ಕನ್ನಡ ಚಿತ್ರರಂಗದಲ್ಲಿ ಫ್ಯಾಮಿಲಿ ಪ್ಯಾಕ್, ಸಂಕಷ್ಟಕರ ಗಣಪತಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ಲಿಖಿತ್ ಶೆಟ್ಟಿ, ಈ ಬಾರಿ ನಿರ್ಮಾಪಕ ಹಾಗೂ ನಾಯಕನಾಗಿ ‘ಫುಲ್ ಮೀಲ್ಸ್’ ಚಿತ್ರದೊಂದಿಗೆ ತೆರೆಗೆ ಬರುತ್ತಿದ್ದಾರೆ. ನವೆಂಬರ್ 21ರಂದು ಈ ಮನೋರಂಜನಾ ಭರಿತ ಚಿತ್ರ ತೆರೆಕಾಣಲಿದೆ. ಚಿತ್ರತಂಡದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನಡೆಸಿದೆ. ವಿಶೇಷವೆಂದರೆ, ಪತ್ರಿಕಾಗೋಷ್ಠಿಗೂ ಆಗಮಿಸಿದ ಮಾಧ್ಯಮ ಮಿತ್ರರಿಗೆ ಚಿತ್ರತಂಡವೇ ಕೈಯಾರೆ ಬಾಳೆಎಲೆಯಲ್ಲಿ ‘ಫುಲ್ ಮೀಲ್ಸ್’ ಬಡಿಸಿ ಆತಿಥ್ಯ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಚಿತ್ರವನ್ನು ಎನ್. ವಿನಾಯಕ್ ನಿರ್ದೇಶಿಸಿದ್ದು, ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ನಾಯಕಿಯರಾಗಿ ಅಭಿನಯಿಸಿದ್ದಾರೆ. ಲಿಖಿತ್ ಶೆಟ್ಟಿ ವೆಡ್ಡಿಂಗ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಥೆಯೇ ಫೋಟೋಗ್ರಾಫಿ ಸುತ್ತ ಸುತ್ತುವ ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರವಿದು. ಸಂಗೀತ ನಿರ್ದೇಶಕ ಗುರುಕಿರಣ್, ಛಾಯಾಗ್ರಾಹಕ ಮನೋಹರ್ ಜೋಶಿ, ಸಂಕಲನ ದೀಪು ಎಸ್. ಕುಮಾರ್ ಸೇರಿದಂತೆ ತಾಂತ್ರಿಕ ತಂಡವೂ ಬಲಿಷ್ಠವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ-ನಾಯಕ ಲಿಖಿತ್ ಶೆಟ್ಟಿ, ಎನ್. ವಿನಾಯಕ್ ಕಥೆ ಹೇಳಿದಾಗ ಮೊದಲು ಗುರುಕಿರಣ್ ಸರ್ ಬಳಿ ಹೋಗಿ ಕೇಳಿದೆ. ಅವರು ಒಪ್ಪಿದರೆ ನನಗೆ ಒಪ್ಪಿಗೆ ಆದ ಹಾಗೆ. ಗುರುಕಿರಣ್ ಸರ್ ಕಥೆ ಮೆಚ್ಚಿ ಸಂಗೀತಕ್ಕೂ ಒಪ್ಪಿಕೊಂಡರು. ನಾನೇ ನಿರ್ಮಾಣಕ್ಕೆ ಮುಂದಾದೆ. ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸಿದ್ದಾರೆ. ವಿಜಯ್ ಚಂಡೂರ್, ಸೂರಜ್ ಲೋಕ್ರೆ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ರವಿಶಂಕರ್ ಗೌಡ, ಕೋಟೆ ಪ್ರಭಾಕರ್ ಸೇರಿದಂತೆ ಅನೇಕ ಕಲಾವಿದರು ತಾರಾಬಳಗದಲ್ಲಿದ್ದಾರೆ. ನಾನು ಫೋಟೋಗ್ರಾಫರ್ ಪಾತ್ರದಲ್ಲಿರುವುದರಿಂದ ಫೋಟೋಗ್ರಾಫರ್‌ಗಳು ಮತ್ತು ಮೇಕಪ್ ಆರ್ಟಿಸ್ಟ್‌ಗಳಿಗೆ ವಿಶೇಷ ಪ್ರದರ್ಶನ ಆಯೋಜಿಸುತ್ತಿದ್ದೇವೆ. ಬಿಡುಗಡೆಯ ಹಿಂದಿನ ದಿನ ಪ್ರೇಕ್ಷಕರಿಗೆ ವಿಶೇಷ ಜಾಹೀರಾತು ಹಾಕುತ್ತೇವೆ .ಅದರಲ್ಲಿ ಒಂದು ಸರ್‌ಪ್ರೈಸ್ ಇರುತ್ತದೆ. ನವೆಂಬರ್ 21ರಂದು ನಮ್ಮ ಚಿತ್ರ ನೋಡಿ, ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ.
