ತೇಜ್ v/s ಪ್ರದೀಪ್.. ಯಾರು ಒರಿಜಿನಲ್ ‘ಡ್ಯೂಡ್’..?

ಕೋರ್ಟ್‌‌ನಲ್ಲಿ ಕನ್ನಡಿಗರ ಪರ ತೀರ್ಪು.. ಡ್ಯೂಡ್ ಕನ್ನಡಿಗ

11 (35)

ಒಂದು ಟೈಟಲ್‌ನಲ್ಲಿ ರಿಲೀಸ್ ಆದ ಸಿನಿಮಾ, ಕೆಲವು ವರ್ಷಗಳ ನಂತ್ರ ಮತ್ತೆ ಅದೇ ಟೈಟಲ್ ಜೊತೆ ಸಿನಿಮಾ ಆಗೋದ್ ನೋಡಿರ್ತೀರಿ. ಆದ್ರೀಗ ಡ್ಯೂಡ್ ಟೈಟಲ್‌‌ನಲ್ಲಿ ಎರಡು ಚಿತ್ರರಂಗದ ಕಲಾವಿದರು ಸಿನಿಮಾ ಮಾಡಿದ್ದು, ಒರಿಜಿನಲ್ ಡ್ಯೂಡ್ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಪ್ರಕರಣ ಕೋರ್ಟ್‌ ಕಟಕಟೆವರೆಗೂ ಹೋಗಿ ನಿಂತಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಟೈಟಲ್ ಗಾಗಿ ಕೆಲವೊಮ್ಮೆ ಸ್ಟಾರ್ ಗಳ ನಡುವೆ ಜಟಾಪಟಿ ನಡೆದಿರುವ ಹಲವು ಘಟನೆಗಳಿವೆ. ಆದ್ರೀಗ ಇಲ್ಲೊಂದು ಇಂಟೆರೆಸ್ಟಿಂಗ್ ಸಂದರ್ಭಕ್ಕೆ ಕಾಲಿವುಡ್ ಹಾಗೂ ಕನ್ನಡದ ಸ್ಟಾರ್ ನಡುವೆ ಪೈಪೋಟಿ ಶುರುವಾಗಿದೆ. ಅದಕ್ಕೆ ಕಾರಣ ಡ್ಯೂಡ್. ಅಂದಹಾಗೆ ಡ್ಯೂಡ್ ಅನ್ನೋ ಟೈಟಲ್‌ನಲ್ಲಿ ಎರಡು ಸಿನಿಮಾಗಳು ತಯಾರಾಗ್ತಿವೆ. ಕನ್ನಡದಲ್ಲಿ ತೇಜ್ ನಟಿಸಿ, ನಿರ್ದೇಶನ ಮಾಡಿದ್ರೆ ತಮಿಳಿನಲ್ಲಿ ಡ್ರ್ಯಾಗನ್ ಹೀರೋ ಪ್ರದೀಪ್ ರಂಗನಾಥ್ ನಟಿಸಿರೋ ಸಿನಿಮಾ ಇದಾಗಿದೆ.

ತೇಜ್ ನಟಿಸಿ‌ ನಿರ್ದೇಶನ ಮಾಡಿರೋ ಡ್ಯೂಡ್ ಸಿನಿಮಾದ ಟೈಟಲ್ ಹಾಗೆ ಕಾಲಿವುಡ್ ನಲ್ಲಿ ತಯಾರಾಗ್ತಿರೋ ಡ್ಯೂಡ್ ಸಿನಿಮಾ ಸದ್ಯ ಕುತೂಹಲ ಹುಟ್ಟಿಸಿವೆ. ಹೀಗಿರುವಾಗ ತೇಜ್ ಈಗಾಗಲೇ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ರು. ಆ ಸಿನಿಮಾದ ಟೈಟಲ್ ಬದಲಿಸುವಂತೆ ಮನವಿ ಸಹ ಮಾಡಿದ್ರು. ಕನ್ನಡದ  ಡ್ಯೂಡ್ ಚಿತ್ರದಲ್ಲಿ 11 ನಾಯಕಿಯರು ಇರಲಿದ್ದು, ಇದೊಂದು ಫುಟ್ ಬಾಲ್ ಪ್ಲೇಯರ್ ಕಥೆ ಅಂತ ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ ತೇಜ್‌.

