್ ಮಾಡೋಕೆ ಸಜ್ಜಾಗಿರೋದು ನಿಜಕ್ಕೂ ಭಂಡ ಧೈರ್ಯವೇ ಸರಿ.
KD, ಫಸ್ಟ್ ನೈಟ್ ವಿತ್ ದೆವ್ವ, ಲಕ್ಷ್ಮೀಪುತ್ರ, ಬಾಸ್ ತೆರೆಗೆ ರೆಡಿ
ಯಶ್ ‘ಟಾಕ್ಸಿಕ್’ ಕೂಡ ತೂಗು ಕತ್ತಿಯಿಂದ ತಪ್ಪಿಸಿಕೊಳ್ತಿದೆ..!
ಇವಲ್ಲದೆ ಪ್ರಥಮ್ ನಟನೆಯ ಫಸ್ಟ್ ನೈಟ್ ವಿತ್ ದೆವ್ವ, ಚಂದನ್ ಶೆಟ್ಟಿಯ ಎಲ್ರ ಕಾಲೆಳೆಯುತ್ತೆ ಕಾಲ, ಚಿಕ್ಕಣ್ಣನ ಲಕ್ಷ್ಮೀಪುತ್ರ ಹಾಗೂ ತನುಷ್ ಶಿವಣ್ಣ ನಟಿಸಿ, ನಿರ್ಮಿಸಿರೋ ಬಾಸ್ ಸಿನಿಮಾಗಳು ಕೂಡ ಇದೇ ಐಪಿಎಲ್ ಟೂರ್ನಮೆಂಟ್ ವೇಳೆ ರಿಲೀಸ್ ಆಗೋಕೆ ಸಜ್ಜಾಗಿವೆ. ಎಫೆಕ್ಟ್ ಆಗಲಿದೆ ಅಂತ ಗೊತ್ತಿದ್ದೂ ಕೂಡ ಇವರುಗಳು ರಿಲೀಸ್‌ಗೆ ಸಜ್ಜಾಗ್ತಿರೋದು ಶಾಕಿಂಗ್.
