ಐತಿಹಾಸಿಕ ‘ಹಲಗಲಿ’.. ಬೆಳ್ಳಿತೆರೆಗೆ ಬೇಡನಾಗಿ ಡಾಲಿ..!

ಡಾಲಿ ಧನಂಜಯ ಜೊತೆ ಮಗದೊಮ್ಮೆ ಸಪ್ತಮಿ ಮಿಂಚು

Untitled design (7)

ಕಳೆದ ವರ್ಷ ಕೋಟಿ ಸಿನಿಮಾದ ಬಳಿಕ ಡಾಲಿ ಪೂರ್ಣ ಪ್ರಮಾಣದ ನಾಯಕನಟನಾಗಿ ಬಣ್ಣ ಹಚ್ಚಿದ ಯಾವುದೇ ಸಿನಿಮಾ ಬರಲಿಲ್ಲ. ಇದೀಗ ಸ್ವತಂತ್ರಪೂರ್ವ ಭಾರತದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾದ ಉತ್ತರ ಕರ್ನಾಟಕದ ಹಲಗಲಿಯ ಬೇಡರ ಕುರಿತ ಕ್ರಾಂತಿಕಾರಿ ಚಳವಳಿ ಬೆಳ್ಳಿತೆರೆ ಬೆಳಗುತ್ತಿದೆ. ಡಾಲಿ ಧನಂಜಯ ಆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗ್ತಿರೋದು ಇಂಟರೆಸ್ಟಿಂಗ್.

ಐತಿಹಾಸಿಕ ಹಲಗಲಿ ಚಳವಳಿ ಇದೀಗ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗ್ತಿದೆ. ಅದ್ರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಡಾಲಿ ಧನಂಜಯ. ಯೆಸ್.. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಡಾಲಿಗೆ  ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸುಖೇಶ್ ನಾಯಕ್ ನಿರ್ದೇಶನದ, ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಯ ನಿರ್ಮಾಣದ ಬಹುತಾರಾಗಣದ ಅದ್ಧೂರಿ ಬಜೆಟ್ ಚಿತ್ರವಿದು. ಹಲಗಲಿ ಈಗಾಗ್ಲೇ ಸಾಕಷ್ಟು ಸದ್ದು ಮಾಡಿದೆ. ಇದು ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೀರರ, ಧೀರರ, ಶೂರರ ಕುರಿತ ಕಥಾನಕ.

ಒಂದಲ್ಲ ಎರಡೆರಡು ಭಾಗಗಳಲ್ಲಿ ಮೂಡಿ ಬರಲಿರುವ ಈ ಸಿನಿಮಾ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ತಯಾರಾಗ್ತಿದೆ ಅನ್ನೋದು ವಿಶೇಷ. ಐದು ಭಾಷೆಯಲ್ಲಿ ಚಿತ್ರೀಕರಣ ಆಗ್ತಿರೋ ಕನ್ನಡದ ಐತಿಹಾಸಿಕ ಸಿನಿಮಾದ ಫಸ್ಟ್ ರೋರ್ ರಿಲೀಸ್ ಆಗಿದ್ದು, ಸಖತ್ ಇಂಪ್ರೆಸ್ಸೀವ್ ಆಗಿದೆ. ಸ್ವಾತಂತ್ರ್ಯೋತ್ಸವ ಹಿನ್ನೆಲೆ ಇತ್ತೀಚೆಗೆ ಫಸ್ಟ್ ಲುಕ್ ಟೀಸರ್‌ನ ಲಾಂಚ್ ಮಾಡಲಾಯಿತು.

