ಸು ಫ್ರಮ್ ಸೋ ಬಿಗ್ಗೆಸ್ಟ್ ಹಿಟ್ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸಿನಿಮಾ ಅದೇ ರೀತಿ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಪ್ರೇಕ್ಷಕರ ಜೊತೆ ವಿಮರ್ಶಕರು ಕೂಡ ಪ್ರಶಂಸೆಗಳ ಸುರಿಮಳೆ ಸುರಿಸುತ್ತಿರೋ ಏಳುಮಲೆ, ತರುಣ್ ಸುಧೀರ್ ಬತ್ತಳಿಕೆಯ ಮತ್ತೊಂದು ಸೂಪರ್ ಹಿಟ್ ಎಂಟರ್‌ಟೈನರ್. ಈ ಕುರಿತ ಸ್ಪೆಷಲ್ ಸ್ಟೋರಿ ಇಲ್ಲಿದೆ.
- ಏಳುಮಲೆ ಬ್ಲಾಕ್ ಬಸ್ಟರ್.. ಎಲ್ಲೆಡೆ ತರುಣ್ ಟೀಂ ಸೆನ್ಸೇಷನ್
- ನಿರ್ಮಾಪಕ ತರುಣ್ ಪಾಲಿಗೆ ಸೋನಲ್ ಅದೃಷ್ಟಲಕ್ಷ್ಮೀ ಗುರು
- ಪ್ರೀತಿ, ಕ್ರೌರ್ಯದ ರೌದ್ರನರ್ತನ.. ರಾಣಾ-ಪ್ರಿಯಾಂಕಾ ಮ್ಯಾಜಿಕ್
- ನಿರ್ದೇಶನದ ಸಾಮರ್ಥ್ಯ ತೋರಿದ ರಿಯಲ್ ಥ್ರಿಲ್ಲರ್ ಪ್ರೇಮಕಥೆ
ಕಥೆಯಲ್ಲಿ ಗಟ್ಟಿತನ ಇದ್ದು, ಆ ಪಾತ್ರಗಳಲ್ಲಿ ಕಲಾವಿದರು ಜೀವಿಸಿ, ವ್ಹಾವ್ ಫೀಲ್ ಕೊಡುವ ಮೇಕಿಂಗ್‌ನಿಂದ ಒಂದು ಸಿನಿಮಾ ಕಟ್ಟಿದ್ರೆ ಜನ ಯಾಕೆ ಥಿಯೇಟರ್‌ಗೆ ಬರಲ್ಲ ನೀವೇ ಹೇಳಿ. ಸು ಫ್ರಮ್ ಸೋ, ಇತ್ತೀಚೆಗೆ ನಾಲ್ಕೂವರೆ ಐದು ಕೋಟಿಯಲ್ಲಿ ತಯಾರಾದ ಈ ಸಿನಿಮಾ ವಿಶ್ವದಾದ್ಯಂತ 125 ಕೋಟಿ ಬ್ಯುಸಿನೆಸ್ ಮಾಡಿದ್ದು ಗೊತ್ತೇಯಿದೆ. ಇದೀಗ ಆ ಬಿಗ್ಗೆಸ್ಟ್ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಸಿನಿಮಾ ಅದೇ ರೀತಿ ಸದ್ದು ಮಾಡ್ತಿದೆ. ಅದೇ ಏಳುಮಲೆ.
ಹೌದು, ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಸಹೋದರ ರಾಣಾ 2ನೇ ಚಿತ್ರ ಏಳುಮಲೆ. ಪ್ರತಿಭೆಗಳನ್ನ ಹೆಕ್ಕಿ ತೆಗೆಯುವ ತರುಣ್ ಸುಧೀರ್, ಈ ಸಿನಿಮಾದ ಮೂಲಕ ಸಾಕಷ್ಟು ಮಂದಿಗೆ ಲೈಫ್ ಕೊಟ್ಟಿದ್ದಾರೆ. ಮಹಾನಟಿ ಫೇಮ್ ಪ್ರಿಯಾಂಕಾಗೆ ನಾಯಕನಟಿ ಬಡ್ತಿ ನೀಡಿದ್ದೇ ತರುಣ್. ಅಲ್ಲದೆ, ಎಲೆಮರಿ ಕಾಯಿಯಂತೆ ಗೀತರಚೆನಕಾರನಾಗಿದ್ದ ಹಾಗೂ ಒಳ್ಳೆಯ ಡೈರೆಕ್ಟರ್ ಅನಿಸಿಕೊಳ್ಳೋಕೆ ಪರಿತಪಿಸುತ್ತಿದ್ದ ಪುನೀತ್ ರಂಗಸ್ವಾಮಿಯನ್ನ ಎಲ್ಲರೂ ಇಂದು ಹೊಗಳುವಂತೆ ಮಾಡಿದ್ದು ಕೂಡ ತರುಣ್ ಅವರೇ.
