ಸತತ 25 ವರ್ಷಗಳಿಂದ ಚಿತ್ರಪ್ರೇಮಿಗಳನ್ನ ರಂಜಿಸುತ್ತಾ ಬರ್ತಿರೋ ಮಲಯಾಳಂನ ಬಹುಭಾಷಾ ನಟ ಫಹಾದ್ ಫಾಸಿಲ್, ನಿವೃತ್ತಿ ಬಗ್ಗೆ ಶಾಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಊಬರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಇದ್ದುಬಿಡ್ತೀನಿ ಅಂದಿರೋದು ಸದ್ಯ ಎಲ್ಲೆಡೆ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟಕ್ಕೂ ಫಹಾದ್ ಮಾತಿನ ಅರ್ಥವೇನು..? ನೀವೇ ನೋಡಿ.
- ಆ್ಯಕ್ಟಿಂಗ್ ಬಿಟ್ಟು ಊಬರ್ ಡ್ರೈವರ್ ಆಗ್ತಾರಂತೆ ಫಹಾದ್ ಫಾಸಿಲ್
- ಜನ ಫಹಾದ್ ನಟನೆ ತಿರಸ್ಕರಿಸಿದ್ರೆ ಬಾರ್ಸಿಲೋನಾದಲ್ಲಿ ಪ್ಲಾನ್ B
- ಬಹುಭಾಷಾ ಮಲಯಾಳಂ ನಟನ ಸ್ಟೇಟ್‌ಮೆಂಟ್ ಎಲ್ಲೆಡೆ ವೈರಲ್
ಫಹಾದ್ ಫಾಸಿಲ್.. ಮಲಯಾಳಂನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಮಲಯಾಳಂ ಜೊತೆ ಜೊತೆಗೆ ತೆಲುಗು, ತಮಿಳಿನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ನಟ. ಯೆಸ್.. ತನ್ನದೇ ವಿಶೇಷ ನಟನಾ ಗಮ್ಮತ್ತು, ಸ್ಟೈಲು ಮ್ಯಾನರಿಸಂನಿಂದ ಎಲ್ಲರ ಅಚ್ಚುಮೆಚ್ಚಿನ ನಟನಾಗಿ ಮಿಂಚುತ್ತಿದ್ದಾರೆ ಫಹಾದ್. ಅದ್ರಲ್ಲೂ ಪುಷ್ಪ ಸಿನಿಮಾದ ಬನ್ವರ್ ಸಿಂಗ್ ಶೇಖಾವತ್ ರೋಲ್, ರಜನೀಕಾಂತ್‌ರ ವೆಟ್ಟೈಯಾನ್ ಚಿತ್ರದ ಬ್ಯಾಟರಿ ಪಾತ್ರ, ತಮಿಳಿನ ವಿಕ್ರಮ್, ಮಾಮಣ್ಣನ್, ಮಲಯಾಳಂನ ಆವೇಶಂ, ಬೆಂಗಳೂರು ಡೇಸ್ ಸಿನಿಮಾಗಳಿಂದ ಫಹಾದ್ ಬಹುದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡರು.
ಎಕ್ಸ್‌ಪೆರಿಮೆಂಟಲ್ ರೋಲ್‌ಗಳಿಂದ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿರೋ ಫಹಾದ್ ಫಾಸಿಲ್, ಇತ್ತೀಚೆಗೆ ಒಂದು ಸ್ಟೇಟ್‌ಮೆಂಟ್ ನೀಡಿದ್ದಾರೆ. ಅಲ್ಲಿ ತಮ್ಮ ನಟನಾ ನಿವೃತ್ತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು.. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜನ ನನ್ನ ನಟನೆ ತಿರಸ್ಕರಿಸಿದ ಬಳಿಕ ನಾನು ಊಬರ್ ಡ್ರೈವರ್ ವೃತ್ತಿ ಮಾಡಿಕೊಂಡು ಬದುಕು ಸಾಗಿಸಿ ಬಿಡ್ತೀನಿ ಅಂದಿದ್ದಾರೆ. ಅದೂ ಊಬರ್ ಡ್ರೈವರ್ ಆಗಿ ಕೆಲಸ ಮಾಡೋದು ನಮ್ಮ ಇಂಡಿಯಾದಲ್ಲಿ ಅಲ್ಲ, ಸ್ಪೇನ್‌ನಲ್ಲಿರೋ ಬಾರ್ಸಿಲೋನಾದಲ್ಲಿ ಅನ್ನೋದು ಮತ್ತೊಂದು ಇಂಟರೆಸ್ಟಿಂಗ್ ವಿಚಾರ.
ಯೆಸ್.. ಫಹಾದ್ ಯಾಕೆ ಇಂತಹ ಶಾಕಿಂಗ್ ಹೇಳಿಕೆ ನೀಡಿದ್ರು ಅಂತ ಜನ ಮಾತಾಡ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ದೊಡ್ಡ ಮಟ್ಟದ ಚರ್ಚೆ ಆಗ್ತಿದೆ. ಅವರು ಊಬರ್ ಡ್ರೈವರ್ ಆಗೋದು ಇರಲಿ. ಅವ್ರನ್ನ ಜನ ತಿರಸ್ಕರಿಸುತ್ತಾರೆ ಅಂತ ನಿಮಗೆ ಅನಿಸುತ್ತದೆಯೇ..? ಎಂಥಾ ಚೆಂದದ ನಟ ಅವರು. ಯಾವುದೇ ಪಾತ್ರ ನೀಡಿದ್ರೂ ಸಹ ನೀರು ಕುಡಿದಷ್ಟೇ ಸಲೀಸಾಗಿ, ಲೀಲಾಜಾಲವಾಗಿ ಅದಕ್ಕೆ ಜೀವ ತುಂಬುತ್ತಾರೆ ಫಹಾದ್. ಅವ್ರನ್ನ ಜನ ಪೀಕ್‌ಗೆ ಕೊಂಡೊಯ್ದಿದ್ದಾರೆ. ಹೀಗಿರುವಾಗ ನಿವೃತ್ತಿ ಬಹಳ ದೂರದ ಮಾತು ಅನ್ನೋದು ಫ್ಯಾನ್ಸ್ ಅಭಿಪ್ರಾಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
