ಹಿಂದಿ ಕಿರುತೆರೆಯ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ಹೀನಾ ಖಾನ್, ತಮ್ಮ ವೃತ್ತಿಜೀವನದಲ್ಲಿ ಒಂದೊಂದೇ ಮೈಲಿಗಲ್ಲುಗಳನ್ನು ದಾಟುತ್ತಾ, ಇದೀಗ ಖಾಸಗಿ ಜೀವನದಲ್ಲೂ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಭಾರತೀಯ ಟೆಲಿವಿಷನ್ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ಪ್ರಸಾರವಾದ ಧಾರಾವಾಹಿಗಳಲ್ಲಿ ಒಂದಾದ ಯೇ ರಿಷ್ಟಾ ಕ್ಯಾ ಕೆಹಲಾತಾ ಹೈ ಧಾರಾವಾಹಿಯಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯಾ ಪಾತ್ರದ ಮೂಲಕ ಮನೆಮಾತಾದವರು ಹೀನಾ. 2009ರಿಂದ 2016ರವರೆಗೆ 4755 ಸಂಚಿಕೆಗಳಿಗೂ ಹೆಚ್ಚು ಕಾಲ ಪ್ರಸಾರವಾದ ಈ ಧಾರಾವಾಹಿಯಲ್ಲಿ ಅವರ ನಟನೆ ಪ್ರೇಕ್ಷಕರ ಮನಗೆದ್ದಿತ್ತು. ಈ ಧಾರಾವಾಹಿಯ ಯಶಸ್ಸಿನ ನಂತರ, ಹೀನಾ ರಿಯಾಲಿಟಿ ಶೋಗಳು, ಬಾಲಿವುಡ್ ಚಿತ್ರಗಳು, ವೆಬ್ಸರಣಿಗಳು ಮತ್ತು ಮ್ಯೂಸಿಕ್ ವಿಡಿಯೋ ಆಲ್ಬಂಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಬಹುಮುಖಿ ಕಲಾವಿದೆ ಎನಿಸಿಕೊಂಡಿದ್ದಾರೆ.
ಹೀನಾ ಖಾನ್ರ ವೃತ್ತಿಜೀವನದ ಜೊತೆಗೆ, ಅವರ ಖಾಸಗಿ ಜೀವನವೂ ಸಾಕಷ್ಟು ಗಮನ ಸೆಳೆದಿದೆ. ಯೇ ರಿಷ್ಟಾ ಕ್ಯಾ ಕೆಹಲಾತಾ ಹೈ ಧಾರಾವಾಹಿಯ ಸೆಟ್ನಲ್ಲಿ ಅವರಿಗೆ ರಾಕಿ ಜೈಸ್ವಾಲ್ರ ಜೊತೆ ಪರಿಚಯವಾಯಿತು. ರಾಕಿ, ಈ ಧಾರಾವಾಹಿಯ ನಿರ್ಮಾಣ ತಂಡದಲ್ಲಿದ್ದವರು. 2012ರಿಂದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದರು. ಈ ಪ್ರೀತಿಯ ಸಂಬಂಧ ಕೇವಲ ಭಾವನಾತ್ಮಕವಾಗಿಯೇ ಉಳಿಯಲಿಲ್ಲ. ಇಬ್ಬರೂ ಒಟ್ಟಾಗಿ ವ್ಯವಹಾರದ ಕ್ಷೇತ್ರದಲ್ಲೂ ಕೈಜೋಡಿಸಿದರು. ಒಂದು ಆಪ್ ರಚನೆ, ಡಿಸೈನರ್ ಉಡುಗೆಗಳ ಬ್ರಾಂಡ್ ಸಂಬಂಧಿಸಿದ ಯೋಜನೆಗಳಲ್ಲಿ ಒಟ್ಟಾಗಿ ಹೂಡಿಕೆ ಮಾಡಿದ ಈ ಜೋಡಿ, ತಮ್ಮ ವೃತ್ತಿಪರ ಜೀವನದಲ್ಲೂ ಯಶಸ್ವಿಯಾದರು.
ಆದರೆ, ಈ ಜೋಡಿಯ ಜೀವನದಲ್ಲಿ ದೊಡ್ಡ ಸವಾಲೊಂದು 2024ರ ಜೂನ್ನಲ್ಲಿ ಬಂದಿತ್ತು. ಹೀನಾ ಖಾನ್ಗೆ ಸ್ಟೇಜ್ 3 ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು. ಈ ಸುದ್ದಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಕಿರುತೆರೆ ಜಗತ್ತಿಗೇ ಆಘಾತವನ್ನುಂಟುಮಾಡಿತ್ತು. ಕೀಮೋಥೆರಪಿ ಮತ್ತು ಚಿಕಿತ್ಸೆಯಿಂದಾಗಿ ಹೀನಾ ತಮ್ಮ ಕೆಲಸದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ, ಅವರ ಧೈರ್ಯ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದಾಗಿ, ಅವರು ಈ ಕಾಯಿಲೆಯನ್ನು ಗೆದ್ದು, ಗುಣಮುಖರಾದರು. ಈ ಗೆಲುವಿನ ಸಂತಸವನ್ನು ಇಬ್ಬರೂ ಒಟ್ಟಿಗೆ ಮದುವೆಯ ಮೂಲಕ ಆಚರಿಸಿದ್ದಾರೆ.
13 ವರ್ಷಗಳ ಸುದೀರ್ಘ ಪ್ರೀತಿಯ ಪಯಣದ ಬಳಿಕ, ಹೀನಾ ಖಾನ್ ಮತ್ತು ರಾಕಿ ಜೈಸ್ವಾಲ್ ಇತ್ತೀಚೆಗೆ ಒಂದು ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಸಂಬಂಧಿಕರು ಮತ್ತು ಬಾಲಿವುಡ್ನ ಕೆಲವೇ ಆಪ್ತರ ಸಮ್ಮುಖದಲ್ಲಿ ನಡೆದ ಈ ಮದುವೆ, ಸರಳ ಆದರೆ ಸೊಗಸಾದ ಸಂಭ್ರಮವಾಗಿತ್ತು. ಹೀನಾ ಖಾನ್ ಈಗ ಕಂಟ್ರಿ ಆಫ್ ಬೈಂಡ್ ಎಂಬ ಹಿಂದಿ-ಇಂಗ್ಲಿಷ್ ದ್ವಿಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಯಶಸ್ಸಿನ ಹೆಜ್ಜೆಯನ್ನಿಡಲು ಸಜ್ಜಾಗಿದ್ದಾರೆ.