ಈ ಕುರಿತು ಮಾತನಾಡಿದ ಡಾಲಿ ಧನಂಜಯ, ಈ ಚಿತ್ರದಲ್ಲಿ ನಾನು ನಿಮಿತ್ತ ಮಾತ್ರ. ಜಡಗ ಅನ್ನೋ ಪಾತ್ರ ಮಾಡ್ತಿದ್ದೀನಿ. ನಿರ್ದೇಶಕರು ಹಾಗೂ ನಿರ್ಮಾಪಕರು ನಿಜವಾದ ಹೀರೋಗಳು. ನಾನು‌ ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಅಂತ ಹೇಳ್ತಿದ್ದೆ. ನನ್ನ ಕರಿಯರ್ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೆ. ನಟರಾಗಿ ನಮ್ಮ ಕಂಟ್ರೋಲ್‌ನಲ್ಲಿ ಏನೂ ಇರಲ್ಲ. ಕೆಲಸ ಮಾತ್ರ ಮಾಡ್ತಿರ್ತೇವೆ. ಅಲ್ಲಮ ಬಯೋಪಿಕ್ ಮಾಡಿದ್ದೆ. ಈಗ ಹಲಗಲಿ. ನನಗೆ ಒಂದು ಭಯ ಕಾಡ್ತಾ ಇತ್ತು. ಐತಿಹಾಸಿಕ ಸಿನಿಮಾಗಳನ್ನ ಶುರು ಮಾಡ್ತಾರೆ. ಆಮೇಲೆ ನಿಲ್ಲಿಸಿಬಿಡ್ತಾರೆ. ಬಜೆಟ್ ಇರಲ್ಲ. ಅದಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ. ಹಲಗಲಿ ಸ್ಕ್ರಿಪ್ಟ್ ಓದಿದೆ. ಬಹಳ ಚೆನ್ನಾಗಿ ಬರೆದಿದ್ದರು. ಓದುತ್ತಾ ಓದುತ್ತಾ ಖುಷಿಯಾಯ್ತು. ಟೀಂ ಭೇಟಿಯಾದೆ. ಅವರು ಬ್ರಿಟೀಷ್ ಎಪಿಸೋಡ್ ಶೂಟಿಂಗ್ ಮುಗಿಸಿದ್ದರು. ಅದ್ಭುತವಾದ ವಿಷ್ಯುವಲ್ಸ್. ಅಲ್ಲಿಂದ ನಂಬಿಕೆ ಬಂತು ಎಂದಿದ್ದಾರೆ.

ಚೊಚ್ಚಲ ಸಿನಿಮಾ ಪಾಪ್‌‌ಕಾರ್ನ್‌ ಮಂಕಿ ಟೈಗರ್ ನಲ್ಲೇ ಡಾಲಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು ಸಪ್ತಮಿ. ಇಲ್ಲಿ ಹೊನ್ನಿ ಪಾತ್ರಕ್ಕೆ ಜೀವ ತುಂಬಿರೋ ಕಾಂತಾರ ಚೆಲುವೆ ಸಪ್ತಮಿ ಗೌಡ, ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿರೋದಾಗಿ ಹೇಳಿದ್ರು. ಈ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕೂಡ ಕಲಿತರಂತೆ. ಲುಕ್ ಬಹಳ ವಿಭಿನ್ನವಾಗಿದ್ದು, ತುಂಬಾ ರಫ್ ಹಾಗೂ ಟಫ್ ಇರೋ ಸ್ಟ್ರೈಟ್ ಪಾತ್ರ ಅಂತಾರೆ.

ಈಗಾಗಲೇ 40% ಶೂಟಿಂಗ್ ಮುಗಿದಿದ್ದು, ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ. ಬಳಿಕ‌ ನೆಲಮಂಗಲದಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಮಾಡ್ತಿದೆ ಟೀಂ. ಕನ್ನಡ ಸೇರಿ ಸುಮಾರು ಐದು ಭಾಷೆಯಲ್ಲಿ ಮೂಡಿ ಬರ್ತಿರೋ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ವಿಶೇಷವಾದ ಸ್ಥಳಗಳಲ್ಲಿ ಶೂಟಿಂಗ್ ನಡೆಯಲಿದೆಯಂತೆ.

ಡಾಲಿ ಧನಂಜಯ ವೃತ್ತಿ ಬದುಕಿನಲ್ಲಿ ಇದೊಂದು ಮಹತ್ವದ ಹಾಗೂ ಮೈಲುಗಲ್ಲಿನ ಸಿನಿಮಾ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿವರೆಗೂ ಅವರನ್ನು ತೆರೆಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ.

ಹಲಗಲಿ.. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಸಿಕ್ಕಾಪಟ್ಟೆ ರೋಚಕ & ರೋಮಾಂಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಖೇಶ್ ನಾಯಕ್. ವಾಸುಕಿ ವೈಭವ್ ಸಂಗೀತ, ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಈ ಚಿತ್ರಕ್ಕಾಗಿ ಕಾರ್ಯ ನಿರ್ವಹಿಸ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version