ಸದ್ಯ ಜೈಲಲ್ಲಿರೋ ಡೆವಿಲ್ ದರ್ಶನ್‌ನ ಹಾಡಿ ಹೊಗಳಿದ್ದಾರೆ ಕರಾವಳಿ ಬ್ಯೂಟಿ ರಚನಾ ರೈ. ಡೆವಿಲ್ ಆಲ್ಬಮ್‌ನ ರೊಮ್ಯಾಂಟಿಕ್ ಡುಯೆಟ್ ರಿವೀಲ್ ಆಗಿದ್ದು, ಬಿರು ಬಿಸಿಲಲ್ಲಿ ಚಿತ್ರಿಸಿರೋ ಆ ಅವಿಸ್ಮರಣೀಯ ಕ್ಷಣಗಳನ್ನ ಪದಗಳಲ್ಲಿ ಬಣ್ಣಿಸಿದ್ದಾರೆ. ಇಷ್ಟಕ್ಕೂ ದಚ್ಚು ಬಗ್ಗೆ ಚೆಲುವೆ ರಚ್ಚು ಹೇಳಿದ್ದೇನು ಅನ್ನೋದರ ಫುಲ್ ಡಿಟೈಲ್ಸ್ ಇಲ್ಲಿದೆ.
- ಬಿರು ಬಿಸಿಲಲ್ಲಿ ರಚನಾ ರಂಗು.. ಡೆವಿಲ್ ದಚ್ಚುಗೆ ಬ್ಯೂಟಿ ಮೆಚ್ಚುಗೆ
- ದರ್ಶನ್ ಡೆಡಿಕೇಷನ್, ವ್ಯಕ್ತಿತ್ವಕ್ಕೆ ಡೆವಿಲ್ ಕ್ವೀನ್ ಫುಲ್ ಮಾರ್ಕ್ಸ್
- ರೊಮ್ಯಾಂಟಿಕ್ ಡ್ಯುಯೆಟ್ ಗೀತೆ.. ಶೂಟಿಂಗ್ ಕ್ಷಣಗಳ ಮೆಲುಕು
- ಸುಡುವ ಸೂರ್ಯ.. ಬಿಸಿಲ ಬೇಗೆ.. ಫುಕೆಟ್ನಲ್ಲಿ ಟಫ್ ಕ್ಲೈಮೇಟ್
ಡೆವಿಲ್.. ಡಿಬಾಸ್ ದರ್ಶನ್ ನಟನೆಯ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಹತ್ತಾರು ವಿಘ್ನಗಳ ನಡುವೆಯೂ ಕೂಡ ಶೂಟಿಂಗ್ ಮುಗಿಸಿ, ರಿಲೀಸ್‌ಗೆ ಸಜ್ಜಾಗಿರೋ ಸಿನಿಮಾ. ನಾಯಕನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲದೆಯೂ ಸಹ ಸಿನಿಮಾನ ರಿಲೀಸ್ ಮಾಡೋಕೆ ಚಿತ್ರತಂಡ ಯೋಜನೆ ರೂಪಿಸಿದ್ದು, ಅದರಂತೆ ಇದೇ ಡಿಸೆಂಬರ್ 12ಕ್ಕೆ ತೆರೆಗಪ್ಪಳಿಸುತ್ತಿದೆ ಡೆವಿಲ್ ಸಿನಿಮಾ.
ತಾರಕ್ ಚಿತ್ರದ ಬಳಿಕ ನಿರ್ದೇಶಕ ಪ್ರಕಾಶ್ ವೀರ್ ಮತ್ತೊಮ್ಮೆ ಡಿಬಾಸ್ ದರ್ಶನ್‌ಗೆ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾಗೆ ಅವರೇ ಬಂಡವಾಳ ಕೂಡ ಹೂಡಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಕಮರ್ಷಿಯಲ್ ಎಲಿಮೆಂಟ್ಸ್ ಇಟ್ಕೊಂಡು ಮಾಡಿರೋ ಈ ಸಿನಿಮಾ ಈ ಬಾರಿ ಫ್ಯಾನ್ಸ್‌ಗೆ ಫೆಸ್ಟ್ ರೀತಿ ಮಸ್ತ್ ಮಜಾ ಕೊಡೋ ನಿರೀಕ್ಷೆಯಿದೆ. ಹೌದು.. ಈಗಾಗ್ಲೇ ಟೀಸರ್ ಸ್ಯಾಂಪಲ್ಸ್ ಅತೀವ ನಿರೀಕ್ಷೆ ಮೂಡಿಸಿದ್ದು, ಸಾಂಗ್ಸ್ ಒಂದಕ್ಕಿಂತ ಒಂದು ಇಂಪ್ರೆಸ್ಸೀವ್ ಆಗಿವೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗ್ ಇರ್ಬೇಕ್ ಸಾಂಗ್ ಈಗಾಗ್ಲೇ ಎಲ್ಲರ ದಿಲ್ ದೋಚಿದೆ. ಇದೀಗ ಮತ್ತೊಂದು ರೊಮ್ಯಾಂಟಿಕ್ ಡುಯೆಟ್ ಸಾಂಗ್ ರಿಲೀಸ್ ಆಗಿದೆ. ಒಂದೇ ಒಂದು ಸಲ ಅನ್ನೋ ಈ ಹಾಡು ಸಾಹಿತ್ಯ, ಸಂಗೀತದ ಜೊತೆ ಗಾಯನದಿಂದಲೂ ಗಮನ ಸೆಳೆಯುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಯವರೆಗೂ ಹೀರೋಯಿನ್ ರಿವೀಲ್ ಆಗಿಲ್ಲ ಅಂತ ಗೊಣಗಾಡ್ತಿದ್ದ ಒಂದಷ್ಟು ಚಿತ್ರಪ್ರೇಮಿಗಳಿಗೆ ಇದ್ರಿಂದ ಉತ್ತರ ನೀಡಿದ್ದಾರೆ ಡೈರೆಕ್ಟರ್ ಪ್ರಕಾಶ್ ವೀರ್.
