ನಟ ಮಮ್ಮುಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆಗಳ ಮೇಲೆ ಇಡಿ ದಾಳಿ

Untitled design 2025 10 08t114700.975

ಕೇರಳ ರಾಜ್ಯದಾದ್ಯಂತ ಕಳೆದ ಕೆಲ ವಾರಗಳಿಂದ ವಿದೇಶಿ ಐಶಾರಾಮಿ ಕಾರುಗಳ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮಮ್ಮುಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಇತರರ ಮನೆಗಳ ಮೇಲೆ ಕಸ್ಟಮ್ಸ್ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದೇಶಿ ಕಾರುಗಳನ್ನು ಕಳ್ಳದಾರಿಯಿಂದ ಖರೀದಿಸಿ, ತೆರಿಗೆ ವಂಚನೆ ಮಾಡಿ, ನಕಲಿ ದಾಖಲೆಗಳೊಂದಿಗೆ ನೊಂದಣಿ ಮಾಡಿದ ಶಂಕೆಯ ಮೇಲೆ ಈ ಕಾರ್ಯಾಚರಣೆ ನಡೆದಿದೆ.

ಕಸ್ಟಮ್ಸ್ ಅಧಿಕಾರಿಗಳು ಕೇರಳದ ವಿವಿಧ ನಗರಗಳಲ್ಲಿ ಸಿನಿಮಾ ತಾರೆಯರ ಮತ್ತು ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್‌ಗೆ ಸೇರಿದ ಒಂದು ಐಶಾರಾಮಿ ಕಾರನ್ನು ಜಪ್ತಿ ಮಾಡಲಾಗಿತ್ತು. ದುಲ್ಕರ್‌ಗೆ ಸೇರಿದ ಸುಮಾರು 40ಕ್ಕೂ ಹೆಚ್ಚು ವಿದೇಶಿ ಬ್ರಾಂಡ್‌ನ ಕಾರುಗಳ ಸಂಗ್ರಹ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೇ ರೀತಿ ಪೃಥ್ವಿರಾಜ್ ಸುಕುಮಾರನ್‌ಗೆ ಸೇರಿದ ವಾಹನವನ್ನೂ ಜಪ್ತಿ ಮಾಡಲಾಗಿತ್ತು. ಈಗ ಇಡಿ ಅಧಿಕಾರಿಗಳು ಮಮ್ಮುಟಿ, ದುಲ್ಕರ್, ಪೃಥ್ವಿರಾಜ್ ಮತ್ತು ನಟ ಅಮಿತ್ ಚಕ್ಕಲಕಲ್ ಅವರ ನಿವಾಸಗಳು ಸೇರಿದಂತೆ ಒಟ್ಟು 17 ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ತನಿಖೆಯ ಮಾಹಿತಿಯ ಪ್ರಕಾರ, ಭೂತಾನ್ ಸೇನೆಯಿಂದ ಕಡಿಮೆ ದರದಲ್ಲಿ ಐಶಾರಾಮಿ ಕಾರುಗಳನ್ನು ಖರೀದಿಸಿ, ಅವನ್ನು ಅಕ್ರಮವಾಗಿ ಭಾರತಕ್ಕೆ ತಂದು, ನಕಲಿ ಹೆಸರುಗಳಲ್ಲಿ ನೊಂದಣಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕೇರಳದಲ್ಲಿ ಇಂತಹ ಕಾರುಗಳ ಸಂಖ್ಯೆ ಹೆಚ್ಚಿರುವುದರಿಂದ ಕಸ್ಟಮ್ಸ್ ಅಧಿಕಾರಿಗಳು ಈಗಾಗಲೇ ಹಲವು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಮಮ್ಮುಟಿ ಅವರ ಚೆನ್ನೈನ ಕಚೇರಿ, ದುಲ್ಕರ್‌ನ ಕಚೇರಿ ಮತ್ತು ನಿವಾಸ, ಪೃಥ್ವಿರಾಜ್‌ನ ಮನೆ ಸೇರಿದಂತೆ ಈ ದಾಳಿಗಳು ವ್ಯಾಪಕವಾಗಿ ನಡೆದಿವೆ.

Exit mobile version