‘ಎಂಪುರಾನ್’ ಚಿತ್ರದ ನಿರ್ಮಾಪಕರಿಗೆ ಇಡಿ ಶಾಕ್: ಕೇರಳ, ತಮಿಳುನಾಡಿನ ಕಚೇರಿಗಳ ಮೇಲೆ ದಾಳಿ

Untitled design 2025 04 04t131117.879

ಮಲಯಾಳಂ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಎಂಪುರಾನ್’ ಇದೀಗ ಕೇವಲ ಕಲೆಕ್ಷನ್‌ಗಳಲ್ಲಷ್ಟೇ ಅಲ್ಲ, ರಾಜಕೀಯ ಮತ್ತು ಕಾನೂನು ಚರ್ಚೆಗಳಲ್ಲೂ ಗ್ರಾಸವಾಗಿದೆ. ಈ ಚಿತ್ರದ ನಿರ್ಮಾಪಕರಾದ ಗೋಕುಲಂ ಗೋಪಾಲನ್ ಅವರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಇದರಿಂದ ಮಲಯಾಳಂ ಚಿತ್ರರಂಗಕ್ಕೆ ಆಘಾತ ಉಂಟುಮಾಡಿದೆ.

ಮಾಹಿತಿಯ ಪ್ರಕಾರ, ಇಡಿ ಅಧಿಕಾರಿಗಳು ಕೇರಳದ ಕೋಝಿಕ್ಕೋಡ್, ಕೊಚ್ಚಿ ಹಾಗೂ ತಮಿಳುನಾಡಿನ ಚೆನ್ನೈಯಲ್ಲಿರುವ ಗೋಕುಲಂ ಸಂಸ್ಥೆಯ ಕಚೇರಿಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿ ಉಪನಿರ್ದೇಶಕ ರಾಜೇಶ್ ನಾಯರ್ ನೇತೃತ್ವದಲ್ಲಿ ನಡೆಯುತ್ತಿದೆ. ದಾಖಲೆಗಳ ಪರಿಶೀಲನೆ, ಹಣಕಾಸು ವ್ಯವಹಾರಗಳ ತನಿಖೆ ಹಾಗೂ ಹಿಂದಿನ ಹಣ ಸಾಗಣೆ ಕುರಿತಾದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

‘ಎಂಪುರಾನ್’ ಚಿತ್ರ, ಖ್ಯಾತ ನಟ ಮೋಹನ್ ಲಾಲ್ ಮತ್ತು ನಿರ್ದೇಶಕ-ನಟ ಪೃಥ್ವಿರಾಜ್ ಸುಕುಮಾರನ್ ಅವರ ಸಹಯೋಗದಲ್ಲಿ ನಿರ್ಮಿತವಾಗಿದೆ. ಈ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿ  ₹100 ಕೋಟಿ ಗಳಿಸಿ, ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿತು. ಆದರೆ, ಚಿತ್ರದಲ್ಲಿ ತೋರಿಸಲಾದ ಗೋಧ್ರಾ ಹಿಂಸಾಚಾರದ ದೃಶ್ಯಗಳು ಮತ್ತು ಗುಜರಾತ್ ಗಲಭೆಗಳ ಚಿತ್ರಣವು ಸಂಘ ಪರಿವಾರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು.

ಸಂಘಟನೆಗಳು, ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಿ ತೋರಿಸುತ್ತದೆ ಎಂದು ಆರೋಪಿಸಿ ತೀವ್ರ ವಿರೋಧ ವ್ಯಕ್ತಪಡಿಸಿದವು. ಈ ಒತ್ತಡದ ನಡುವೆಯೇ ನಿರ್ಮಾಪಕರು ಮಧ್ಯಪ್ರವೇಶಿಸಿ, ಸುಮಾರು 24 ದೃಶ್ಯಗಳಿಗೆ ಬ್ರೇಕ್‌ ಹಾಕಲಾಗಿದೆ. ಹಾಗೆಯೇ ಚಿತ್ರವನ್ನು ಪುನಃ ಸೆನ್ಸಾರ್ ಮಾಡಿ ಬಿಡುಗಡೆ ಮಾಡಲಾಗಿದೆ.

ನಿರ್ಮಾಪಕರ ಸ್ಪಷ್ಟನೆ

ಈ ಕುರಿತು ಗೋಕುಲಂ ಗೋಪಾಲನ್ ಪ್ರತಿಕ್ರಿಯೆ ನೀಡುತ್ತಾ, “ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ, ನಾವು ತಿದ್ದುಪಡಿ ಮಾಡುತ್ತೇವೆ. ನಾವು ಯಾರಿಗೂ ತೊಂದರೆ ನೀಡಲು ಬಯಸುವುದಿಲ್ಲ. ಪ್ರೇಕ್ಷಕರು ತಮ್ಮ ನಟನ ಸಿನಿಮಾ ನೋಡಬಹುದೆಂದು ಈ ಚಿತ್ರವನ್ನು ಕೈಗೊಂಡೆ,” ಎಂದಿದ್ದಾರೆ.

“ಈ ಚಿತ್ರ ನನ್ನ ಪಾಲಿಗೆ ಕೊನೆಯ ಸಂಯೋಜನೆ. ಇದು ಯಾವ ರಾಜಕೀಯ ಪಕ್ಷಕ್ಕೆ ತಲೆ ಬಾಗುವ ಚಿತ್ರವಲ್ಲ. ನಾವೆಲ್ಲರೂ ಶಾಂತಿಪೂರ್ಣವಾಗಿ ಸಿನಿಮಾ ಮಾಡುವವರಾಗಿದ್ದೇವೆ. ಆದರೆ ಪ್ರೇಕ್ಷಕರ ಮನಸ್ಥಿತಿಗೆ ತಕ್ಕಂತೆ ಕೆಲವು ದೃಶ್ಯಗಳು ನೋವನ್ನು ಉಂಟುಮಾಡಬಹುದು,” ಎಂದಿದ್ದಾರೆ.

‘ಎಂಪುರಾನ್’ ಚಿತ್ರವನ್ನು ಸಣ್ಣ ಪ್ರೇಕ್ಷಣೀಯ ಕಥೆ ಎನ್ನಲು ಸಾಧ್ಯವಿಲ್ಲ. ಇದು ರಾಜಕೀಯ, ಸಮಾಜ ಮತ್ತು ಧರ್ಮ ಕುರಿತ  ವಿಚಾರಗಳನ್ನು ಸ್ಪರ್ಶಿಸುವ ಮೂಲಕ ಭಿನ್ನಾಭಿಪ್ರಾಯಗಳನ್ನು ಹುಟ್ಟಿಸಿದೆ.

ಕೇರಳದಲ್ಲಿ ಈ ಚಿತ್ರದ ಹಿನ್ನೆಲೆ ಕುರಿತು ರಾಜಕೀಯ, ಹೊಣೆಗಾರಿಕೆ ಮತ್ತು ಸ್ವಾತಂತ್ರ್ಯ ವಿಷಯಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಇಡಿ ದಾಳಿ ಇದಕ್ಕೆ ಇನ್ನಷ್ಟು ತೀವ್ರತೆ ನೀಡಿದ್ದು, ಚಿತ್ರರಂಗದಲ್ಲಿ ಹಾಗೂ ಜನಸಾಮಾನ್ಯರ ನಡುವೆಯೂ ತೀವ್ರ ಕುತೂಹಲವನ್ನು ಹುಟ್ಟಿಸಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version