ದೊಡ್ಡಣ್ಣ ಸಾವು ವದಂತಿ: ಕಿಡಿಗೇಡಿಗಳ ವಿರುದ್ಧ ದೂರು ದಾಖಲು

Untitled design 2026 06 17T104545.883

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿದ್ದ ಕಿಡಿಗೇಡಿಗಳ ವಿರುದ್ಧ ಇದೀಗ ಕಾನೂನಿನ ಕ್ರಮ ಆರಂಭವಾಗಿದೆ. ತಾವಿನ್ನೂ ಆರೋಗ್ಯವಾಗಿಯೇ ಬದುಕಿರುವಾಗಲೇ ತಮ್ಮ ಸಾವಿನ ಬಗ್ಗೆ ಸುಳ್ಳು ಪೋಸ್ಟ್‌ಗಳನ್ನು ಹಂಚಿಕೊಂಡವರ ವಿರುದ್ಧ ಸ್ವತಃ ದೊಡ್ಡಣ್ಣ ಅವರು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ರೀತಿಯ ಪೋಸ್ಟ್ ಪ್ರಕಟಿಸಲಾಗಿತ್ತು. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ದೊಡ್ಡಣ್ಣ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕ ಗಣ್ಯರು ಆತಂಕಕ್ಕೊಳಗಾಗಿದ್ದರು. ಈ ವದಂತಿ ಹರಡುತ್ತಿದ್ದಂತೆಯೇ ಸ್ವತಃ ದೊಡ್ಡಣ್ಣ ಅವರೇ ಮಾಧ್ಯಮಗಳ ಮುಂದೆ ಬಂದು, “ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ನನ್ನ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ” ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ದೊಡ್ಡಣ್ಣ ಅವರ ಬಗ್ಗೆ ಇಂತಹ ಸುಳ್ಳು ಸಾವಿನ ಸುದ್ದಿಗಳು ಇದೇ ಮೊದಲ ಬಾರಿ ಹರಡಿಲ್ಲ. ಕಳೆದ ಕೆಲವು ವರ್ಷಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಇಂತಹ ವದಂತಿಗಳು ಹರಿದಾಡುತ್ತಲೇ ಬಂದಿವೆ. ಪ್ರತಿ ಬಾರಿ ಇದನ್ನು ನಿರ್ಲಕ್ಷಿಸಿದ್ದ ಹಿರಿಯ ನಟ, ಈ ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ, “ನಾನು ಬದುಕಿರುವಾಗಲೇ ಸತ್ತಿದ್ದೇನೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿದ ಚಿತ್ರಗಳು ಹಾಗೂ ಮಾಹಿತಿಯನ್ನು ವೈರಲ್ ಮಾಡಿರುವುದರಿಂದ ನನಗೆ ತೀವ್ರ ಆಘಾತ ಉಂಟಾಗಿದೆ. ನನ್ನ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳೂ ಈ ಸುಳ್ಳು ಸುದ್ದಿಯಿಂದ ಬೇಸರಗೊಂಡಿದ್ದಾರೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ದೊಡ್ಡಣ್ಣ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ವೀವ್ಸ್ ಮತ್ತು ಜನಪ್ರಿಯತೆಗಾಗಿ ಸುಳ್ಳು ಸುದ್ದಿಗಳನ್ನು ಹರಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ದೊಡ್ಡಣ್ಣ ಅವರ ಈ ಕ್ರಮ ಮಹತ್ವದ ಸಂದೇಶವೊಂದನ್ನು ನೀಡಿದೆ.

Exit mobile version