ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಗಾಂಧಿನಗರದ ಆ ಒಂದು ‘ಮಳೆ’ ಇಡೀ ಸ್ಯಾಂಡಲ್‌ವುಡ್ ಇತಿಹಾಸವನ್ನೇ ಬದಲಿಸಿತ್ತು ನೆನಪಿದೆಯೇ? ಅಂದು ಮಳೆಯ ಹನಿಯಂತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇವತ್ತು ಕನ್ನಡಿಗರ ಪಾಲಿನ ‘ಗೋಲ್ಡನ್ ಸ್ಟಾರ್’ ಆಗಿ ಮೆರೆಯುತ್ತಿರುವ ಆ ಕೂಲ್ ಹೀರೋ ಯಾರು ಗೊತ್ತಾ? ಕಳೆದ ಎರಡು ದಶಕಗಳಿಂದ ಕನ್ನಡಿಗರನ್ನು ನಗಿಸಿ, ಅಳಿಸಿ, ಈಗ 20 ವರ್ಷಗಳ ಯಶಸ್ವಿ ಜರ್ನಿ ಮುಗಿಸಿರುವ ಗಣೇಶ್ ಅವರ ಕಂಪ್ಲೀಟ್ ಸಿನಿ ಜರ್ನಿ ಹೇಗಿತ್ತು ಅನ್ನೋದರ ಸ್ಟೋರಿ ಇಲ್ಲಿದೆ ನೋಡಿ.
- ನಮಸ್ಕಾರ ನಮಸ್ಕಾರ.. ಇದು ಸ್ಫೂರ್ತಿದಾಯಕ ಗೋಲ್ಡನ್ ಕಥೆ
- ಮಾದನಾಗಿ ಅಳಿಸಿ, ಗಾಳಿಪಟದ ಗಣಿಯಾಗಿ ನಗಿಸಿದ್ದ ಗಣೇಶ್
- ಆರ್ಕೆಸ್ಟ್ರಾ ಮಿಮಿಕ್ರಿ To ಮೆಗಾ ಸ್ಟಾರ್ ಗಣೇಶ್ ಸಕ್ಸಸ್ ಸ್ಟೋರಿ..!
- ಅಂದು 50 ರೂ ಸಂಬಳ.. ಇಂದು ಹೈಯೆಸ್ಟ್ ಪೇಯ್ಡ್ ಸ್ಟಾರ್
ಒಂದು ಕಾಲದಲ್ಲಿ ಆರ್ಕೆಸ್ಟ್ರಾಗಳಲ್ಲಿ ಡ್ಯಾನ್ಸ್ ಮಾಡುತ್ತಾ, ಮಿಮಿಕ್ರಿ ಮೂಲಕ ಜನರನ್ನು ನಗಿಸುತ್ತಿದ್ದ ಗಣೇಶ್ ಅವರ ಬದುಕಿನಲ್ಲಿ ಸಾಕಷ್ಟು ವಿಘ್ನಗಳಿದ್ದವು. ನೆಲಮಂಗಲದ ಅಡಕಮಾರನಹಳ್ಳಿಯ ಈ ಪ್ರತಿಭೆಗೆ ಆರಂಭದಲ್ಲಿ ಸಿಕ್ಕಿದ್ದೆಲ್ಲಾ ಸಣ್ಣಪುಟ್ಟ ಪಾತ್ರಗಳು ಮಾತ್ರ. ಹಸಿವು ಮತ್ತು ಹಠ ಎರಡನ್ನೂ ಹೊತ್ತು ಗಾಂಧಿನಗರದ ಬೀದಿಗಳಲ್ಲಿ ಅವಕಾಶಕ್ಕಾಗಿ ಅಲೆದಿದ್ದ ಆ ದಿನಗಳು ಇಂದಿಗೂ ಅವರ ಯಶಸ್ಸಿನ ಅಡಿಪಾಯ.
