ಕೊಯಮತ್ತೂರು: ಸೇಡು ತೀರಿಸಿಕೊಳ್ಳುವುದು ಎಂದರೆ ಕೇವಲ ಕೂಗಾಡುವುದಲ್ಲ, ಎದುರಾಳಿಯ ಅಂಗಳದಲ್ಲೇ ಗೆದ್ದು ನಮ್ಮ ಬಾವುಟ ಹಾರಿಸುವುದು. ಈ ಮಾತನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ. ತಮಿಳುನಾಡಿನ ಈರೋಡ್‌ನಲ್ಲಿ ಕನ್ನಡದ ಬಾವುಟಕ್ಕೆ ನಡೆದಿದ್ದ ಅವಮಾನಕ್ಕೆ, ಸುದೀಪ್ ಅದೇ ತಮಿಳುನಾಡಿನ ಮಣ್ಣಿನಲ್ಲಿ ಕನ್ನಡದ ಪತಾಕೆ ಹಾರಿಸುವ ಮೂಲಕ ಸೈಲೆಂಟ್ ಆಗಿಯೇ ಖಡಕ್ ಉತ್ತರ ನೀಡಿದ್ದಾರೆ.
ಕೆಲವೇ ದಿನಗಳ ಹಿಂದೆ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕನ್ನಡಿಗ ಮಾಲಾಧಾರಿಗಳಿಗೆ ತಮಿಳುನಾಡಿನ ಈರೋಡ್ ಬಳಿ ಕಹಿ ಅನುಭವವಾಗಿತ್ತು. ಕನ್ನಡಿಗರ ವಾಹನಗಳ ಮೇಲಿದ್ದ ಕನ್ನಡದ ಬಾವುಟಗಳನ್ನು ಅಲ್ಲಿನ ಕೆಲವರು ಬಲವಂತವಾಗಿ ಕಿತ್ತೆಸೆದು, ಕನ್ನಡಿಗರಿಗೆ ಕಿರುಕುಳ ನೀಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಇಡೀ ಕರ್ನಾಟಕದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾದಾಗ ಎಲ್ಲೋ ಒಂದು ಕಡೆ ಮೌನ ಆವರಿಸಿತ್ತು. ಆದರೆ, ಆ ಮೌನಕ್ಕೆ ಭರ್ಜರಿ ಉತ್ತರ ಸಿಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಇತ್ತೀಚಿಗೆ ತಮಿಳುನಾಡಿನಲ್ಲಿ ಅಪಮಾನಕ್ಕೊಳಗಾದ ಅದೇ ಸ್ಥಳದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಬಾಸ್ ಕರ್ನಾಟಕ ಧ್ವಜವನ್ನು ಎತ್ತಿ ಹಿಡಿದಿದ್ದಾರೆ..🔥💛❤️🌟
Pride of Kannada Cenima ❤️🔥@KicchaSudeep 👑#KicchaSudeep #KarnatakaBulldozers #CCL2026 #BRBFirstBlood #CCL pic.twitter.com/OZjgVnHulq
— Kichchana Hudugaru Jayanagara (@Team_KHJ_) January 25, 2026
ಈ ಕಹಿ ಘಟನೆ ನಡೆದ ಬೆನ್ನಲ್ಲೇ, ಜನವರಿ 25ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯಾವಳಿ ಆಯೋಜನೆಯಾಗಿತ್ತು. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಲೋಜರ್ಸ್ ಮತ್ತು ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಿತು.
ಪಂದ್ಯದ ಆರಂಭದಿಂದಲೇ ಕಿಚ್ಚನ ಪಡೆ ರೋಷದಿಂದ ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಬುಲ್ಲೋಜರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 202 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಭೋಜ್‌ಪುರಿ ತಂಡ 184 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕ ತಂಡ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಸುದೀಪ್ ತಂಡ ಸತತ ಮೂರನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯ ಗೆಲ್ಲುತ್ತಿದ್ದಂತೆ ಕಿಚ್ಚ ಸುದೀಪ್ ಮೈದಾನದ ಮಧ್ಯಕ್ಕೆ ಬಂದು ಕನ್ನಡದ ಬಾವುಟವನ್ನು ಹೆಮ್ಮೆಯಿಂದ ಎತ್ತಿ ಹಿಡಿದು ಬೀಸಿದರು. ಎಲ್ಲಿ ನಮ್ಮ ಭಾಷೆಯ ಬಾವುಟಕ್ಕೆ ಅವಮಾನವಾಗಿತ್ತೋ, ಅದೇ ತಮಿಳುನಾಡಿನ ನೆಲದಲ್ಲಿ, ಸಾವಿರಾರು ಜನರ ಸಮ್ಮುಖದಲ್ಲಿ ಕನ್ನಡದ ಪತಾಕೆ ರಾರಾಜಿಸಿತು.
ಸುದೀಪ್ ಅವರು ಬಾವುಟ ಬೀಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ. ಈ ಹಿಂದೆ ಹಿಂದಿ ರಾಷ್ಟ್ರಭಾಷೆ ವಿವಾದದ ಸಮಯದಲ್ಲೂ ಅಜಯ್ ದೇವಗನ್ ಅವರಿಗೆ ತಿರುಗೇಟು ನೀಡಿದ್ದ ಸುದೀಪ್, ಈಗ ಮತ್ತೊಮ್ಮೆ ತನ್ನ ಭಾಷಾಭಿಮಾನವನ್ನು ಮೆರೆದಿದ್ದಾರೆ. ನೆಟ್ಟಿಗರು ಇದು ನಮ್ಮ ಕಿಚ್ಚ ಬಾಸ್ ಅಂದ್ರೆ, ಅಪಮಾನವಾದ ಜಾಗದಲ್ಲೇ ಅಸ್ಮಿತೆ ಪ್ರದರ್ಶಿಸಿದ ಅಪ್ಪಟ ಕನ್ನಡಿಗ ಎಂದು ಕಾಮೆಂಟ್ ಮಾಡಿದ್ದಾರೆ.
