ಫುಲ್ ಮೀಲ್ಸ್ ಅಮೆಜಾನ್ ಪ್ರೈಮ್‌ನಲ್ಲಿ ನೋಡಲು ಲಭ್ಯ: ಚಿತ್ರತಂಡದವರಿಂದ ಹೊಸ ವರ್ಷದ ಗಿಫ್ಟ್‌!

Untitled design 2026 01 02T183140.319

ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್‌ನ ಜೀವನ ಪಯಣ, ಕನಸುಗಳು ಮತ್ತು ಕುಟುಂಬದ ಮೌಲ್ಯಗಳನ್ನು ಸಹಜವಾಗಿ ತೆರೆದಿಡುವ ಎಂಗೇಜಿಂಗ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ಫುಲ್ ಮೀಲ್ಸ್’ ಇದೀಗ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.

2025ರ ನವೆಂಬರ್ 21ರಂದು ‘ಫುಲ್ ಮೀಲ್ಸ್’ ಚಿತ್ರವು ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಯಶಸ್ವಿ ಪ್ರದರ್ಶನದೊಂದಿಗೆ 25 ದಿನಗಳನ್ನು ಪೂರೈಸಿದ ಈ ಚಿತ್ರ ಇದೀಗ ಓಟಿಟಿ ಅಂಗಳಕ್ಕೆ ಕಾಲಿಟ್ಟಿದೆ.

ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸಿರುವ , ಎನ್ ವಿನಾಯಕ ನಿರ್ದೇಶಿಸಿರುವ ‘ಫುಲ್ ಮೀಲ್ಸ್’ ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ಮಾರ್ಕ್ ಸಿಕ್ಕಿದ್ದು, ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅವರುಗಳ ಅಭಿನಯ ಗಮನ ಸೆಳೆಯುವಂತಿದೆ.

ಹೊಸ ವರ್ಷದ ಪ್ರಯುಕ್ತವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಕುಟುಂಬ ಸಮೇತರಾಗಿ ವೀಕ್ಷಿಸುತ್ತಿದ್ದು, ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

‘ಸಂಕಷ್ಟಕರ ಗಣಪತಿ’, ‘ಅಬ್ಬಬ್ಬ’, ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಲಿಖಿತ್ ಶೆಟ್ಟಿ ಅವರು ತಮ್ಮ ನಟನೆ, ಆ್ಯಕ್ಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು ಚಿತ್ರರಂಗದ ಭರವಸೆಯ ನಟನಾಗಿ ಮೊತ್ತಮ್ಮೆ ಗಮನ ಸೆಳೆದಿದ್ದಾರೆ.

ಈ ಹಿಂದೆ ಹಲವು ಕಿರುಚಿತ್ರಗಳು, ಡಾಕ್ಯುಮೆಂಟರಿಗಳು ಮತ್ತು ಆಲ್ಬಮ್ ಸಾಂಗ್‌ಗಳ ಮೂಲಕ ಗಮನ ಸೆಳೆದಿದ್ದ ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಅವರು ‘ಫುಲ್ ಮೀಲ್ಸ್’ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಅವರ ಕೆಲಸಕ್ಕೆ ಚಿತ್ರರಂಗದಿಂದಲೂ, ಪ್ರೇಕ್ಷಕರಿಂದಲೂ ಉತ್ತಮ ಪ್ರಶಂಸೆ ಲಭಿಸಿದ್ದು, ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಸೂರಜ್‌ ಲೋಕ್ರೆ, ವಿಜಯ್‌ ಚಂಡೂರ್‌, ರವಿಶಂಕರ್‌ ಗೌಡ, ರಾಜೇಶ್‌ ನಟರಂಗ, ಸುಜಯ್‌ ಶಾಸ್ತ್ರಿ, ಚಂದ್ರಕಲಾ ಮೋಹನ್‌, ಹೊನ್ನವಳ್ಳಿ ಕೃಷ್ಣ, ರಮೇಶ್‌ ಪಂಡಿತ್‌, ಚೇತನ್‌ ದುರ್ಗ, ನಾಗೇಂದ್ರ ಅರಸ್‌, ಮೂಗು ಸುರೇಶ್‌, ಗಣೇಶ್ ರಾವ್, ಕೋಟೆ ಪ್ರಭಾಕರ್‌ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಗುರುಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ.

Exit mobile version