ರಾಮನಗರ ಕರಗ ಮಹೋತ್ಸವದಲ್ಲಿ ಮಾರ್ದನಿಸಿದ ‘ಡಿಬಾಸ್ ಡಿಬಾಸ್’ ಘೋಷಣೆಗೆ ಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ.. ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ನಟ ದರ್ಶನ್ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಎಲ್ಲೆಡೆ ಇರೋ ದಚ್ಚು ಡೈಹಾರ್ಡ್ ಫ್ಯಾನ್ಸ್‌ಗೆ ಕೆಲವು ಟಿಪ್ಸ್ ಕೊಡೋದ್ರ ಜೊತೆಗೆ ಕಿವಿಮಾತು ಕೂಡ ಹೇಳಿದ್ದಾರೆ.
ರಾಮನಗರದಲ್ಲಿ ಡಿಬಾಸ್ ಘೋಷಣೆ.. ಫ್ಯಾನ್ಸ್‌ಗೆ CM ಟಿಪ್ಸ್
ಪ್ರಯತ್ನ ವಿಫಲವಾಗಬಹುದು.. ಪ್ರಾರ್ಥನೆ ಅಲ್ಲ..
ಪ್ರಕರಣ ಕೋರ್ಟ್‌ನಲ್ಲಿದೆ.. ಕಾನೂನಿನಡಿ ಕೆಲಸ ಮಾಡ್ಬೇಕು..!
ತನ್ನ ಕಷ್ಟದ ದಿನಗಳನ್ನ ನೆನೆದ ಕನಕಪುರ ಹೀರೋ ಡಿಕೆ ಸಾಬ್
ಕನ್ನಡ ಚಿತ್ರರಂಗದಲ್ಲಿ ಸದ್ಯ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ನಟ ಯಾರು ಅಂದ್ರೆ ಅದು ಒನ್ ಅಂಡ್ ಓನ್ಲಿ ನಟ ದರ್ಶನ್. ಆದ್ರೆ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸಿಲುಕಿಕೊಂಡು, ಸದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲೂಟ ಸವಿಯುತ್ತಿರೋ ಡಿಬಾಸ್ ದರ್ಶನ್‌ಗೆ ಕಾಲಕ್ರಮೇಣ ಅಭಿಮಾನಿ ಬಳಗ ಕಡಿಮ ಆಗ್ತಾ ಬರ್ತಿದೆ. ಆದಾಗ್ಯೂ ಸಹ ಎಲ್ಲೇ ದೊಡ್ಡ ದೊಡ್ಡ ಕಾರ್ಯಕ್ರಮಗಳಾದ್ರೂ ಅಲ್ಲೊಂದಷ್ಟು ದಚ್ಚು ಫ್ಯಾನ್ಸ್ ತಮ್ಮ ನೆಚ್ಚಿನ ನಾಯಕನಟನ ಹೆಸರನ್ನ ಕೂಗುವ ಮೂಲಕ ಡಿಬಾಸ್ ಡಿಬಾಸ್ ಅಂತ ಕಿರಿಕಿರಿ ಮಾಡ್ತಾರೆ.
ಆ ಕಿರಿಕಿರಿ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೂ ತಪ್ಪಿಲ್ಲ. ಹೌದು.. ಈ ಹಿಂದೆ ಸಿಎಂ ಆಗಿ ತವರಿಗೆ ತೆರಳಿದ್ದ ಡಿಕೆಗೆ ಕನಕಪುರದಲ್ಲೇ ದಚ್ಚು ಫ್ಯಾನ್ಸ್ ಡಿಬಾಸ್ ಡಿಬಾಸ್ ಅಂತ ಕೂಗುವ ಮೂಲಕ ಇರಿಟೇಟ್ ಮಾಡಿದ್ರು. ಇದೀಗ ಅದೇ ಮತ್ತೊಮ್ಮೆ ಮರುಕಳಿಸಿದೆ. ರಾಮನಗರದಲ್ಲಿ ನಡೆದ ಕರಗ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ್ದ ಸಿಎಂ ಡಿಕೆಶಿ, ತಮ್ಮ ಮಾತು ಆರಂಭ ಮಾಡುವ ಮೊದಲೇ ಡಿಬಾಸ್ ಡಿಬಾಸ್ ಘೋಷಣೆಗಳು ಕೇಳಿಬಂದವು.