ಗಣೇಶ್ ಅವರ ಬದುಕಿಗೆ ದಾರಿದೀಪವಾಗಿದ್ದು ಉದಯ ಟಿವಿಯ ‘ಕಾಮಿಡಿ ಟೈಮ್’. ಈ ಶೋ ಎಷ್ಟು ಜನಪ್ರಿಯವಾಯಿತು ಅಂದ್ರೆ, ಗಣೇಶ್ ಅವರ “ನಮಸ್ಕಾರ ನಮಸ್ಕಾರ” ಅನ್ನೋ ಡೈಲಾಗ್ ಮನೆಮನೆಯ ಮಂತ್ರವಾಯಿತು. ಕಾಮಿಡಿ ಟೈಮ್ ಗಣೇಶ್ ಅಂದ್ರೆ ಅದು ಹಾಸ್ಯದ ಕಣಜ ಎಂಬಂತಾಯಿತು. ಆದರೆ, ಈ ಹಾಸ್ಯನಟನ ಒಳಗೆ ಒಬ್ಬ ಅದ್ಭುತ ನಟನಿದ್ದಾನೆ ಅಂತ ಅಂದು ಯಾರಿಗೂ ತಿಳಿದಿರಲಿಲ್ಲ.
ಹೀರೊ ಆಗುವ ಕನಸು ಹೊತ್ತಿದ್ದ ಗಣೇಶ್‌ಗೆ ಆರಂಭದಲ್ಲೇ ಆಘಾತ ಕಾದಿತ್ತು. ‘ಗುಟ್ಟು’ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದರೂ, ಆ ಚಿತ್ರ ಬಿಡುಗಡೆಯ ಭಾಗ್ಯವನ್ನೇ ಕಾಣಲಿಲ್ಲ. ಆದರೂ ಎದೆಗುಂದದ ಅವರು ‘ಅಮೃತಧಾರೆ’ಯಂತಹ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಸಿಕ್ಕರೂ ಅದನ್ನು ಚಿನ್ನದಂತೆ ಬಳಸಿಕೊಂಡರು. ಅಂದು ಅವರ ಕೈಯಲ್ಲಿದ್ದ 50 ರೂಪಾಯಿ ಸಂಭಾವನೆಯೇ ಇಂದು ಕೋಟಿಗಳ ವ್ಯವಹಾರಕ್ಕೆ ಅಡಿಪಾಯ ಹಾಕಿದ್ದು. ಅವರ ಆ ಕಣ್ಣಲ್ಲಿ ಅಂದು ಕಂಡ ಹಠವೇ ಇವತ್ತು ಗಣೇಶ್ ಮಲ್ಟಿ-ಮಿಲಿಯನೇರ್ ಸ್ಟಾರ್ ಆಗಿ ಮಾಡಿದೆ.
2006ರಲ್ಲಿ ‘ಚೆಲ್ಲಾಟ’ ಶುರುವಾದಾಗ ಗಾಂಧಿನಗರದ ಮಂದಿ ಇವನೊಬ್ಬ ಕಾಮಿಡಿ ಹುಡುಗ, ಹೀರೊ ಆಗೋದು ಕಷ್ಟ ಎಂದು ಆಡಿಕೊಂಡಿದ್ದರು. ಆದರೆ ಎಂ.ಡಿ. ಶ್ರೀಧರ್ ನಂಬಿಕೆಯನ್ನು ಗಣೇಶ್ ಹುಸಿ ಮಾಡಲಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ‘ಚೆಲ್ಲಾಟ’ ಭರ್ಜರಿ ಲೂಟಿ ಮಾಡಿತು. ಗಣೇಶ್ ಅವರ ವಿಶಿಷ್ಟ ಮ್ಯಾನರಿಸಂ ಮತ್ತು ಆ ‘ನಮಸ್ಕಾರ ನಮಸ್ಕಾರ’ ಸ್ಟೈಲ್ ಹೀರೊ ಆಗಿಯೂ ವರ್ಕೌಟ್ ಆಯ್ತು.
- ಮುಂಗಾರು ಮಳೆಯ ಮೈಲಿಗಲ್ಲು.. 865 ದಿನಗಳ ದಾಖಲೆ..!