ನಿರ್ದೇಶಕ ಎನ್. ವಿನಾಯಕ್ ಮಾತನಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಲಿಖಿತ್ ಅವರ ಪರಿಚಯವಾಯಿತು. ಕಥೆ ಕೇಳಿ ಮೆಚ್ಚಿದೆ. ಅವರೇ ನಿರ್ಮಾಣ ಮಾಡುವುದಾಗಿ ಹೇಳಿದರು. ಇದು ರೊಮ್ಯಾಂಟಿಕ್ ಕಾಮಿಡಿ, ಫೋಟೋಗ್ರಾಫರ್ ಸುತ್ತ ಸಾಗುವ ಕಥೆ. ನಾನು ಅನೇಕ ಕಿರುಚಿತ್ರಗಳನ್ನು ಮಾಡಿದ್ದೇನೆ, ಆದರೆ ಇದು ನನ್ನ ಮೊದಲ ಸಿನಿಮಾ. ಕಥೆ-ಚಿತ್ರಕಥೆ ನನ್ನದು, ಸಂಭಾಷಣೆ ಹರೀಶ್ ಅವರದು. ಟ್ರೇಲರ್ ಬಿಡುಗಡೆಯಾದಾಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಶೇರ್ ಮಾಡಿ ಸಹಾಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ತಂಡದ ಸಹಕಾರದಿಂದ ಒಳ್ಳೆಯ ಸಿನಿಮಾ ಬರುತ್ತಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಲಿಖಿತ್ ಅವರನ್ನು ಸಹೋದರನಂತೆ ಭಾವಿಸುತ್ತೇನೆ. ಅವರ ನಿರ್ಮಾಣ-ನಟನೆಯ ಈ ಚಿತ್ರ ಖಂಡಿತಾ ಭರ್ಜರಿ ಯಶಸ್ಸು ಕಾಣಲಿದೆ. ನಾನು ಚಿತ್ರ ನೋಡಿದ್ದೇನೆ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳೂ ಇದೆ. ಹಾಡುಗಳು ಸುಮಧುರವಾಗಿವೆ ಎಂದು ಶ್ಲಾಘಿಸಿದರು.
ನಾಯಕಿ ಖುಷಿ ರವಿ ಮಾತನಾಡಿ, ‘ದಿಯಾ’ ಚಿತ್ರದ ಪಾತ್ರಕ್ಕೂ ಇದಕ್ಕೂ ವ್ಯತ್ಯಾಸವಿದೆ. ನನ್ನ ಪಾತ್ರದ ಹೆಸರು ಪೂಜಾ ಎಂದರು. ತೇಜಸ್ವಿನಿ ಶರ್ಮ, ನನ್ನ ಪಾತ್ರವೂ ಚೆನ್ನಾಗಿದೆ. ‘ಫುಲ್ ಮೀಲ್ಸ್’ ತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷಕರ ಎಂದರು. ನಟರಾದ ಸೂರಜ್ ಲೋಕ್ರೆ ಮತ್ತು ವಿಜಯ್ ಚಂಡೂರ್ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು. ಚಿತ್ರದ ಟ್ರೇಲರ್ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಸಂಪೂರ್ಣ ಮನೋರಂಜನೆ ನೀಡುವ ‘ಫುಲ್ ಮೀಲ್ಸ್’ ನವೆಂಬರ್ 21ರಂದು ತೆರೆಗೆ ಬಂದು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.