ಇದು ಪವಿತ್ರವಾದ ಸಭೆ. ನಿಮ್ಮ ಅಭಿಮಾನಕ್ಕೆ ನಾನು ಗೌರವ ಕೊಡುತ್ತೇನೆ. ಆದ್ರೆ ನೀವುಗಳು ಕೋರ್ಟ್ ವಿಚಾರ ತಂದು ನನ್ನ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಭಾವನೆ ನನಗೆ ಗೊತ್ತಿದೆ. ನಾನಿಲ್ಲಿ ಸಿಎಂ ಆಗಿರಬಹುದು. ಆದ್ರೆ ನಿಮ್ಮೆಲ್ಲರ ಸೇವಕ. ಮಿಗಿಲಾಗಿ ರಾಮನಗರ ಮನೆ ಮಗ. ಈ ನಿಮ್ಮ ಮಗನನ್ನ ಕಾಪಾಡಿಕೊಳ್ಳುವ ಕೆಲಸ ನೀವೇ ಮಾಡಬೇಕು ಎಂದರು.
ಡಿಬಾಸ್ ಘೋಷಣೆಗಳು ನಿರಂತರವಾಗಿ ಕೇಳಿಬರುತ್ತಲೇ ಇದ್ದ ಕಾರಣ, ಮೈಕ್ ಕೊಟ್ಟು ಬೇಸರದಿಂದ ಮಾತು ನಿಲ್ಲಿಸಿ, ಕೆಲ ಕಾಲ ಸುಮ್ಮನೆ ಕೂತು ಬಿಟ್ಟರು ಸಿಎಂ. ಅಲ್ಲದೆ, ನೀವು ಹೀಗೆ ಮಾಡಿ ಮಾಡಿಯೇ ಎಡವಟ್ ಆಗ್ತಿರೋದು ಅನ್ನೋದನ್ನ ಸೂಕ್ಷ್ಮವಾಗಿ ಹೇಳುವ ಕಾರ್ಯ ಮಾಡಿದ್ದಾರೆ ಮುಖ್ಯಮಂತ್ರಿಗಳು.
ಅದೇ ವೇದಿಕೆಯಲ್ಲಿ ಮಾತನಾಡುತ್ತಾ.. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ, ನೀವೂ ದೇವರಲ್ಲಿ ಪ್ರಾರ್ಥಿಸಿ. ಪ್ರಯತ್ನ ವಿಫಲವಾಗಬಹುದು.. ಆದ್ರೆ ಪ್ರಾರ್ಥನೆ ವಿಫಲವಾಗಲ್ಲ ಎಂದರು. ಹೌದು.. ಈ ಹಿಂದೆ ತಮಗೆ ಸಮಸ್ಯೆ ಆದಾಗ ಚಾಮುಂಡಿ ಬೆಟ್ಟದಲ್ಲಿ ಆಡಿದ್ದ ಮಾತುಗಳನ್ನ ನೆನಪಿಸಿಕೊಂಡರು. ನೀವು ಕೂಡ ತಾಯಿ ಚಾಮುಂಡಿಗೆ ಪ್ರಾರ್ಥನೆ ಮಾಡಿ. ಆ ತಾಯಿ ಒಳ್ಳೆಯದು ಮಾಡ್ತಾಳೆ ಅಂತ ದರ್ಶನ್ ಅಭಿಮಾನಿಗಳಿಗೆ ಸಿಎಂ ಡಿಕೆಶಿ ಟಿಪ್ಸ್ ಕೂಡ ಕೊಟ್ಟಿದ್ದಾರೆ.
ಸಿಎಂ ಮಾತು ಅಕ್ಷರಶಃ ಸತ್ಯ. ಕಾನೂನಿನ ಚೌಕಟ್ಟಿನಲ್ಲಿ ದರ್ಶನ್ ಕೇಸ್ ವಿಚಾರಣೆ ಆಗ್ತಿದೆ. ಅದನ್ನ ಸಿಎಂ ಆಗಲಿ, ಪಿಎಂ ಆಗಲಿ ವೈಯಕ್ತಿಕವಾಗಿ ಇತ್ಯರ್ಥ ಮಾಡುವಂಥದ್ದಲ್ಲ ಅನ್ನೋದನ್ನ ಮೊದಲು ಅಭಿಮಾನಿಗಳು ಅರ್ಥೈಸಿಕೊಳ್ಳಬೇಕಿದೆ. ಹೋದಲ್ಲೆಲ್ಲಾ ಅರ್ಥವಿಲ್ಲದೆ ಡಿಬಾಸ್ ಡಿಬಾಸ್ ಅಂತ ಕೂಗಿದ್ರೆ ಅದು ಬೇರೆಯದ್ದೇ ರೂಪ ಪಡೆದುಕೊಳ್ಳುತ್ತೆ. ಸಿಎಂಗೆ ಅಗೌರವ ತರೋದ್ರಿಂದ ದರ್ಶನ್ ಜೈಲಿಂದ ಬೇಗ ಮುಕ್ತರಾಗಲ್ಲ ಅನ್ನೋದ್ರ ಅರಿವು ನಿಮಗಿರಲಿ.