- ಕನ್ನಡ ಸಿನಿಮಾ ಇತಿಹಾಸವನ್ನೇ ಬದಲಿಸಿದ ‘ಕೂಲ್ ಹೀರೊ’
- ವಿಘ್ನಗಳನ್ನ ಗೆದ್ದು ಬಂದ ಮಳೆ ಹುಡುಗನ ರಿಯಲ್ ಸಕ್ಸಸ್ ಕಹಾನಿ
- ಗಾಡ್ಫಾದರ್ ಇಲ್ಲದೆ ಬೆಳೆದ ಸ್ಯಾಂಡಲ್‌ವುಡ್ ಸುವರ್ಣ ಪ್ರತಿಭೆ
ಇನ್ನು ಯೋಗರಾಜ್ ಭಟ್ ಮತ್ತು ಗಣೇಶ್ ಇಬ್ಬರು ಪಕ್ಕಾ ಲೋಕಲ್ ಹುಡುಗರ ಜುಗಲ್‌ಬಂಧಿ. ಇಡೀ ಭಾರತೀಯ ಚಿತ್ರರಂಗವೇ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ‘ಮುಂಗಾರು ಮಳೆ’ ಸಿನಿಮಾ. ಇಡೀ ಸಿನೆಮಾ ಇತಿಹಾಸದಲ್ಲೇ ಇದೊಂದು ಅದ್ಭುತ ಮ್ಯಾಜಿಕ್. ಈ ಚಿತ್ರದ ಸಂಭಾಷಣೆಗಳು ಅದೆಷ್ಟು ಫೇಮಸ್ ಆದವು ಅಂದ್ರೆ, ಹುಡುಗರೆಲ್ಲಾ ಪ್ರೀತಮ್‌ನಂತೆ ಕಣ್ಣೀರು ಹಾಕಲು ಶುರುಮಾಡಿದ್ದರು. 865 ದಿನಗಳ ಕಾಲ ಥಿಯೇಟರ್‌ನಲ್ಲಿ ಮಳೆ ಸುರಿಸಿದ ಈ ಚಿತ್ರ ಗಣೇಶ್‌ಗೆ ‘ಗೋಲ್ಡನ್ ಸ್ಟಾರ್’ ಎಂಬ ಪಟ್ಟ ಮೂಡಿ ಗೆರಿಸಿತ್ತು. ರಾತ್ರೋರಾತ್ರಿ ಒಬ್ಬ ಹಾಸ್ಯ ನಟ ಸ್ಯಾಂಡಲ್‌ವುಡ್‌ನ ಸುಪ್ರೀಂ ಪವರ್ ಆಗಿ ಬದಲಾಗಿದ್ದರು.
ಈ ಯಶಸ್ಸು ಗಣೇಶ್‌ಗೆ ಸುಲಭವಾಗಿ ಸಿಗಲಿಲ್ಲ. ಸೋಲುಗಳ ವಿಘ್ನ ಬಂದಾಗಲೂ ಗಣಪನಂತೆ ತಾಳ್ಮೆಯಿಂದ ಗೆದ್ದು ಬಂದವರು ಇವರು. ಇಂದಿಗೂ ಗಣೇಶ್ ಡೈಲಾಗ್ಸ್, ಸಾಂಗ್ಸ್ ಹುಡುಗರ ಫೇವರೇಟ್ ರಿಂಗ್‌ಟೋನ್ಸ್. ಕಣ್ಣಲ್ಲೇ ಎಮೋಷನ್ ಹರಿಸಿ, ಮಾತಲ್ಲೇ ಮ್ಯಾಜಿಕ್ ಮಾಡುವ ಗಣೇಶ್, ಕನ್ನಡ ಮಣ್ಣಿನ ಅಪ್ಪಟ ಪ್ರತಿಭೆಯಾಗಿ ಬೆಳೆದು ನಿಂತಿದ್ದಾರೆ. ವಿಘ್ನಗಳನ್ನ ಗೆದ್ದು ಬಂದ ಗಣೇಶ್ ಸಿನಿ ಜರ್ನಿ ಪ್ರತಿಯೊಬ್ಬ ಸ್ಟ್ರಗ್ಲರ್‌ಗೆ dictionary ಇದ್ದಂತೆ.
