ಹೈದರಾಬಾದ್: ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಐತಿಹಾಸಿಕ ಚಿತ್ರ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟ್ರೈಲರ್ ಜುಲೈ 3, ಇಂದು ಬಿಡುಗಡೆಯಾಗಿದೆ. ದಕ್ಷಿಣ ಭಾರತದಲ್ಲಿ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಸಿನಿಮಾ, ಹಲವು ವಿಳಂಬಗಳ ಬಳಿಕ ಜುಲೈ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಸುಮಾರು ಮೂರು ನಿಮಿಷಗಳ ಈ ಟ್ರೈಲರ್‌ನಲ್ಲಿ ಪವನ್ ಕಲ್ಯಾಣ್ ವಿವಿಧ ಶೈಲಿಗಳಲ್ಲಿ ಮಿಂಚಿದ್ದಾರೆ, ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ ಭರವಸೆ ನೀಡಿದೆ.
‘ಹರಿ ಹರ ವೀರ ಮಲ್ಲು’ ಐತಿಹಾಸಿಕ ಕಥಾಹಂದರವನ್ನು ಒಳಗೊಂಡಿದ್ದು, ಔರಂಗಾಜೇಬನ ಕಾಲದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಎದುರಿಸುವ ವೀರಮಲ್ಲು ಎಂಬ ಯೋಧನ ಕತೆಯನ್ನು ಚಿತ್ರಿಸುತ್ತದೆ. ಟ್ರೈಲರ್ ಆರಂಭವಾಗುವುದೇ “ಹಿಂದೂಗಳಾಗಿ ಬದುಕಲು ತೆರಿಗೆ ಕಟ್ಟಬೇಕಾದ ಕಾಲವದು” ಎಂಬ ಹಿನ್ನೆಲೆ ದನಿಯೊಂದಿಗೆ, ಇದು ಚಿತ್ರದ ತೀವ್ರತೆಯನ್ನು ಸೂಚಿಸುತ್ತದೆ. ಟ್ರೈಲರ್‌ನಲ್ಲಿ ಅದ್ಧೂರಿ ಆಕ್ಷನ್ ದೃಶ್ಯಗಳು, ಭಾವನಾತ್ಮಕ ಕ್ಷಣಗಳು ಮತ್ತು ಪವನ್ ಕಲ್ಯಾಣ್‌ರ ಬಹುಮುಖೀ ಪಾತ್ರದ ಝಲಕ್‌ಗಳು ಕಾಣಿಸಿಕೊಂಡಿವೆ.
ಪವನ್ ಕಲ್ಯಾಣ್ ಈ ಚಿತ್ರದಲ್ಲಿ ಹಿಂದೂ ಧರ್ಮದ ಪರವಾಗಿ ಹೋರಾಡುವ ಯೋಧ, ಜನನಾಯಕ, ಬೋಧಕ ಮತ್ತು ಮಾನವೀಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನ ಸಂಭಾಷಣೆಗಳು ಮತ್ತು ದೃಶ್ಯಗಳು ಅವರ ರಾಜಕೀಯ ಇಮೇಜ್‌ಗೆ ಸರಿಹೊಂದುವಂತೆ ರೂಪಿತವಾಗಿವೆ, ಅಭಿಮಾನಿಗಳಿಗೆ ಉತ್ಸಾಹ ತುಂಬುತ್ತವೆ. ಟ್ರೈಲರ್‌ನಲ್ಲಿ ನಿಧಿ ಅಗರ್ವಾಲ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ತಮ್ಮ ಮುದ್ದಾದ ನಟನೆಯಿಂದ ಗಮನ ಸೆಳೆಯುತ್ತಾರೆ. ಇದೇ ರೀತಿ, ಹಾಸ್ಯನಟ ಸುನಿಲ್, ಸತ್ಯರಾಜ್, ನಾಸರ್, ಮತ್ತು ತನಿಕೇಲ ಭರಣಿ ಕೂಡ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್ ಔರಂಗಾಜೇಬನಾಗಿ ಖಡಕ್ ಅಭಿನಯ ನೀಡಿರುವುದು ಟ್ರೈಲರ್‌ನಿಂದ ಸ್ಪಷ್ಟವಾಗುತ್ತದೆ.
ಈ ಟ್ರೈಲರ್ ತೆಲುಗು ರಾಜ್ಯಗಳ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸಾವಿರಾರು ಪವನ್ ಕಲ್ಯಾಣ್ ಅಭಿಮಾನಿಗಳು ಚಿತ್ರಮಂದಿರಗಳಿಗೆ ಮುಗಿಬಿದ್ದಿದ್ದಾರೆ. ಈ ಆರ್ಭಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
‘ಹರಿ ಹರ ವೀರ ಮಲ್ಲು’ ಚಿತ್ರವನ್ನು ಕೃಷ್ ಮತ್ತು ಎಎಂ ಜ್ಯೋತಿ ಕೃಷ್ಣ ನಿರ್ದೇಶಿಸಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಜುಲೈ 24, 2025ಕ್ಕೆ ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.