ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ: ಪೋಸ್ಟರ್ ವೈರಲ್

Untitled design 2025 11 05t145912.470

ಕನ್ನಡ ಚಲನಚಿತ್ರ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ದಿ ಡೆವಿಲ್ (The Devil Movie) ಇದೀಗ ಮತ್ತೆ ಸುದ್ದಿಯಲ್ಲಿದೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಇದೀಗ ಚಿತ್ರತಂಡ ಹೊಸ ಬಿಗ್‌ ಅಪ್ಡೇಟ್‌‌ ನೀಡಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಹಾಗೂ ಹಾಸ್ಯ ಕಲಾವಿದ ಗಿಲ್ಲಿ ನಟ (Gilli Nata) ಈ ಚಿತ್ರದಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರತಂಡ ಗಿಲ್ಲಿಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಿಲನಾ ಪ್ರಕಾಶ್ ನಿರ್ದೇಶನದ ‘ದಿ ಡೆವಿಲ್’ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ವಿಳಂಬವಾಗಿದೆ. ಇತ್ತೀಚೆಗೆ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ, ತಮ್ಮ ಸಿನಿಮಾಕ್ಕೆ ಯಾವುದೇ ಅಡಚಣೆ ಬರಬಾರದೆಂದು ಹೇಳಿದ್ದಾರೆ. ಇದರಿಂದ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಈಗಾಗಲೇ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಮತ್ತು ‘ಒಂದೇ ಒಂದು ಸಲ’ ಹಾಡುಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ. ಈ ನಡುವೆ ಗಿಲ್ಲಿಯ ಎಂಟ್ರಿ ಚಿತ್ರಕ್ಕೆ ಹೊಸ ಆಯಾಮ ನೀಡಿದೆ.

ಗಿಲ್ಲಿ ನಟ ಹಾಸ್ಯ ಕಲಾವಿದನಾಗಿ ಹಲವು ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಭಾಗವಹಿಸಿ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಅವರ ಆಟದ ಶೈಲಿ, ಹಾಸ್ಯ ಮತ್ತು ವ್ಯಕ್ತಿತ್ವದಿಂದ ಕರ್ನಾಟಕದಾದ್ಯಂತ ಗಮನ ಸೆಳೆಯುತ್ತಿದ್ದಾರೆ. ಪ್ರತಿದಿನ ಶೋನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಮಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಗಿಲ್ಲಿ, ಇದೀಗ ಬೆಳ್ಳಿ ತೆರೆಗೆ ಭರ್ಜರಿ ಎಂಟ್ರಿ ನೀಡುತ್ತಿದ್ದಾರೆ.

‘ದಿ ಡೆವಿಲ್’ ಚಿತ್ರದಲ್ಲಿ ಗಿಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಕಾಮಿಡಿ ಸ್ಟಾರ್ ಆಗಿ ಮಿಂಚುವ ಅವರು, ಈ ಬಾರಿ ಖಡಕ್ ಮತ್ತು ಸಖತ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಿಲನಾ ಪ್ರಕಾಶ್ ಅವರೇ ಪೋಸ್ಟರ್ ಹಂಚಿಕೊಂಡು ಈ ಮಾಹಿತಿ ನೀಡಿದ್ದಾರೆ. ಗಿಲ್ಲಿಯ ಲುಕ್ ವೈರಲ್ ಆಗಿದ್ದು, ಫ್ಯಾನ್ಸ್ ಎಕ್ಸೈಟ್‌ಮೆಂಟ್ ಡಬಲ್ ಆಗಿದೆ.

ನಟ ದರ್ಶನ್‌ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್‌ 12ಕ್ಕೆ ತೆರೆ ಕಾಣಲಿದೆ. ಚಿತ್ರತಂಡದಿಂದ ಬಿಡುಗಡೆಯಾದ ಗಿಲ್ಲಿಯ ಪೋಸ್ಟರ್ ನೋಡಿ ಫ್ಯಾನ್ಸ್  ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಮತ್ತು ಸಿನಿಮಾ ಎರಡರಲ್ಲೂ ಮಿಂಚುತ್ತಿದ್ದಾರೆ.

 

Exit mobile version