‘ಮುಂಗಾರು ಮಳೆ’ಯ ಮ್ಯಾಜಿಕ್ ನಂತರ ಗಣೇಶ್ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ‘ಚೆಲುವಿನ ಚಿತ್ತಾರ’ದ ಮಾದನಾಗಿ ಇಡೀ ರಾಜ್ಯವನ್ನೇ ಅಳಿಸಿದ್ದ ಈ ನಟ, ‘ಗಾಳಿಪಟ’ದ ಗಣಿಯಾಗಿ ನಗು-ನಳಿನ ಹಬ್ಬವನ್ನೇ ಉಣಬಡಿಸಿದ್ದರು. ಕೃಷ್ಣ, ಅರಮನೆ, ಸಂಗಾತಿ ಹೀಗೆ ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದರು. ಕೇವಲ ಮಾಸ್ ಮಾತ್ರವಲ್ಲ, ಕ್ಲಾಸ್ ಪ್ರೇಕ್ಷಕರನ್ನೂ ಸೆಳೆಯುವ ಗಣೇಶ್ ಅವರ ‘ಚಾಕೋಲೇಟ್ ಹೀರೊ’ ಇಮೇಜ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತು.
ಗಣೇಶ್ ಅಂದ್ರೆ ಬರಿ ಕಾಮಿಡಿ ಅಂತ ಭಾವಿಸಿದವರಿಗೆ 99 ಮತ್ತು ಬಾನದಾರಿಯಲ್ಲಿ ಸಿನಿಮಾಗಳು ಉತ್ತರ ನೀಡಿದ್ದವು. ಕಣ್ಣಲ್ಲೇ ಕವಿತೆ ಬರೆಯುವ, ನೋವಿನಲ್ಲೂ ನಗು ಬೀರುವ ಅವರ ಇಂಟೆನ್ಸ್ ನಟನೆಗೆ ಫಿಲ್ಮ್‌ಫೇರ್ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಮನೆ ಹುಡುಕಿಕೊಂಡು ಬಂದವು. ಮೌನದಲ್ಲೂ ನೂರಾರು ಭಾವನೆಗಳನ್ನು ವ್ಯಕ್ತಪಡಿಸುವ ಅವರ ‘ಕಿಂಗ್ ಆಫ್ ಎಮೋಷನ್’ ಅವತಾರಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. 20 ವರ್ಷಗಳ ನಂತರವೂ ಅವರ ಕ್ರೇಜ್ ಕಿಂಚಿತ್ತೂ ಕುಂದಿಲ್ಲ ಎನ್ನುವುದಕ್ಕೆ ಇತ್ತೀಚಿನ ‘ಕೃಷ್ಣಂ ಪ್ರಣಯ ಸಖಿ’ ಸೃಷ್ಟಿಸಿದ ಹವಾವೇ ಸಾಕ್ಷಿ.75 ಕೋಟಿ ಕ್ಲಬ್‌ಗೆ ಕನ್ನಡ ಸಿನಿಮಾವನ್ನು ಮೊದಲ ಬಾರಿಗೆ ಕರೆದೊಯ್ದ ಕೀರ್ತಿ ಗಣೇಶ್ ಅವರದ್ದು.
ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರೂ ಪ್ಯಾನ್-ಇಂಡಿಯಾ ಹಿಂದೆ ಓಡುತ್ತಿದ್ದರೆ, ಗಣೇಶ್ ಮಾತ್ರ ನಮ್ಮ ಮಣ್ಣಿನ ಕಥೆಗಳಿಗೆ, ಕನ್ನಡದ ನೇಟಿವಿಟಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಪರಭಾಷೆಯ ಆಫರ್‌ಗಳಿಗಿಂತ ಕನ್ನಡದ ಕಂಪು ಹರಡುವ ಸಿನಿಮಾಗಳೇ ಇವರ ಮೊದಲ ಆದ್ಯತೆ. ‘ಶ್ರಾವಣಿ ಸುಬ್ರಹ್ಮಣ್ಯ’ದಿಂದ ‘ಚಮಕ್’ವರೆಗೆ ಇವರು ಆರಿಸಿಕೊಳ್ಳುವ ವಿಭಿನ್ನ ಕಥೆಗಳು ಗಣೇಶ್ ಕೇವಲ ನಟನಲ್ಲ, ಸಿನಿಮಾದ ನಾಡಿಮಿಡಿತ ಅರಿತ ಚತುರ ಎಂಬದನ್ನು ಸಾಬೀತುಪಡಿಸುತ್ತವೆ.
