ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿದ ನಟ ದರ್ಶನ್‌..!

ಜಾಮೀನು ಕನಸು ಚೂರು..ದರ್ಶನ್‌ಗೆ ಕೋರ್ಟ್‌ನಿಂದ ಶಾಕ್

Untitled design 2026 05 15T153930.110

ಸ್ಯಾಂಡಲ್‌ವುಡ್ ಸುಲ್ತಾನ್ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಸಿಕ್ಕಿರೋ ಅನಿರೀಕ್ಷಿತ ಶಾಕ್ ಏನು ಗೊತ್ತಾ..?ರೇಣುಕಾಸ್ವಾಮಿ ಕೇಸ್‌ನಲ್ಲಿ ಡಿ ಬಾಸ್ ಗೆ ರಿಲೀಫ್ ಸಿಗುತ್ತೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಈಗ ನಿರಾಸೆಯಾಗಿದೆ. ಕೋರ್ಟ್ ಕೊಟ್ಟಿರೋ ಆ ಒಂದು ವರ್ಷದ ಡೆಡ್‌ಲೈನ್ ದರ್ಶನ್ ಸಿನಿ ಕರಿಯರ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?ಚಿತ್ರೋದ್ಯಮಕ್ಕೆ ಆಗ್ತಿರೋ ನಷ್ಟ ಎಷ್ಟು? ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..

ಜೈಲಿನ ಕತ್ತಲಲ್ಲಿ ದಿನ ದೂಡುತ್ತಿರುವ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಈಗ ಒಂದು ವರ್ಷದ ಸುದೀರ್ಘ ಕಾಯುವಿಕೆಯ ಶಿಕ್ಷೆ ನೀಡಿದೆ. ಮುಕುಲ್ ರೋಹಟಗಿ ಅವರಂತಹ ಹಿರಿಯ ವಕೀಲರು ದರ್ಶನ್ ಪರವಾಗಿ ವಾದ ಮಂಡಿಸಿದರೂ, ಪ್ರಾಸಿಕ್ಯೂಟರ್ ಸಿದ್ಧಾರ್ಥ್ ಲೂತ್ರಾ ಅವರ “ಸಾಕ್ಷ್ಯಗಳ ಮೇಲೆ ಪ್ರಭಾವ” ಬೀರುವ ವಾದವೇ ಮೇಲುಗೈ ಸಾಧಿಸಿದೆ.

272 ಸಾಕ್ಷಿಗಳ ಬೃಹತ್ ಪಟ್ಟಿಯಲ್ಲಿ ಕನಿಷ್ಠ 60 ಜನರ ವಿಚಾರಣೆ ಮುಗಿಯುವವರೆಗೂ ಜಾಮೀನಿನ ಮಾತಿಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ. ಇದು ಕೇವಲ ಕಾನೂನು ಸಮರ ಮಾತ್ರವಲ್ಲ, ದರ್ಶನ್ ಎಂಬ ಬ್ರ್ಯಾಂಡ್ ಪಾಲಿಗೆ ಇದು ಅಗ್ನಿಪರೀಕ್ಷೆಯ ಕಾಲ. ಕ್ವಾರಂಟೈನ್ ಸೆಲ್‌ನ ಏಕಾಂತ, ಮನೆಯವರ ಭೇಟಿಗೆ ನಿರ್ಬಂಧ ಹೀಗೆ ತೆರೆಯ ಮೇಲಿನ ಸೂಪರ್ ಸ್ಟಾರ್ ಈಗ ತೆರೆಯ ಮರೆಯ ಕಠಿಣ ವಾಸ್ತವದ ನಡುವೆ ಸಿಲುಕಿದ್ದಾರೆ.

ದರ್ಶನ್ ಅವರ ಈ ಸುದೀರ್ಘ ಅನುಪಸ್ಥಿತಿ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ ಉಂಟುಮಾಡುತ್ತಿದೆ. ವಿಶ್ಲೇಷಕರ ಪ್ರಕಾರ, ದರ್ಶನ್ ಸಿನಿಮಾ ಎಂದರೆ ಕನಿಷ್ಠ 100 ರಿಂದ 150 ಕೋಟಿ ರೂಪಾಯಿಗಳ ವ್ಯವಹಾರ. ಸದ್ಯಕ್ಕೆ ದರ್ಶನ್ ಅಭಿನಯಿಸಿದ್ದ ‘ಡೆವಿಲ್’ ಚಿತ್ರದ ನಂತರ ಯಾವುದೇ ಸಿನಿಮಾ ರಿಲೀಸ್ ಗೆ ರೆಡಿ ಇಲ್ಲ. ಅರ್ಧಕ್ಕೆ ನಿಂತಿದೆ ಮತ್ತು ಘೋಷಣೆಯಾಗಿದ್ದ ನಾಲ್ಕೈದು ದೊಡ್ಡ ಬಜೆಟ್ ಸಿನಿಮಾಗಳು ಅತಂತ್ರ ಸ್ಥಿತಿಯಲ್ಲಿವೆ. ಕೇವಲ ನಿರ್ಮಾಪಕರಿಗೆ ಮಾತ್ರವಲ್ಲದೆ, ದರ್ಶನ್ ಸಿನಿಮಾವನ್ನೇ ನಂಬಿಕೊಂಡಿದ್ದ ನೂರಾರು ಕಾರ್ಮಿಕರು, ವಿತರಕರು ಮತ್ತು ಥಿಯೇಟರ್ ಮಾಲೀಕರಿಗೆ ಇದರಿಂದ ಸುಮಾರು 500 ಕೋಟಿಗೂ ಅಧಿಕ ನಷ್ಟ ಉಂಟಾಗುವ ಭೀತಿ ಇದೆ. ಕಿಂಗ್ ಇಲ್ಲದ ಸಾಮ್ರಾಜ್ಯದಂತೆ ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಈಗ ಕಳೆಗುಂದಿದೆ.

ಕನ್ನಡ ಚಿತ್ರರಂಗದಲ್ಲಿ ‘ಮಾಸ್’ ಸಿನಿಮಾಗಳಿಗೆ ಜೀವ ತುಂಬುತ್ತಿದ್ದ ದರ್ಶನ್ ಈಗ ಜೈಲು ಹಕ್ಕಿಯಾಗಿದ್ದು, ಉದ್ಯಮದ ಸ್ಟಾರ್ ಪವರ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಥಿಯೇಟರ್‌ಗಳಲ್ಲಿ ಶಿಳ್ಳೆ-ಚಪ್ಪಾಳೆಗಳ ಸದ್ದು ಅಡಗಿ ಹೋಗಿದೆ. ಬಿಗ್ ಬಜೆಟ್ ಸಿನಿಮಾಗಳು ಸೆಟ್ಟೇರಲು ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ದರ್ಶನ್ ಇಲ್ಲದೆ ಬೇರೆ ನಟರ ಸಿನಿಮಾಗಳಿಗೆ ಅವಕಾಶ ನೀಡಿದರೂ, ಅವರದ್ದೇ ಆದ ಒಂದು ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ‘ಚಾರ್ಮ್’ ಮರೆಯಾಗಿದೆ. ಕಾನೂನಿನ ಹೋರಾಟದಲ್ಲಿ ದರ್ಶನ್ ಗೆದ್ದು ಬರ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ಜೈಲಿನಲ್ಲಿ ಕಳೆಯುವ ಪ್ರತಿ ದಿನವೂ ಕನ್ನಡ ಚಿತ್ರರಂಗದ ಆರ್ಥಿಕತೆಗೆ ಅಶನಿಪಾತದಂತಿದೆ.

ಕೀರ್ತಿಗಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version