ಅತ್ತ 150 ಕೋಟಿ ಗಳಿಸಿದ ಬ್ಲಾಕ್ ಬಸ್ಟರ್ ಹಿಟ್ ಡ್ರ್ಯಾಗನ್ ಸಿನಿಮಾ ಬಳಿಕ ಪ್ರದೀಪ್ ರಂಗನಾಥನ್‌ಗೆ ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘‌ಡ್ರ್ಯಾಗನ್’ ಆಯ್ತು ಈಗ ‘ಡ್ಯೂಡ್’ ಸಿನಿಮಾ ಕಥೆ ಹೇಳಲು ಶುರು ಮಾಡಿದ್ದಾರೆ. ಕಾಲಿವುಡ್ ಡ್ಯೂಡ್ ಸಿನಿಮಾ ಅಕ್ಟೋಬರ್ ನಲ್ಲಿ ರಿಲೀಸ್ ಆಗ್ತಿದೆ. ಇಬ್ಬರೂ ನಾಯಕರ ಎರಡು ಭಾಷೆ ಸಿನಿಮಾ ಒಂದೇ ಟೈಟಲ್ ನಲ್ಲಿ ಬರ್ತಿದೆ. ಮತ್ತೊಂದು ಅಚ್ಚರಿ ಅಂದ್ರೆ ಈ ಎರಡೂ ಸಿನಿಮಾಗಳು ಅಕ್ಟೋಬರ್ ತಿಂಗಳೇ ಬಿಡುಗಡೆ ಆಗ್ತಿವೆ. ಒಟ್ಟಿನಲ್ಲಿ ಇಬ್ಬರೂ ಡ್ಯೂಡ್ ಮೂಲಕ‌ ಕಮಾಲ್ ಮಾಡೋಕೆ ರೆಡಿಯಾಗಿದ್ದು, ಒರಿಜಿನಲ್ ಡ್ಯೂಡ್ ಯಾರು ಅನ್ನೋದು ಫ್ಯಾನ್ಸ್ ಗೆ ಕನ್ಫ್ಯೂಸ್ ಆಗಿದೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಡ್ಯೂಡ್ ಹೆಸರಿನ ಶೀರ್ಷಿಕೆ ನೋಂದಣಿ ಆದಂತಹ ವಿಚಾರ ತಿಳಿದ ತಕ್ಷಣ,ನಟ ನಿರ್ದೇಶಕ ತೇಜ್ ಆ ವಿಚಾರಕ್ಕಾಗಿ ಗಟ್ಟಿ ದ್ವನಿಯನ್ನ ಎತ್ತಿ, ದೊಡ್ಮನೆ ರಾಘಣ್ಣನ ಸಹಕಾರ ಹಾಗೂ ಫಿಲ್ಮ್ ಚೇಂಬರ್ ತಮ್ಮ ಜೊತೆ ನಿಂತಿದ್ದಕ್ಕಾಗಿ ತಾವು ಗೆದ್ದಿದ್ದೇವೆ ಎಂದಿದ್ದರು. ನಾನು ಶಂಕರ್ ನಾಗ್ ಸರ್ ಜೊತೆ ಕೆಲಸ ಮಾಡಿದ್ದೇನೆ, ಅವರ ಜೊತೆ ನಟಿಸುವಾಗ ನಾನು ತುಂಬಾ ಚಿಕ್ಕವನು, ಆಗಿನಿಂದಲೇ ನಾನು ಇಂಡಸ್ಟ್ರಿ ನೋಡಿದ್ದೇನೆ. ಅಣ್ಣಾವ್ರು, ವಿಷ್ಣುವರ್ಧನ್ ಸರ್ ಸೇರಿದಂತೆ ಬಹುತೇಕ ಕನ್ನಡದ ಸೂಪರ್ ಸ್ಟಾರ್‌‌ಗಳ ಸಿನ್ಮಾಗಳು ಆಗಲೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಿದ್ದನ್ನು ನಾವು ಹೆಮ್ಮೆಯಿಂದ ಮಾತಾಡಬೇಕು ಎಂದಿದ್ದಾರೆ.

ಪ್ಯಾನ್ ಇಂಡಿಯಾ ಮೂವಿ ಮೇಕಿಂಗ್ ಮತ್ತು ರಿಲೀಸ್ ಕಾನ್ಸೆಪ್ಟ್ ಬಂದಾಗಿನಿಂದ ಇಂತಹ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಎಷ್ಟೋ ಸಿನಿಮಾ ತಂಡಗಳಿಗೆ ದೊಡ್ಡ ತಲೆ ನೋವಾಗಿದೆ. ಒಂದೇ ಶೀರ್ಷಿಕೆಯನ್ನು ಹಲವು ಭಾಷೆಗಳಲ್ಲಿ ನೋಂದಣಿ ಮಾಡಿರುತ್ತಾರೆ. ಯಾವಾಗ ರಿಲೀಸ್ ಅನ್ನೋ ವಿಷ್ಯ ಬರತ್ತೊ ಆಗ್ಲೇ, ಎಲ್ಲರ ಕಣ್ಣು ಕೆಂಪಾಗಾಗೋದು. ಸದ್ಯ ಡ್ಯೂಡ್ ಟೈಟಲ್ ನ ಮೈತ್ರಿ ಮೂವೀ ಮೇಕರ್ಸ್ ಬದಲಾಯಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋರ್ಟ್‌ನಲ್ಲಿ ಕನ್ನಡಿಗರ ಪರವೇ ತೀರ್ಪು ಕೂಡ ಆಗಿದೆ. ಒಟ್ಟಾರೆ ಕನ್ನಡದ ಡ್ಯೂಡ್ ಗೆ ಜಯ ಸಿಕ್ಕಿದೆ. ಅಲ್ಲಿಗೆ ಅಸಲಿ ಡ್ಯೂಡ್ ನಮ್ಮ ಕನ್ನಡಿಗ ತೇಜ್ ಅನ್ನೋದು ಗ್ಯಾರಂಟಿ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version