ಕೇರಳ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್, ಪ್ರಸ್ತುತ ಬಾಲಿವುಡ್ ಚಿತ್ರರಂಗ ತನ್ನ ನೈಜತೆಯನ್ನು ಕಳೆದುಕೊಂಡು ಕೇವಲ ತೋರಿಕೆಗೆ ಸೀಮಿತವಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಬಾಲಿವುಡ್‌ನ ಇಂದಿನ ಸ್ಥಿತಿಯನ್ನು ಮೇಣದ ವಸ್ತುಸಂಗ್ರಹಾಲಯಕ್ಕೆ ಹೋಲಿಸಿದ ನಟ, ಹಿಂದಿ ಚಿತ್ರರಂಗ ನೋಡಲು ಸುಂದರವಾಗಿದೆ ಆದರೆ ಅದು ತನ್ನ ಬೇರುಗಳನ್ನು ಮರೆತಿದೆ. ಅಲ್ಲಿ ಎಲ್ಲವೂ ಪ್ಲಾಸ್ಟಿಕ್‌ನಂತೆ ಸುಂದರವಾಗಿ ಮತ್ತು ಅದ್ಭುತವಾಗಿ ಕಾಣುತ್ತದೆ. ಆದರೆ ಆ ಸುಂದರ ಕವಚದೊಳಗೆ ಯಾವುದೇ ಸತ್ವವಿಲ್ಲ. ಸಿನಿಮಾಗಳು ಕೇವಲ ಹಣಕಾಸು ಕೇಂದ್ರಿತವಾಗಿದ್ದು, ಸ್ವಯಂ ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲಯಾಳಂ ಮತ್ತು ತಮಿಳು ಚಿತ್ರರಂಗಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ನಾವು ದಕ್ಷಿಣದವರು ಇನ್ನೂ ಹೇಳಲು ಸಾವಿರಾರು ನೈಜ ಕಥೆಗಳನ್ನು ಹೊಂದಿದ್ದೇವೆ. ಮಲಯಾಳಂ ಸಿನಿಮಾಗಳು ತಮ್ಮ ಬಲಿಷ್ಠ ಕಥಾಹಂದರದಿಂದ ಜಗತ್ತನ್ನೇ ಗೆಲ್ಲುತ್ತಿವೆ. ತಮಿಳಿನ ಯುವ ನಿರ್ದೇಶಕರು ದಲಿತ ಸಮಸ್ಯೆಗಳಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಈ ಸಿನಿಮಾಗಳು ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿವೆ. ಇದು ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದ ಬಹಳ ಭರವಸೆಯ ವಿಚಾರ ಎಂದು ಸಂಸತ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಕೇವಲ ಗ್ಲಾಮರ್ ಮತ್ತು ಪ್ರಚಾರದ ಹಿಂದೆ ಬಿದ್ದಿದೆ. ಅಲ್ಲಿ ದುಡ್ಡು ಮತ್ತು ಬಾಹ್ಯ ತೋರಿಕೆಯೇ ಪ್ರಮುಖ ಆಕರ್ಷಣೆಯಾಗಿದೆ. ಆದರೆ ದಕ್ಷಿಣ ಭಾರತದ ಸಿನಿಮಾಗಳು ಸಾಮಾನ್ಯ ಜನರ ನೋವು, ನಲಿವು ಮತ್ತು ಸಾಮಾಜಿಕ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿವೆ. ತಮಿಳಿನಲ್ಲಿ ದಲಿತ ಪರ ಹೋರಾಟದ ಕಥೆಗಳು ತೆರೆಯ ಮೇಲೆ ಬರುತ್ತಿರುವುದು ಒಂದು ಕ್ರಾಂತಿಕಾರಕ ಬದಲಾವಣೆ ಎಂದು ಅವರು ಅಭಿಪ್ರಾಯಪಟ್ಟರು.
ಚಿತ್ರರಂಗವು ಕೇವಲ ವ್ಯಾಪಾರವಾಗದೆ, ಜನರ ಬದುಕಿನ ಭಾಗವಾಗಬೇಕಾದರೆ ಅದು ತನ್ನ ಮಣ್ಣಿನ ಬೇರುಗಳೊಂದಿಗೆ ಸಂಪರ್ಕ ಹೊಂದಿರಬೇಕು. ಸೌಂದರ್ಯಕ್ಕಿಂತ ಸತ್ವ ಮುಖ್ಯ ಎಂಬುದನ್ನು ಬಾಲಿವುಡ್ ಅರಿಯಬೇಕಿದೆ ಎಂದು ಹೇಳಿದ್ದಾರೆ.