ಏಳುಮಲೆ ತಮಿಳುನಾಡಿನಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ. ಇದನ್ನ ಕರ್ನಾಟಕ ಹಾಗೂ ತಮಿಳುನಾಡು ಬಾಡರ್ರ್‌ನಲ್ಲಿ ಕಟ್ಟಿಕೊಟ್ಟು, ಪ್ರೇಕ್ಷಕರು ಸೀಟ್ ಎಡ್ಜ್‌ನಲ್ಲಿ ಕೂತು ಚಿತ್ರ ವೀಕ್ಷಿಸುವಂತೆ ಮಾಡಿದ್ದು ಡೈರೆಕ್ಟರ್ ಪುನೀತ್. ಇಂದು ಪ್ರತಿಯೊಬ್ಬರೂ ಈ ಚಿತ್ರದ ನಿರ್ದೇಶನ ಸಾಮರ್ಥ್ಯದ ಬಗ್ಗೆ ಮಾತನಾಡ್ತಿದ್ದಾರೆ. ಪ್ರೀತಿ, ಕ್ರೌರ್ಯದ ರೌದ್ರನರ್ತನದ ಈ ಸಿನಿಮಾ ಥ್ರಿಲ್ಲರ್ ಬಯಸೋರಿಗೆ ಸಿಕ್ಕಾಪಟ್ಟೆ ಮಜಾ ಕೊಡಲಿದೆ. ಸಮಾಜದಲ್ಲಿರೋ ಗುಡ್, ಬ್ಯಾಡ್ ಹಾಗೂ ಅಗ್ಲಿಯ ಕನ್ನಡಿಯಂತಿದೆ ಏಳುಮಲೆ ಸಿನಿಮಾ ಅಂತಿದ್ದಾರೆ.
ನೋಡುಗರನ್ನ ಇನ್ನಿಲ್ಲದೆ ಕಾಡುವ ಪ್ರೇಮಕಥೆ ಇಲ್ಲಿದ್ದು, ಸಹಜ ಹಾಗೂ ಸ್ವಾಭಾವಿಕವಾಗಿ ಇದನ್ನು ಕಟ್ಟಿಕೊಡಲಾಗಿದೆ. ರಾಣಾ ನಟನೆಯಲ್ಲಿ ಪಕ್ವತೆ ಎದ್ದು ಕಾಣ್ತಿದ್ದು, ಪ್ರಿಯಾಂಕಾ ಕೂಡ ಭವಿಷ್ಯದ ಭರವಸೆಯ ಸ್ಟಾರ್ ನಟಿ ಅಂತಿದ್ದಾರೆ ಜನ. ಚಿತ್ರಪ್ರೇಮಿಗಳು ಎಂದೂ ಮರೆಯಲಾಗದ ಪ್ರೇಮಕಥೆಯೊಂದನ್ನ ಕಣ್ತುಂಬಿಕೊಳ್ಳುವ ಸಮಯವಿದು. ಹಾಗಾಗಿ ಕಲಾವಿದರು, ತಂತ್ರಜ್ಞರ ಹಾನೆಸ್ಟ್ ಎಫರ್ಟ್‌ಗಳು ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣ್ತಿದೆ. ನಟ ಕಿಶೋರ್ ಹಾಗೂ ತೆಲುಗು ನಟ ಜಗಪತಿ ಬಾಬು ಕೂಡ ಚಿತ್ರದಲ್ಲಿ ಗಮನ ಸೆಳೆಯಲಿದ್ದಾರೆ.
ನಿರ್ದೇಶನದಲ್ಲೂ ತರುಣ್ ಸೂಪರ್. ನಿರ್ಮಾಣದ ವಿಚಾರದಲ್ಲಿ ಅವರ ಲೆಕ್ಕಾಚಾರ ಎಂದೂ ತಪ್ಪಿಲ್ಲ. ಕ್ರಿಯೇಟಿವಿಟಿ ಅಂದಾಗ ಅದರಲ್ಲಿ ತರುಣ್ ಮಾಸ್ಟರ್‌ಮೈಂಡ್. ತಮ್ಮ ನಿರ್ದೇಶನದ ರಾಬರ್ಟ್, ಕಾಟೇರ ಚಿತ್ರಗಳು ಹಿಟ್ ಬಳಿಕ ಇದೀಗ ತಮ್ಮ ನಿರ್ಮಾಣದ ಏಳುಮಲೆ ಕೂಡ ಸೂಪರ್ ಹಿಟ್ ಆಗಿದೆ. ಅಂದಹಾಗೆ ಇತ್ತೀಚೆಗೆ ತರುಣ್ ಸುಧೀರ್ ಮದ್ವೆ ಆಗಿದ್ರು. ಸೋನಲ್ ಅವರ ಬಾಳಲ್ಲಿ ಬಂದಮೇಲೆ ಮತ್ತಷ್ಟು ಅದೃಷ್ಠ ಒಲಿದು ಬಂದಿದೆ. ತರುಣ್ ಪಾಲಿಗೆ ಸೋನಲ್ ಅದೃಷ್ಟಲಕ್ಷ್ಮೀ ಅಂತ ಎಲ್ಲರೂ ಹೊಗಳುತ್ತಿದ್ದಾರೆ.