ಸೆಪ್ಟೆಂಬರ್ 5ಕ್ಕೆ ನಟ ಶಿವಕಾರ್ತಿಕೇಯನ್-ರುಕ್ಮಿಣಿ ವಸಂತ್‌ ನಟನೆಯ ‘ಮದರಾಸಿ’ ಸಿನಿಮಾ ರಿಲೀಸ್

ಶಿವಕಾರ್ತಿಕೇಯನ್-ರುಕ್ಮಿಣಿ ವಸಂತ್‌ರಿಂದ ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ!

Untitled design 2025 08 29t233412.970

ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ಮತ್ತು ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್ ನಾಯಕ-ನಾಯಕಿಯಾಗಿ ನಟಿಸಿರುವ, ಎ.ಆರ್. ಮುರುಗದಾಸ್ ನಿರ್ದೇಶನದ ‘ಮದರಾಸಿ’ ಚಿತ್ರವು ಇದೇ ಸೆಪ್ಟೆಂಬರ್ 5ರಂದು ಬಹುಭಾಷೆಯಲ್ಲಿ ಜಗಮಗ ತೆರೆಗೆ ಬರಲಿದೆ. ಈ ಚಿತ್ರವು ತಮಿಳು, ತೆಲುಗು, ಕನ್ನಡ, ಮಲಯಾಳಂ, ಮತ್ತು ಹಿಂದಿಯಲ್ಲಿ (ಹಿಂದಿಯಲ್ಲಿ ‘ದಿಲ್ ಮದರಾಸಿ’ ಎಂಬ ಶೀರ್ಷಿಕೆಯೊಂದಿಗೆ) ಬಿಡುಗಡೆಯಾಗಲಿದೆ.

ಬೆಂಗಳೂರಿನ ಕೋರಮಂಗಲದ ನಕ್ಸಸ್ ಮಾಲ್‌ನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮವು ಅಭಿಮಾನಿಗಳ ಸಂಭ್ರಮದಿಂದ ಕೂಡಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಭಾಗವಹಿಸಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಗಳ ಟ್ರೇಲರ್‌ಗಳನ್ನು ಪ್ರದರ್ಶಿಸಿದರು.

ಶಿವಕಾರ್ತಿಕೇಯನ್, ರುಕ್ಮಿಣಿ ವಸಂತ್, ಮತ್ತು ಇತರ ತಾರಾಗಣದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ‘ಅಮರನ್’ ಚಿತ್ರದ ಯಶಸ್ಸಿನ ನಂತರ ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಕಾರ್ತಿಕೇಯನ್ ಅವರು ಅಭಿಮಾನಿಗಳ ಪ್ರೀತಿಯ ಮಳೆಯಲ್ಲಿ ಮಿಂದೆದ್ದರು. ‘ಮದರಾಸಿ’ ಚಿತ್ರದ ಹುಕ್ ಸ್ಟೆಪ್‌ಗೆ ಹೆಜ್ಜೆಹಾಕಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.

ಬೆಂಗಳೂರಿಗೆ ಧನ್ಯವಾದ ತಿಳಿಸಿದ ನಟ ಶಿವಕಾರ್ತಿಕೇಯನ್‌:

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕಾರ್ತಿಕೇಯನ್, “ರುಕ್ಮಿಣಿ ವಸಂತ್ ಅವರಂತಹ ಪ್ರತಿಭಾವಂತ ನಟಿಯನ್ನು ತಮಿಳು ಚಿತ್ರರಂಗಕ್ಕೆ ನೀಡಿದ ಬೆಂಗಳೂರಿಗೆ ಧನ್ಯವಾದಗಳು. ನನ್ನ ಹಿಂದಿನ ಚಿತ್ರಗಳಿಗೆ ನೀವು ನಿರೀಕ್ಷೆಗೂ ಮೀರಿ ಯಶಸ್ಸನ್ನು ಕೊಟ್ಟಿದ್ದೀರಿ. ‘ಮದರಾಸಿ’ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಋಣಿ. ಈ ಚಿತ್ರವು ಕಾಲ್ಪನಿಕ ಕಥೆಯಾಗಿದ್ದು, ನಿರ್ದೇಶಕ ಎ.ಆರ್. ಮುರುಗದಾಸ್ ಅವರೇ ಕಥೆಯನ್ನು ಬರೆದಿದ್ದಾರೆ. ಸೆಪ್ಟೆಂಬರ್ 5ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ದಯವಿಟ್ಟು ಈ ಚಿತ್ರವನ್ನು ಬೆಂಬಲಿಸಿ,” ಎಂದು ನಟ ಶಿವಕಾರ್ತಿಕೇಯನ್ ಮನವಿ ಮಾಡಿದರು.

ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ, “ ‘ಮದರಾಸಿ’ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲವಿರಲಿ,” ಎಂದು ಕೇಳಿಕೊಂಡರು. ರುಕ್ಮಿಣಿ ಅವರ ತಮಿಳು ಚೊಚ್ಚಲ ಚಿತ್ರವಾದ ‘ಏಸ್’ ಬಿಡುಗಡೆಗೆ ಸಿದ್ಧವಾಗಿದ್ದು, ‘ಮದರಾಸಿ’ ಅವರ ಎರಡನೇ ತಮಿಳು ಚಿತ್ರವಾಗಿದೆ.

‘ಮದರಾಸಿ’ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವಕಾರ್ತಿಕೇಯನ್ ಅವರು ಮಾನಸಿಕ ಸಮಸ್ಯೆಯಿಂದ ಬಳಲುವ ಪಾತ್ರದಲ್ಲಿ ಬಹು ಶೇಡ್‌ಗಳನ್ನು ಒಳಗೊಂಡಿರುವ ಕತೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ವಿದ್ಯುತ್ ಜಮ್ಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ, ಛಾಯಾಗ್ರಹಣವನ್ನು ಸುದೀಪ್ ಇಲಾಮನ್ ಮತ್ತು ಸಂಕಲನವನ್ನು ಎ. ಶ್ರೀಕರ್ ಪ್ರಸಾದ್ ನಿರ್ವಹಿಸಿದ್ದಾರೆ. ಶ್ರೀ ಲಕ್ಷ್ಮಿ ಮೂವೀಸ್ ಬ್ಯಾನರ್‌ನಡಿ ಈ ಚಿತ್ರವನ್ನು ಎನ್. ಶ್ರೀಲಕ್ಷ್ಮಿ ಪ್ರಸಾದ್ ನಿರ್ಮಿಸಿದ್ದಾರೆ. ವಿಕೆ ಫಿಲಂಸ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.

ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮ:

ಕಾರ್ಯಕ್ರಮದಲ್ಲಿ ಶಿವಕಾರ್ತಿಕೇಯನ್ ಮತ್ತು ರುಕ್ಮಿಣಿ ವಸಂತ್ ಅವರನ್ನು ಕಂಡು ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ಚಿತ್ರದ ಟ್ರೇಲರ್‌ನಲ್ಲಿ ತೋರಿಸಲಾದ ಆಕ್ಷನ್ ದೃಶ್ಯಗಳು, ಭಾವನಾತ್ಮಕ ಕ್ಷಣಗಳು, ಮತ್ತು ಅನಿರುದ್ಧ್‌ರ ಸಂಗೀತವು ಪ್ರೇಕ್ಷಕರನ್ನು ಆಕರ್ಷಿಸಿತು. ಈ ಚಿತ್ರವು ಎ.ಆರ್. ಮುರುಗದಾಸ್‌ರ ಸಿಗ್ನೇಚರ್ ಶೈಲಿಯ ಆಕ್ಷನ್ ಮತ್ತು ಕಥಾನಕದೊಂದಿಗೆ ವಾಣಿಜ್ಯಿಕ ಮನರಂಜನೆಯನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

Exit mobile version