ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಹಾಗೂ ಸಂಗೀತ ಸಂಶೋಧಕಿಯೂ ಆದ ಡಾ. ಪ್ರಿಯದರ್ಶಿನಿ ಅವರು ಪ್ರಿಸಮ್ ರೆಕಾರ್ಡಿಂಗ್ ಸ್ಟುಡಿಯೋ ಹಾಗೂ ಪ್ರಿಸಂ ಫೌಂಡೇಶನ್-ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌ನ ಸ್ಥಾಪಕಿಯೂ ಹೌದು. ಜತೆಗೆ ಪಿಎಂ ಆಡಿಯೋಸ್ ಅಂಡ್ ಎಂಟರ್‌ಟೈನ್‌ಮೆಂಟ್ಸ್‌ನ ಸಿಇಒ ಕೂಡ ಆಗಿದ್ದಾರೆ.
ಎಂ.ಎಸ್.ಆರ್.ನಗರದಲ್ಲಿದ್ದ ಪ್ರಿಸಂ ರೆಕಾಂರ್ಡಿಂಗ್ ಸಂಸ್ಥೆ 10 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆಗಳೂ ಇರುವಂಥ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋದ ನೂತನ ಕಛೇರಿಯನ್ನು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಪ್ರಾರಂಭಿಸಲಾಗಿದೆ.
ಗುರುವಾರ ಸಂಜೆ ಪ್ರಿಸಂ ರೆಕಾರ್ಡಿಂಗ್ ಸಂಸ್ಥೆಯ ನೂತನ ಸ್ಟುಡಿಯೋದ ಉದ್ಘಾಟನೆಯನ್ನು ಮಾಜಿ ಸಚಿವ, ಶಾಸಕ ಡಾ.ಕೆ. ಅಶ್ವಥ್ ನಾರಾಯಣ್ ಅವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲು ಪ್ರಿಸಂ ಫೌಂಡೇಷನ್ ಆರಂಭವಾಗಿದ್ದು, ಸಂಗೀತ, ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿನಿಧಿಸುತ್ತದೆ. ಸಂಗೀತಕ್ಕೆ ಅಗಾಧ ಶಕ್ತಿಯಿದೆ.
ಅದಕ್ಕೆ ಯಾವುದೇ ಭಾಷೆಯ ಮಿತಿ, ಗಡಿ ಇಲ್ಲ. ಕೆಲವು ಕಾಯಿಲೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ಕೊಡಬಹುದಾಗಿದೆ. ಸಂಗೀತ ಕೇಳಿಸಿಕೊಂಡು ಅರವಳಿಕೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಷ್ಟ, ಸುಖ, ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಂಗೀತವು ಪೂರಕವಾಗಿದೆ. ನಿಮ್ಮ ಹಾಗೆಯೇ ಸಾಧನೆ ಮಾಡುವಂಥ ನೂರಾರು ಪ್ರತಿಭೆಗಳನ್ನು ಹುಟ್ಟುಹಾಕಿ ಎಂದು ಪ್ರಿಯದರ್ಶಿನಿ ಅವರಿಗೆ ಸಲಹೆ ನೀಡಿದರು.
ನಂತರ ಅತಿಥಿಯಾಗಿ ಆಗಮಿಸಿದ್ದ ನಟ ಧರ್ಮ ಮಾತನಾಡಿ ನಮಗೂ ಪ್ರಿಯದರ್ಶಿನಿ ಅವರಿಗೂ ಬಹಳ ವರ್ಷಗಳ ಸ್ನೇಹ. ಅವರು ಸಂಗೀತದಲ್ಲಿ ಒಂದಲ್ಲ ಒಂದು ರೀತಿ ಸಾಧನೆ ಮಾಡಿಕೊಂಡೇ ಬಂದಿದ್ದಾರೆ. ಇದೀಗ ಅಚ್ಚುಕಟ್ಟಾಗಿ ಒಂದು ಸ್ಟುಡಿಯೋ ಮಾಡಿದ್ದಾರೆ. ನನ್ನ ಒಂದು ಚಿತ್ರದ ರೆಕಾರ್ಡಿಂಗ್ ಇದೇ ಸ್ಟುಡಿಯೋದಲ್ಲಿ ನಡೆದಿದೆ ಎಂದು ಹೇಳಿದರು.
ಪ್ರಿಯದರ್ಶಿನಿ ಅವರು ಕಾದಲ್ ಡಾಟ್ ಕಾಮ್ ಎಂಬ ತಮಿಳು ಚಿತ್ರದಲ್ಲಿ ಹಾಡುವ ಮೂಲಕ ಚಿತ್ರರಂಗಕ್ಜೆ ಎಂಟ್ರಿಕೊಟ್ಟರು. ಈವರೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 190ಕ್ಕೂ ಹೆಚ್ಚು ಸಿನಿಮಾಗಳಿಗೆ ಎಸ್.ಪಿ.ಬಿ, ಹರಿಹರನ್, ಸೋನು ನಿಗಮ್, ಮಧು ಬಾಲಕೃಷ್ಣನ್, ರಾಜೇಶ್ ಕೃಷ್ಣನ್ ರಂಥ ಗಾಯಕರ ಜತೆ ದನಿಗೂಡಿಸಿದ್ದಾರೆ.
ಕನ್ನಡ, ಮಲಯಾಳಂ, ಸಂಸ್ಕೃತ, ಗುಜರಾತಿ, ಬ್ರಜ್, ರಾಜಸ್ಥಾನಿ, ಮರಾಠಿ, ಇಂಗ್ಲಿಷ್, ಟಿಬೆಟಿಯನ್, ಒಡಿಯಾ, ಜಪಾನೀಸ್, ಸೇರಿದಂತೆ 18 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಲವಾರು ಖಾಸಗಿ ಆಲ್ಬಮ್, ಜಿಂಗಲ್ಸ್, ಸೇರಿದಂತೆ 800ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ ಡಾಕ್ಟರೇಟ್ ಪದವಿ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಅಲ್ಲದೆ ಗಾನ ಕಲಾಸರಸ್ವತಿ ಪ್ರಶಸ್ತಿ , ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ಸಿಲ್ವರ್ ಸ್ಕ್ರೀನ್ ವುಮನ್ ಅಚೀವರ್ ಅವಾರ್ಡ್, ಪುನೀತ್ ರಾಜ್‌ಕುಮಾರ್ ರಾಜರತ್ನ ಪ್ರಶಸ್ತಿ, ಅಮೇರಿಕಾದ ಅಟ್ಲಾಂಟದಿಂದ ಅಂತರರಾಷ್ಟ್ರೀಯ ಪ್ರಶಸ್ತಿಯೂ ಇವರಿಗೆ ಲಭಿಸಿದೆ.