ಫುಕೆಟ್ ಐಲ್ಯಾಂಡ್‌ವೊಂದರಲ್ಲಿ ಚಿತ್ರಿಸಿರೋ ಈ ಹಾಡು ಸಖತ್ ಕಲರ್‌ಫುಲ್ ಆಗಿ ಮೂಡಿಬಂದಿದೆ. ಆದ್ರೆ ಶೂಟಿಂಗ್ ವೇಳೆ ಅದು ಅಷ್ಟು ಸುಲಭವಾಗಿ ಚಿತ್ರಿಸೋಕೆ ಆಗಿರಲಿಲ್ಲ. ಅದಕ್ಕಾಗಿ ಟೀಂ ಸಿಕ್ಕಾಪಟ್ಟೆ ಎಫರ್ಟ್ ಹಾಕಿದೆ. ಯಾಕಂದ್ರೆ ಅದಲ್ಲಿ ಸುಡುವ ಬಿಸಿಲಿತ್ತು. ಸುಡುವ ಸೂರ್ಯನ ಅಡಿ, ಬಿಸಿಲ ಬೇಗೆಯಲ್ಲಿ ಬೆಂದು, ಟಫ್ ವಾತಾವರಣದಲ್ಲಿ ಚಿತ್ರಿಸಿರೋ ಈ ಹಾಡು ಆ ಎಲ್ಲಾ ಕಷ್ಟವನ್ನು ಮರೆಸಿದೆ. ಅದನ್ನ ಸ್ವತಃ ನಾಯಕನಟಿ ರಚನಾ ರೈ ಟ್ವಿಟರ್ ಮೂಲಕ ಹೊರ ಹಾಕಿದ್ದಾರೆ.
ಡಿಬಾಸ್ ದರ್ಶನ್‌ನ ಹಾಡಿ ಹೊಗಳಿರೋ ಕರಾವಳಿಯ ಪುತ್ತೂರು ಮೂಲದ ಚೆಂದುಳ್ಳಿ ಚೆಲುವೆ ರಚನಾ ರೈ, ನಿಮ್ಮಂತಹ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡಿರುವುದು ಆಶೀರ್ವಾದವೇ ಸರಿ. ಸೆಟ್‌ನಲ್ಲಿ ಪ್ರತೀ ದಿನ ನಿಮ್ಮ ಗಮನ, ತಾಳ್ಮೆ ಹಾಗೂ ಆ ಅಚಲ ಸಮರ್ಪಣೆಯನ್ನ ನೋಡುವುದೇ ಒಂದು ರೀತಿಯ ಪಾಠವಾಗಿತ್ತು. ಪ್ರತಿಯೊಂದು ದೃಶ್ಯಕ್ಕೂ ಜೀವ ತುಂಬುತ್ತಿದ್ರಿ. ಕ್ಯಾಮೆರಾ ಹೊರತಾಗಿಯೂ ನೀವೊಬ್ಬ ಅದ್ಭುತ ವ್ಯಕ್ತಿ. ನಾ ಇಲ್ಲಿವರೆಗೂ ಕಂಡ ವ್ಯಕ್ತಿಗಳಲ್ಲಿ ನೀವು ನಿಜಕ್ಕೂ ಅತ್ಯದ್ಭುತ. ಸಹನಟನಾಗಿ ಅಷ್ಟೇ ಅಲ್ಲ, ಅದ್ಭುತ ಮನುಷ್ಯನಾಗಿರೋದಕ್ಕೆ ಧನ್ಯವಾದ. ನೀವು ದಿ ಬೆಸ್ಟ್ ಎಂದಿದ್ದಾರೆ.
ಬೀಚ್‌ನಲ್ಲಿನ ಶೂಟಿಂಗ್ ತಮಾಷೆಯಾಗಿರಲಿಲ್ಲ. ಕಠಿಣ ಹವಾಮಾನದಲ್ಲಿ ದೀರ್ಘಕಾಲದ ಚಿತ್ರೀಕರಣ ನಿಜಕ್ಕೂ ಗ್ರೇಟ್. ಆದ್ರೆ ಆ ಪ್ರಕೃತಿ, ಸೂರ್ಯ, ಮರಳು ಇಷ್ಟು ಅದ್ಭುತವಾಗಿ ಕಾಣುತ್ತದೆ ಅಂತ ಯಾರಿಗೂ ಗೊತ್ತಿರಲಿಲ್ಲ. ಈ ಹಾಡು ನಿಜಕ್ಕೂ ನನ್ನ ಹೃದಯವನ್ನು ಹಿಡಿದಿಟ್ಟುಕೊಂಡಿದೆ. ಕ್ಯಾಮೆರಾ ಹಿಂದಿನ ಉತ್ಸಾಹ ಈ ಹಾಡನ್ನ ಮತ್ತಷ್ಟು ಸುಂದರವಾಗಿಸಿದೆ. ಅದ್ಭುತ ಟೀಂಗೆ, ನಿಮ್ಮ ಡೆಡಿಕೇಷನ್‌ಗೆ ಧನ್ಯವಾದ. ಪ್ರೀತಿ ಮತ್ತು ಬೆಂಬಲ ಹೀಗೇ ಇರಲಿ ಎಂದಿದ್ದಾರೆ ಮಾಡ್ರನ್ ರಚ್ಚು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್